Mediterranean Diet
Reading Time: 3 minutes

ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಲಿಪಿಡ್‌ಗಳ ಅಸಹಜ ಮಟ್ಟವನ್ನು ಡಿಸ್ಲಿಪಿಡೀಮಿಯಾ ಎಂದು ಗುರುತಿಸಲಾಗಿದೆ. ದೇಹದ ಸಹಜ ಕಾರ್ಯವೈಖರಿಗೆ ಈ ಲಿಪಿಡ್‌ಗಳ ಅಗತ್ಯವಿದ್ದರೂ, ಇದರ ಅಸಹಜ ಅಧಿಕ ಮಟ್ಟವು ಹೃದ್ರೋಗದ ಅಪಾಯವನ್ನು ತಂದೊಡ್ಡುತ್ತದೆ.[1]

ಡಿಸ್ಲಿಪಿಡೀಮಿಯಾಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಕೊಲೆಸ್ಟರಾಲ್ – ಕಡಿಮೆ ಮಾಡುವ ಔಷಧಿಗಳನ್ನು ಕೊಡಲಾಗುತ್ತದೆ. ಅದಾಗ್ಯೂ, ರಕ್ತದಲ್ಲಿ ಆರೋಗ್ಯಕರ ಮಟ್ಟದ ಕೊಲೆಸ್ಟರಾಲನ್ನು ಕಾಪಾಡಿಕೊಳ್ಳವಲ್ಲಿ ಆಹಾರಕ್ರಮ ಪ್ರಮುಖ ಪಾತ್ರ ವಹಿಸುತ್ತದೆ.[2] ನಿಮ್ಮ ಆಹಾರಕ್ರಮವನ್ನು ಮೆಡಿಟರೇನಿಯನ್ ಆಹಾರಕ್ರಮಕ್ಕೆ ಬದಲಾಯಿಸಿಕೊಳ್ಳುವುದರಿಂದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಅಧ್ಯಯನಗಳು ಹೇಳುತ್ತವೆ.[3] ಡಿಸ್ಲಿಪಿಡೀಮಿಯಾ ಸಮಸ್ಯೆ ಇದ್ದಾಗ ಏನಾಗುತ್ತದೆ, ಮೆಡಿಟರೇನಿಯನ್ ಆಹಾರಕ್ರಮ ಎಂದರೇನು, ಹಾಗೂ ಕೊಲೆಸ್ಟರಾಲ್ ಕಡಿಮೆ ಮಾಡಲು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಬರಹದ ಮೂಲಕ ನಾವು ತಿಳಿಯಲಿದ್ದೇವೆ.

ಡಿಸ್ಲಿಪಿಡೀಮಿಯಾವಿದ್ದಾಗ ದೇಹದೊಳಗೆ ಏನಾಗುತ್ತದೆ?

ಡಿಸ್ಲಿಪಿಡೀಮಿಯಾ ಇದ್ದಾಗ, ನಿಮ್ಮ ಲಿಪಿಡ್ ಪ್ರೊಫೈಲ್ ಈ ಕೆಳಗಿನಂಶಗಳನ್ನು ಹೊಂದಿರುತ್ತದೆ:[2]

  • ರಕ್ತದಲ್ಲಿನ ಒಟ್ಟಾರೆ ಕೊಲೆಸ್ಟರಾಲ್ ಮಟ್ಟದಲ್ಲಿ ಹೆಚ್ಚಳ
  • ಲೋ ಡೆನ್ಸಿಟಿ ಲಿಪೊಪ್ರೋಟೀನ್‌ (LDL) ಮಟ್ಟದಲ್ಲಿ ಹೆಚ್ಚಳ
  • ಟ್ರೈಗ್ಲಿಸರೈಡ್‌ಗಳ ಮಟ್ಟದಲ್ಲಿ ಹೆಚ್ಚಳ
  • ಹೈ ಡೆನ್ಸಿಟಿ ಲಿಪೊಪ್ರೋಟೀನ್‌ (HDL) ನ ಕಡಿಮೆ ಮಟ್ಟ

LDL ಅನ್ನು ಕೆಟ್ಟ ಕೊಲೆಸ್ಟರಾಲ್ ಎಂದು ಹೇಳಲಾಗುತ್ತದೆ, ಹಾಗೆಯೇ HDL ಅನ್ನು ಒಳ್ಳೆ ಕೊಲೆಸ್ಟರಾಲ್ ಎಂದು ಕರೆಯಲಾಗುತ್ತದೆ.[1] LDL ಮತ್ತು ಟ್ರೈಗ್ಲಿಸರೈಡ್‌ ಮಟ್ಟದ ಹೆಚ್ಚಳ ಆರ್ಟರಿಗಳಲ್ಲಿ ಕೊಬ್ಬು ಉಳಿದುಕೊಳ್ಳಲು ಕಾರಣವಾಗುತ್ತದೆ. ಪ್ಲಾಕ್‌ ಎಂದು ಕರೆಯಲ್ಪಡುವ ಆ ಕೊಬ್ಬು, ಕ್ರಮೇಣ ಆರ್ಟರಿಗಳನ್ನು ಕಿರಿದಾಗಿಸಿ ಅಥೆರೊಸ್ಕ್ಲೀರೋಸಿಸ್ (ಆರ್ಟಿರಿಗಳು ಗಟ್ಟಿಯಾಗುವಿಕೆ) ಗೆ ಎಡೆಮಾಡಿಕೊಡುತ್ತದೆ. ಅಂತಿಮವಾಗಿ, ಇದು ಹೃದಯಾಘಾತ, ಪಾರ್ಶ್ವವಾಯು ಅಥವಾ ಬೇರೆ ಹೃದ್ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಮತ್ತೊಂದು ಕಡೆ, ಒಳ್ಳೆ ಕೊಲೆಸ್ಟರಾಲ್ ಆದ HDL, ಕಾಪಾಡುವ ಗುಣ ಹೊಂದಿದೆ. ಆರ್ಟರಿಗಳಲ್ಲಿ ಕಟ್ಟಿಕೊಂಡಿರುವ ಪ್ಲಾಕ್‌ಗಳನ್ನು ತೆರುವುಗೊಳಿಸಲು ಇದು ಸಹಾಯ ಮಾಡುತ್ತದೆ.[1] ನಿಯಮಿತ ವ್ಯಾಯಾಮದ ಜೊತೆಗೆ, ಡಾಕ್ಟರ್‌ಗಳು ಸೂಚಿಸಿದ ಸಮತೋಲನ ಆಹಾರಕ್ರಮವನ್ನು ಅನುಸರಿಸುವುದರಿಂದ ಡಿಸ್ಲಿಪಿಡೀಮಿಯಾವನ್ನು ನಿಯಂತ್ರಣದಲ್ಲಿಡಬಹುದಾಗಿದೆ.[2]

ಮೆಡಿಟರೇನಿಯನ್ ಆಹಾರಕ್ರಮ ಎಂದರೇನು?

ಈ ಆಹಾರಕ್ರಮವು ಮೆಡಿಟರೇನಿಯನ್ ದೇಶಗಳಾದ ಗ್ರೀಸ್ ಮತ್ತು ಇಟಲಿಯಲ್ಲಿ ವಾಸಿಸುವವರ ಆಹಾರಕ್ರಮದ ಹೋಲಿಕೆ ಹೊಂದಿರುವ ಕಾರಣ ಇದನ್ನು ಮೆಡಿಟರೇನಿಯನ್ ಆಹಾರಕ್ರಮವೆಂದು ಹೆಸರಿಸಲಾಗಿದೆ. ಇದೊಂದು ಆರೋಗ್ಯಕರ ಆಹಾರಕ್ರಮವಾಗಿದ್ದು, ಸರಳವಾದ ಕಾರ್ಬೋಹೈಡ್ರೇಟ್‌ಗಳನ್ನು, ಆರೋಗ್ಯಕರ ಕೊಬ್ಬು, ಹೆಚ್ಚು ನಾರಿನಂಶ ಮತ್ತು ಹೆಚ್ಚು ಪ್ರೋಟೀನ್‌ಗಳನ್ನು ಒಳಗೊಂಡಿದೆ (ಕಡಿಮೆ ಕೊಬ್ಬು ಇಲ್ಲವೇ ಕೊಬ್ಬು ಇಲ್ಲದ, ಜೊತೆಗೆ ಪ್ರೋಟೀನ್‌ಗಳು ಹೇರಳವಾಗಿರುವ ಆಹಾರಗಳು).[4,5] ಮೆಡಿಟರೇನಿಯನ್ ಆಹಾರಕ್ರಮದಲ್ಲಿ ಕಂಡುಬರುವ ಪ್ರಮುಖ ಪದಾರ್ಥಗಳು ಈ ಕೆಳಗಿನಂತಿವೆ:[6]

  • ತಾಜಾ ಹಣ್ಣು ಮತ್ತು ತರಕಾರಿಗಳು
  • ಬೇಳೆ (ಕಾಳುಗಳು ಮತ್ತು ಲೆನ್ಟಿಲ್ಸ್)
  • ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆ
  • ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನು
  • ಬಾದಾಮಿ, ಹೇಜೆಲ್‌ನಟ್ಸ್, ಮತ್ತು ವಾಲ್‌ನಟ್ಸ್‌ನಂತಹ ಬೀಜಗಳು
  • ಧಾನ್ಯಗಳು ಮತ್ತು ಪಿಷ್ಟ ತರಕಾರಿಗಳು
  • ಕೋಳಿ ಮಾಂಸ (ವೈಟ್ ಮೀಟ್)
  • ಡೈರಿ ಪದಾರ್ಥಗಳು ಮತ್ತು ಮೊಟ್ಟೆ

ಪ್ರತಿಯೊಂದು ಆಹಾರ ಒದಗಿಸುವ ಅಗತ್ಯ ಪೋಷಕಾಂಶಗಳ ಮೇಲೆ ಅದರ ಪ್ರಮಾಣ ಅವಲಂಬಿತವಾಗಿರುತ್ತದೆ. ಪಾಲಕ್‌, ಗಡ್ಡೆಕೋಸು, ಟೊಮ್ಯಾಟೋ, ಮತ್ತು ಕಿತ್ತಳೆಯಂತಹ ತರಹೇವಾರಿ ಹಣ್ಣು ಮತ್ತು ತರಕಾರಿಗಳನ್ನು ಕೂಡ ನೀವು ಸೇರಿಸಬಹುದು. ಕಾಳುಗಳು, ಬಟಾಣಿ, ಲೆನ್ಟಿಲ್ಸ್, ಬೇಳೆ, ಕಡಲೆ ಇತ್ಯಾದಿ ಬೇಳೆಕಾಳುಗಳು ಈ ಆಹಾರಕ್ರಮದ ಪ್ರಮುಖ ಅಂಶಗಳಾಗಿವೆ. ಇವುಗಳು ಸೂಕ್ಷ್ಮ ಪೋಷಕಾಂಶಗಳನ್ನು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತವೆ. ಅಡುಗೆ ಮಾಡುವಾಗ, ಕಡಿಮೆ ಸಂಸ್ಕರಣೆಗೊಳಪಟ್ಟಿರುವ ಮತ್ತು ಅನ್‌ಸ್ಯಾಚುರೇಟೆಡ್‌ ಕೊಬ್ಬುಗಳನ್ನು ಹೊಂದಿರುವ ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆಯನ್ನು ಬಳಸಿ. ಊಟಗಳ ನಡುವೆ ಬಾದಾಮಿ, ವಾಲ್‌ನಟ್ಸ್‌ನಂತಹ ಬೀಜಗಳನ್ನು ತಿನ್ನಿ. ಮೀನುಗಳಲ್ಲಿ ಸಿಗುವ ಒಮೇಗಾ-3 ಕೊಬ್ಬಿನಾಮ್ಲವು ಆರೋಗ್ಯಕರ ಕೊಬ್ಬಾಗಿದ್ದು, ನಿಮ್ಮ ಒಳ್ಳೆ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.[4,5,7]

ಮೆಡಿಟರೇನಿಯನ್ ಆಹಾರಕ್ರಮ ಹೇಗೆ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ?

ಮೆಡಿಟರೇನಿಯನ್ ಆಹಾರಕ್ರಮದ ಕುರಿತು ಸಮಾಲೋಚನೆ ನಡೆಸಿದ ವಿಜ್ಞಾನಿಗಳು, ಈ ಕೆಳಗಿನ ಕೆಲವು ಪ್ರಮುಖ ಅಂಶಗಳನ್ನು ಪತ್ತೆ ಮಾಡಿದ್ದಾರೆ:[7,8]

  • ಸ್ಯಾಚುರೇಟೆಡ್‌ ಕೊಬ್ಬುಗಳ ಸೇವನೆ ಕಡಿಮೆ ಆಗುವುದರಿಂದ ಕೊಲೆಸ್ಟರಾಲ್ ಮಟ್ಟ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಮೆಡಿಟರೇನಿಯನ್ ಆಹಾರಕ್ರಮದಲ್ಲಿ, ಸ್ಯಾಚುರೇಟೆಡ್‌ ಕೊಬ್ಬುಗಳಿಗೆ ಬದಲಾಗಿ ನಟ್ಸ್, ಸೀಡ್ಸ್ ಹಾಗೂ ಸಾಲ್ಮಾನ್‌, ಮ್ಯಾಕೆರೆಲ್ ನಂತಹ ಮೀನು ಮತ್ತು ಓಟ್ಸ್, ಬಾರ್ಲಿ, ರಾಗಿ ಮತ್ತು ಬ್ರೌನ್ ರೈಸ್‌ನಂತಹ ಧಾನ್ಯಗಳನ್ನು ಬಳಸಲಾಗುತ್ತದೆ. ಈ ಆಹಾರಕ್ರಮದ ಪರಿಣಾಮವು ಕೊಲೆಸ್ಟರಾಲನ್ನು ಕಡಿಮೆ ಮಾಡಲು ತೆಗೆದುಕೊಳ್ಳುವ ಔಷಧಿಗಳಿಗೆ ಸಮನಾಗಿದೆ ಎಂದು ಕೆಲವು ಅಧ್ಯಯನಗಳ ಮೂಲಕ ತಿಳಿದುಬಂದಿದೆ. ಮೆಡಿಟರೇನಿಯನ್ ಆಹಾರಕ್ರಮದಲ್ಲಿ, ಪಾಲಿ ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳು ಒಳ್ಳೆ ಕೊಲೆಸ್ಟರಾಲ್ ಮಟ್ಟವನ್ನು ಏರಿಸಿ, ಟ್ರೈಗ್ಲಿಸರೈಡ್‌ ಮಟ್ಟವನ್ನು ಇಳಿಸುತ್ತವೆ.[7]
  • LDL ರಿಸೆಪ್ಟರ್‌ ಅನ್ನು ಕೆಳಮಟ್ಟಕ್ಕಿಳಿಸುವ ಮೂಲಕ ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಪ್ರಸ್ತಾಪಿಸಿದ್ದಾರೆ. ಕೊಲೆಸ್ಟರಾಲನ್ನು ಕರುಳು ಕಡಿಮೆ ಹೀರಿಕೊಳ್ಳುವುದರಿಂದ, LDL ಉಳಿದುಕೊಳ್ಳುವ ಪ್ರಮಾಣ ಕಡಿಮೆ ಆಗಿ, ಕೆಟ್ಟ ಕೊಲೆಸ್ಟರಾಲ್ ಮಟ್ಟ ತಗ್ಗುತ್ತದೆ ಎಂದು ಕೆಲವು ಪ್ರಾಣಿಗಳ ಮೇಲೆ ಮೆಡಿಟರೇನಿಯನ್ ಆಹಾರಕ್ರಮವನ್ನು ಪ್ರಯೋಗ ಮಾಡಿದಾಗ ತಿಳಿದುಬಂದಿದೆ.[8]
  • ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುವುದು ಮೆಡಿಟರೇನಿಯನ್ ಆಹಾರಕ್ರಮದ ಪ್ರಮುಖ ಅಂಶವಾಗಿದೆ. ಈ ಆಹಾರಕ್ರಮಕ್ಕೆ ಬದಲಾಗುವುದರಿಂದ ರಕ್ತನಾಳಗಳಲ್ಲಿ ಪ್ಲಾಕ್ ಕಟ್ಟಿಕೊಳ್ಳುವುದನ್ನು ತಪ್ಪಿಸಬಹುದು. ಆ ಮೂಲಕ ಹೃದಯಾಘಾತದ ಅಪಾಯವನ್ನು ದೂರ ಮಾಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಹಾರಕ್ರಮವನ್ನು ಜೀವನವಿಡೀ ಮುಂದುವರೆಸುವುದರಿಂದ ಹೆಚ್ಚೆಚ್ಚು ಲಾಭ ಪಡೆಯಬಹುದಾಗಿದೆ.[7]

ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಮೆಡಿಟರೇನಿಯನ್ ಆಹಾರಕ್ರಮಕ್ಕೆ ತೊಡಗಿಸಿಕೊಳ್ಳುವುದಕ್ಕೂ ಮೊದಲು ನಿಮ್ಮ ಡಾಕ್ಟರ್ ಜೊತೆ ಒಮ್ಮೆ ಮಾತನಾಡುವುದು ಒಳ್ಳೆಯದು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಆರೋಗ್ಯಕರ ಆಹಾರವನ್ನು ಆರಿಸಿಕೊಳ್ಳಿ, ಕೊಲೆಸ್ಟರಾಲ್ ಮಟ್ಟದ ಹೆಚ್ಚಳದಿಂದ ಕಾಪಾಡಿಕೊಳ್ಳಿ; ಮೆಡಿಟರೇನಿಯನ್ ಆಹಾರಕ್ರಮಕ್ಕೆ ಜೈ ಅನ್ನಿ.

ಉಲ್ಲೇಖಗಳು:

  1. Hormone Health Network. Dyslipidemia [Internet]. [updated 2018 May; cited 2020 Jan 13]. Available from: https://www.hormone.org/diseases-and-conditions/dyslipidemia.
  2. Ahmed SM, Clasen ME, Donnelly JF. Management of dyslipidemia in adults. Am Fam Physician. 1998 May 1;57(9):2192-2204.
  3. Johns Hopkins Medicine. High cholesterol: prevention, treatment, and research [Internet]. [cited 2020 Jan 13]. Available from: https://www.hopkinsmedicine.org/health/conditions-and-diseases/high-cholesterol/high-cholesterol-prevention-treatment-and-research.
  4. Johns Hopkins Medicine. ABCs of eating smart for a healthy heart [Internet]. [cited 2020 Jan 13]. Available from: https://www.hopkinsmedicine.org/health/wellness-and-prevention/abcs-of-eating-smart-for-a-healthy-heart.
  5. Eat Healthy. Cholesterol, triglycerides and the Mediterranean diet pattern [Internet]. [cited 2020 Jan 13]. Available from: https://www.healtheuniversity.ca/EN/DiabetesCollege/Documents/S3C4_MediterraneanDiet.pdf.
  6. Cleveland Clinic. The Mediterranean diet [Internet]. [updated 2017 Sep 1; cited 2020 Jan 13]. Available from: https://my.clevelandclinic.org/health/articles/16037-mediterranean-diet.
  7. Tosti V, Bertozzi B, Fontana L. Health benefits of the Mediterranean diet: metabolic and molecular mechanisms. J Gerontol A Biol Sci Med Sci. 2018 Mar 2;73(3):318-326. DOI: 10.1093/gerona/glx227.
  8. Richard C, Couture P, Desroches S, Benjannet S, Seidah NG, Lichtenstein AH, et al. Effect of the Mediterranean diet with and without weight loss on surrogate markers of cholesterol homeostasis in men with the metabolic syndrome. Br J Nutr. 2012 Mar;107(5):705-11. DOI: 10.1017/S0007114511003436.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.