sleep weight loss
Reading Time: 2 minutes

ಕಳೆದು ಎರಡು ತಿಂಗಳುಗಳಿಂದ ನೀವು ಪ್ರತಿದಿನ ಎರಡು ಹಣ್ಣು ಮತ್ತು ಸಲಾಡ್‌ಗಳನ್ನು ತಿನ್ನುತ್ತಿದ್ದೀರಿ ಎಂದುಕೊಳ್ಳೋಣ. ಜೊತೆಗೆ ನೀವು ತಿನ್ನುವುದನ್ನು ಕಡಿಮೆ ಮಾಡಿದ್ದೀರಿ. ಅದಲ್ಲದೇ, ವಾರದಲ್ಲಿ ಆರು ದಿನ ವ್ಯಾಯಾಮ ಕೂಡ ಮಾಡುತ್ತಿದ್ದೀರಿ. ಸಾಕಷ್ಟು ಪ್ರಮಾಣದ ನೀರನ್ನು ಸಹ ಕುಡಿಯುತ್ತಿದ್ದೀರಿ. ಇಷ್ಟೆಲ್ಲಾ ಮಾಡಿದರೂ ನಿಮ್ಮನ್ನು ತೂಗುವ ತಕ್ಕಡಿ ಬೇರೆಯ ಕತೆಯನ್ನೇ ಹೇಳುತ್ತಿದೆ. ಅಂದರೆ ತೂಕ ಕಳೆದುಕೊಳ್ಳುವ ಬದಲು ನೀವು ಒಂದೆರಡು ಕಿಲೋ ಹೆಚ್ಚಾಗಿದ್ದೀರಿ. 

ಹೀಗೇಕೆ ಆಗುತ್ತಿದೆ ಎಂದು ನೀವೀಗ ಖಂಡಿತವಾಗಿ ನಿಮ್ಮ ತಲೆಕೆರೆದು ಕೊಳ್ಳುತ್ತಿರುತ್ತೀರಿ. ಆದರೆ, ಇದಕ್ಕಿರುವ ಕಾರ ಯಾರೂ ನಿರೀಕ್ಷೆ ಮಾಡದಿರುವಂತದ್ದು: ಅದೇ ನಿದ್ದೆಯ ಕೊರತೆ. 

ಆಹಾರ ಕ್ರಮ ಹಾಗೂ ವ್ಯಾಯಾಮದಂತೆ ನಿದ್ದೆಯೂ ಕೂಡ ಆರೋಗ್ಯಕರ ಜೀವನಶೈಲಿಯ ಆಧಾರಸ್ತಂಭವಾಗಿದೆ. ನೀವು ಬೊಜ್ಜನ್ನು ಕರಗಿಸಬೇಕೆಂದರೆ, ಆರೋಗ್ಯಕರ ಆಹಾರವನ್ನು ತಿನ್ನುವುದು ಮತ್ತು ವ್ಯಾಯಾಮ ಮಾಡಿದರಷ್ಟೇ ಸಾಲದು, ಕಣ್ತುಂಬ ನಿದ್ದೆಯನ್ನೂ ಮಾಡಬೇಕು.   

ಕ್ರೆಡಿಟ್ ಕಾರ್ಡ್ ಸಾಲದಂತೆ, ನಿದ್ದೆಯ ಸಾಲವು ದಿನಗಳೆದಂತೆ ನಿಮ್ಮ ಜೀವನವನ್ನು ಸರ್ವನಾಶ ಮಾಡಿಬಿಡಬಹುದು.

ಮೊದಲಿಗೆ, ನಿದ್ರಾಹೀನತೆ ಮತ್ತು ತೂಕ ಹೆಚ್ಚಳದ ನಡುವೆ ಇರುವ ಸಂಬಂಧ ಏನು ಎಂದು ತಿಳಿದುಕೊಳ್ಳೋಣ. 

ನಿದ್ರಾಹೀನತೆಯು ನಿಮ್ಮ ಹಾರ್ಮೋನುಗಳ ಮೇಲೆ, ವಿಶೇಷವಾಗಿ ನಿಮ್ಮ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತದೆ. ಗ್ರೆಲಿನ್ ಒಂದು ಹಸಿವಿನ ಹಾರ್ಮೋನ್‌ ಆಗಿದ್ದು, ನಿಮಗೆ ಏನಾದರು ತಿನ್ನುವಂತೆ ತಿಳಿಸುತ್ತದೆ. ಮತ್ತೊಂದೆಡೆ ಲೆಪ್ಟಿನ್ ಎಂಬುದು ತೃಪ್ತಿಯ ಹಾರ್ಮೋನ್ ಆಗಿದ್ದು ಅದು ತಿನ್ನುವುದನ್ನು ನಿಲ್ಲಿಸುವಂತೆ ಆದೇಶಿಸುತ್ತದೆ. ನೀವು ನಿದ್ದೆಯಿಂದ ವಂಚಿತರಾದಾಗ, ನಿಮ್ಮ ದೇಹವು ಹೆಚ್ಚು ಗ್ರೆಲಿನ್ ಮತ್ತು ಕಡಿಮೆ ಲೆಪ್ಟಿನನ್ನು ಉತ್ಪಾದಿಸುತ್ತದೆ. ಆದ್ದರಿಂದ ನಿದ್ದೆ ಕಡಿಮೆಯಾದಾಗ ನಿಮ್ಮ ಹಸಿವು ಹೆಚ್ಚಾಗುವುದು, ಆ ಮೂಲಕ ದೇಹಕ್ಕೆ ಸೇರುವ ಕ್ಯಾಲರಿ ಪ್ರಮಾಣ ಕೂಡ ಹೆಚ್ಚುವುದು. ಅದಲ್ಲದೇ, ತಡರಾತ್ರಿಯಲ್ಲಿ ಬಾಯಾಡಿಸುವುದರಿಂದ ನಿಮ್ಮ ತೂಕದ ಮೇಲೆ ಸುಲಭವಾಗಿ ಇನ್ನೊಂದಷ್ಟು ಕೆಜಿ ತೂಕ ಸೇರಬಹುದು. 

ಇಷ್ಟೇ ಅಲ್ಲ, ನಿದ್ದೆಯ ಕೊರತೆಯು ನಿಮ್ಮ ಆಹಾರದ ಆಯ್ಕೆಗಳ ಮೇಲೂ ಪರಿಣಾಮ ಬೀರುತ್ತದೆ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಮತ್ತು ಸ್ವಯಂ-ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ, ನಿಮ್ಮ ಮೆದುಳಿನಲ್ಲಿರುವ ಮುಂಭಾಗದ ಲೋಬ್‌ನ ಚಟುವಟಿಕೆಯು ಕಡಿಮೆಯಾಗುತ್ತದೆ. ಇದಲ್ಲದೇ, ನಿದ್ರಾಹೀನತೆಯಿಂದ ಒತ್ತಡದ ಹಾರ್ಮೋನ್‌ ಆದ ಕಾರ್ಟಿಸೋಲ್‌ನ ಮಟ್ಟ ಕೂಡ ಹೆಚ್ಚುತ್ತದೆ. ಕಾರ್ಟಿಸೋಲ್‌ ಮಟ್ಟ ಹೆಚ್ಚಾದಾಗ ನಿಮಗೆ ಕೊಬ್ಬು ಮತ್ತು ಸಕ್ಕರೆ ತುಂಬಿದ ಆಹಾರ ತಿನ್ನುವ ಬಯಕೆಗಳು ಹೆಚ್ಚುತ್ತವೆ. ಅದಕ್ಕಾಗಿಯೇ, ರಾತ್ರಿಯಲ್ಲಿ ಸಾಧಾರಣ ನಿದ್ದೆಯಾಗಿದ್ದರೆ, ಹಗಲಿನಲ್ಲಿ ಐಸ್‌ಕ್ರೀಮ್‌ ಅಥವಾ ಚಿಪ್ಸ್‌ಗಳನ್ನು ಬೇಡವೆಂದು ಹೇಳಲು ಮನಸ್ಸಾಗುವುದಿಲ್ಲ.

ನಿದ್ದೆ ಮತ್ತು ಆಹಾರ ಕ್ರಮದ ಮತ್ತೊಂದು ಕೊಂಡಿಯೆಂದರೆ ಇನ್ಸುಲಿನ್ ಪ್ರತಿರೋಧ ಹೆಚ್ಚುವುದು. ನಿದ್ದೆಯ ಕೊರತೆಯಿಂದ ಥೈರಾಯಿಡ್ ಉತ್ತೇಜಿಸುವ ಹಾರ್ಮೋನ್ (ಟಿಎಸ್‌ಹೆಚ್‌) ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಇನ್ಸುಲಿನ್ ಸೂಕ್ಷ್ಮತೆ ಕಡಿಮೆಯಾಗಿ, ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಹೆಚ್ಚುತ್ತದೆ. ನಿಮ್ಮ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿರೋಧವನ್ನು ಒಡ್ಡಿದಾಗ, ಹೆಚ್ಚಿನ ಸಕ್ಕರೆಯು ರಕ್ತಪ್ರವಾಹದಲ್ಲಿ ಉಳಿಯುತ್ತದೆ. ಈ ಹೆಚ್ಚುವರಿ ಸಕ್ಕರೆಯು ಕೊನೆಗೆ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಕೂಡಿಕೊಳ್ಳುತ್ತದೆ. 

ನಿದ್ದೆಯ ಕೊರತೆಯಿಂದಾಗಿ ಹಗಲು ಹೊತ್ತಿನಲ್ಲಿ ನೀವು ಹೆಚ್ಚು ಹುರುಪಿನಿಂದ ಇರುವುದಿಲ್ಲ. ಆದ್ದರಿಂದ ನಿಮಗೆ ವ್ಯಾಯಾಮ ಮಾಡಲು ಯಾವುದೇ ಮನಸ್ಸಾಗಲಿ, ಪ್ರೇರೇಪಣೆಯಾಗಲಿ ಇರುವುದಿಲ್ಲ. ದೈಹಿಕ ಚಟುವಟಿಕೆಯ ಕೊರತೆಯು, ತೂಕ ಇಳಿಸಿಕೊಳ್ಳುವ ನಿಮ್ಮ ಪ್ರಯಾಣಕ್ಕೆ ದೊಡ್ಡ ತಡೆಗೋಡೆಯಾಗಬಹುದು.

ನಿದ್ದೆಯ ಕೊರತೆಯು ಹೆಚ್ಚುವರಿ ತೂಕವನ್ನು ಇಳಿಸುವಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈಗ ನೀವು ಅರಿತಿದ್ದೀರಿ, ನೀವು ಸಣ್ಣಗಾಗಲು ಆ ಎಂಟು ಗಂಟೆಗಳ ನಿದ್ದೆ ಎಷ್ಟು ಮುಖ್ಯ ಎಂಬುದನ್ನು ನೀವೀಗ ತಿಳಿಯಬಹುದು.

ಅನಿಯಮಿತವಾದ ಕೆಲಸದ ಸಮಯ, ಕೆಲಸದ ಗಡುವು, ತಡವಾದ ಊಟ, ಮತ್ತು ಇಲೆಕ್ಟ್ರಾನಿಕ್ ಗ್ಯಾಜೆಟಗಳ ಅತಿಯಾದ ಬಳಕೆ ನಿಮ್ಮ ನಿದ್ದೆಗೆ ಹೇಗೆ ಅಡ್ಡಿಯಾಗಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಹಾಗಾಗಿ ನಾವು ಕೆಲವು ಸಲಹೆಗಳೊಂದಿಗೆ ಬಂದಿದ್ದೇವೆ, ಸಣ್ಣಪುಟ್ಟ ಹೊಂದಾಣಿಕೆ ಮಾಡಿಕೊಂಡು, ಈ ಸಮಸ್ಯೆಗಳ ಸಾಗರವನ್ನು ಈಜಿ ದಡಸೇರಲು ಈ ಸಲಹೆಗಳು ಅನುವು ಮಾಡಿಕೊಡುತ್ತವೆ.

  • ಸಂಜೆ 5ರ ನಂತರ ಚಹಾ ಅಥವಾ ಕಾಫಿಯನ್ನು ದೂರವಿಡುವುದು ತುಂಬಾ ಒಳ್ಳೆಯದು. ಕೆಫಿನ್ ಅಂಶವನ್ನು ಹೊಂದಿರುವಂತಹ ಈ ಪಾನೀಯಗಳು ತಡರಾತ್ರಿಯವರೆಗೆ ಎಚ್ಚರವಿರುವಂತೆ ಮಾಡುತ್ತವೆ. ಬಿಸಿ ಬಿಸಿಯಾಗಿ ಏನನ್ನಾದರೂ ಕುಡಿಯುವ ಮನಸಾದರೆ, ಹಾಲು ಅಥವಾ ಕ್ಯಾಮೊಮೈಲ್ ಚಹಾ ಒಂದು ಅತ್ಯುತ್ತಮ ಆಯ್ಕೆಯಾಗಿದೆ.
  • ರಾತ್ರಿಯ ಊಟವನ್ನು ಹೊಟ್ಟೆ ಬಿರಿಯುವಷ್ಟು ತಿನ್ನಬೇಡಿ, ಹಿತಮಿತವಾಗಿ ತಿನ್ನಲು ಪ್ರಯತ್ನಿಸಿ. ಮಲಗುವ ಮುನ್ನ ಹೆಚ್ಚು ಊಟವನ್ನು ಮಾಡಿದರೆ ಅದು ಅಜೀರ್ಣ ಮತ್ತು ಎದೆಯುರಿಯನ್ನುಂಟು ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ನಿದ್ದೆಗೆ ಅಡ್ಡಿಯಾಗಬಹುದು. ಸ್ಯಾಂಡ್ವಿಚ್ ಅಥವಾ ಸಲಾಡ್‌ನಂತಹ ಸಂಜೆಯ ತಿಂಡಿಗಳನ್ನು ತಿನ್ನುವುದರಿಂದ ರಾತ್ರಿಯ ಹೊತ್ತು ಹೊಟ್ಟೆಬಿರಿಯುವಷ್ಟು ತಿನ್ನುವುದನ್ನು ತಡೆಯಬಹುದು. 
  • ರಾತ್ರಿ 9 ಗಂಟೆಯ ಮೊದಲು ಊಟ ಮಾಡುವುದು ಒಳ್ಳೆಯದು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಕೆಲಸದಿಂದ ಮನೆಗೆ ಹೊರಡುವ ಮೊದಲು ಹಣ್ಣುಗಳು ಅಥವಾ ಬೇಯಿಸಿದ ಮಖಾನದಂತಹ ಎಣ್ಣೆ ಇರಲಾರದ ತಿಂಡಿಗಳನ್ನು ತಿನ್ನಿ. ನೀವು ಮನೆಗೆ ಬಂದಮೇಲೆ, ಒಂದಿಷ್ಟು ಬೇಳೆ ಮತ್ತು ತರಕಾರಿಗಳೊಂದಿಗೆ ಒಂದು ಚಪಾತಿ ಅಥವಾ ಅರ್ಧ ಬಟ್ಟಲು ಅನ್ನಕ್ಕೆ ನಿಮ್ಮ ಊಟವನ್ನು ಸೀಮಿತಗೊಳಿಸಿ.
  • ಟೆಲಿವಿಶಯನ್, ಸ್ಮಾರ್ಟ್ ಫೋನ್‌ಗಳು, ಐಪ್ಯಾಡ್ ಮತ್ತು ಲ್ಯಾಪ್‌ಟಾಪ್‌ನಂತಹ ಸಾಧನಗಳು ಕೃತಕ ನೀಲಿ ಬೆಳಕನ್ನು ಹೊರಬಿಡುತ್ತವೆ. ಇದು ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಹಾಸಿಗೆಗೆ ಹೋಗುವ ಒಂದು ಗಂಟೆ ಅಥವಾ ಕನಿಷ್ಟ ಅರ್ಧ ಗಂಟೆಗಿಂತ ಮೊದಲು ಇಂತಹ ಗ್ಯಾಜೆಟ್‌ಗಳಿಂದ ದೂರವಿರುವುದು ಒಳ್ಳೆಯದು. 
  •  ನೀವು ಹಗಲಿನಲ್ಲಿ ಮಲಗುವುದರಿಂದ ರಾತ್ರಿ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನೀವು ಹಗಲಿನಲ್ಲಿ ಸ್ವಲ್ಪ ಸಮಯ ನಿದ್ದೆ ಮಾಡಬೇಕಿದ್ದರೆ 20 ನಿಮಿಷಕ್ಕಿಂತ ಹೆಚ್ಚುಕಾಲ ಮಲಗದಂತೆ ನೋಡಿಕೊಳ್ಳಿ. ಅದೇನೇ ಇದ್ದರೂ, ನೀವು ಮತ್ತೊಮ್ಮೆ ಚೈತನ್ಯವನ್ನು ಪಡೆಯಲು ಒಂದು ಸಣ್ಣ ನಿದ್ದೆ ಸಾಕು.
  • ನೀವು ಊಟ ಮಾಡಿದ ಕೂಡಲೇ ಹಲ್ಲುಜ್ಜಿ ಅಥವಾ ಸೋಂಪನ್ನು (ಬಡೇಸೂಪ್ಪು) ತಿನ್ನಿರಿ. ಹಲ್ಲುಜ್ಜಿದಾಗ ಬರುವ ಮಿಂಟಿ ರುಚಿಯಿಂದಾಗಿ ರಾತ್ರಿ ಊಟದ ನಂತರ ಬೇರೇನಾದರನ್ನು ಬಾಯಾಡಿಸುವುದರಿಂದ ದೂರವಿರಬಹುದು.
  • ಪ್ರತಿದಿನ ಬೇಗ ಏಳುವುದನ್ನು ಮತ್ತು ಬೇಗ ಮಲಗುವುದನ್ನು ರೂಢಿಸಿಕೊಳ್ಳಿ. ಈ ಅಭ್ಯಾಸವು ಶಿಸ್ತುಬದ್ಧ ಜೀವನಶೈಲಿಯನ್ನು ಮುನ್ನಡೆಸಲು ಮತ್ತು ಸರಿಯಾದ ಆಹಾರ ಕ್ರಮವನ್ನು ಕಾಪಾಡಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆಯನ್ನು ಮಾಡಲು ನಡುರಾತ್ರಿಗಿಂತಲೂ ಮೊದಲೇ ಮಲಗುವುದು ಒಳ್ಳೆಯ ಕೆಲಸ.

ಬಿಡುವು ಮಾಡಿಕೊಂಡು ರಾತ್ರಿಯ ಹೊತ್ತು ಸಾಕಷ್ಟು ನಿದ್ದೆ ಮಾಡಿ, ನೀವು ಸಣ್ಣಗಾಗುವ ದಾರಿಯ ಕಡೆ ಸಾಗಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.