Reading Time: 3 minutes

ತಜ್ಞ ವಿಮರ್ಶೆ ಮಾಡಿದವರು ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಷನ್ ಮತ್ತು ಪ್ರಮಾಣೀಕೃತ ಡಯಬೀಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ವಿಷಯ ಪರಿಶೀಲನೆ ಮಾಡಿದವರು ಆದಿತ್ಯ ನಾರ್, ಬಿ. ಫಾ಼ರ್ಮ್, ಎಂ.ಎಸ್ಸಿ. ಪಬ್ಲಿಕ್ ಹೆಲ್ತ್ ಮತ್ತು ಹೆಲ್ತ್ ಇಕನಾಮಿಕ್ಸ್

ಆಫೀ಼ಸ್ ಪಾರ್ಟಿಯಲ್ಲಿ, ನನ್ನ ಸಹೋದ್ಯೋಗಿ ಸ್ಮಿತಾ ನಗುಮೊಗದಿಂದ ಇರದೆ, ತುಂಬ ದುಃಖಿತಳಾಗಿದ್ದಳು. ನಾನು ಆಕೆಯ ಬಳಿ ಕಾರಣ ಕೇಳಿದಾಗ, ಅವಳ ಗಂಡನಿಗೆ ಸಕ್ಕರೆ ಕಾಯಿಲೆ ಇರುವುದು ತಿಳಿದಾಗಿನಿಂದ, ಆತ ತನ್ನ ಬದುಕು ಇನ್ನೇನು ಮುಗಿದೇ ಹೋಯಿತು ಎನ್ನುವ ರೀತಿ ನಡೆದುಕೊಳ್ಳುತ್ತಿರುವನೆಂದು ಹೇಳಿದಳು. ಕುಟುಂಬದೊಂದಿಗೆ ವಾರದ ಕೊನೆಯ ಡಿನ್ನರ್‌ಗಳು, ಹಳೇ ಗೆಳೆಯರೊಂದಿಗೆ ಮನೆಯಲ್ಲಿ ಮಾಡುತ್ತಿದ್ದ ಪಾರ್ಟಿಗಳು, ಅವಳು ಮಾಡಿದ ವೆನಿಲ್ಲ ಚಾಕಲೇಟ್ ಫ಼ಡ್ಜ್ ಸವಿಯುತ್ತ ಗಂಟೆಗಟ್ಟಲೆ ಕುಳಿತು ನೋಡುತ್ತಿದ್ದ 90ರ ದಶಕದ ಬಾಲಿವುಡ್ ಚಿತ್ರಗಳು, ಇವೆಲ್ಲ ವೈದ್ಯರು ಆತನಿಗೆ ವಿಷಯ ತಿಳಿಸಿದ ದಿನದಿಂದ ನಿಂತೇ ಹೋಗಿದೆ. ಅಂದಿನಿಂದ ಅವನು, ಈಕೆಯ ಬಳಿ ಚಂದದ ಒಂದು ಮಾತನ್ನೂ ಆಡಿಲ್ಲ. ಮಕ್ಕಳಿಗೆ ಅವರ ಅಪ್ಪನ ಮೋಜು ಮಸ್ತಿಯ ನೆನಪುಗಳು ಕಾಡುತ್ತಿದೆ. ಅವಳು ಒತ್ತರಿಸಿ ಬಂದ ಅಳುವನ್ನು ನುಂಗುತ್ತ, ಜೀವನ ಮೊದಲಿನಂತೆ ಇರುವುದಿಲ್ಲವೇನೊ ಎಂದು ಪದೇ ಪದೇ ಚಿಂತಿಸುತ್ತಿರುವುದಾಗಿ ಹೇಳಿದಳು

ದುರದೃಷ್ಟವಶಾತ್, ಇಂತಹ ಕತೆಗಳು ಭಾರತದಲ್ಲಿ ಹೆಚ್ಚುತ್ತಲೇ ಇವೆ. ಜಾಗತಿಕ ಮಟ್ಟದಲ್ಲಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಚೀನಾದ ನಂತರ ನಮ್ಮಲ್ಲೇ ಹೆಚ್ಚು.(1)

ನಿಮ್ಮ ಸ್ಥಿತಿ ಕೂಡ ಸ್ಮಿತಾಳಂತೆಯೇ ಇದ್ದರೆ, ಮೊದಲು ಚಿಂತಿಸುವುದನ್ನು ನಿಲ್ಲಿಸಿ. ನೀವು ಸಕಾರಾತ್ಮಕವಾಗಿರದಿದ್ದರೆ, ನಿಮ್ಮ ಪ್ರೀತಿಪಾತ್ರರಿಗೆ ನೆರವಾಗಲು ನಿಮ್ಮಿಂದ ಹೆಚ್ಚೇನೂ ಮಾಡಲಾಗದು. ನಿಮ್ಮ ಒಡನಾಡಿಯ ಬೆಂಬಲಕ್ಕೆ ನಿಲ್ಲುವುದಾಗಿ ಇಂದೇ ತೀರ್ಮಾನಿಸಿ. ಬೇರೆಯವರಿಗೂ ನೆರವಾಗಿರುವ ಈ ಸಲಹೆಗಳನ್ನು ಪಾಲಿಸಿ:

1. ಕಡಿಮೆ ಮಾತಾಡಿ, ಕಿವಿಗೊಟ್ಟು ಕೇಳಿ:

ತಮಗೆ ಸಕ್ಕರೆ ಕಾಯಿಲೆ ಇದೆಯೆಂದು ಹೊಸದಾಗಿ ತಿಳಿದವರು ನಿಮ್ಮೊಡನೆ ಮಾತಾಡುವಾಗ, ಗಮನವಿಟ್ಟು ಕೇಳಿ. ಅವರಿಗೆ ಏನು ಬೇಕಾಗಿದೆಯೆಂದು ಸರಿಯಾಗಿ ತಿಳಿದುಕೊಳ್ಳಿ. ಅವರು ನಿಮ್ಮ ಸಲಹೆ ಕೇಳುತ್ತಿರುವರೆ ಇಲ್ಲವೆ ಬರಿ ತಮ್ಮ ಸಿಟ್ಟು ಹೊರಹಾಕಿ ಮನಸ್ಸು ಹಗುರ ಮಾಡಿಕೊಳ್ಳುತ್ತಿರುವರೆ? ಅವರಿಗೆ ನಿಮ್ಮ ಲೋ-ಕ್ಯಾಲರಿ ಅಡುಗೆಯ ಪಾಕವಿಧಾನ ಬೇಕಾಗಿದೆಯೆ ಇಲ್ಲವೆ ಬರಿ ಅವರು ಗರಿಗರಿ ಪಕೋಡ ತಿನ್ನಲು ಆಗುತ್ತಿಲ್ಲವಲ್ಲ ಎಂದು ಗೊಣಗುತ್ತಿದ್ದಾರೆಯೆ?

ತಾಳ್ಮೆಯಿಂದ ಅವರ ಮಾತು ಕೇಳಿ. ಅಗತ್ಯವಿದ್ದರೆ, ಅವರ ಅಳುವಿಗೆ ಹೆಗಲು ಕೊಟ್ಟು ಸಂತೈಸಿ. ಅವರೇ ನಿಮ್ಮನ್ನು ಕೇಳುವವರೆಗೆ, ನೀವು ಸಲಹೆ ನೀಡಲು ಮುಂದಾಗಬೇಡಿ.

2. ಹುರಿದುಂಬಿಸಿ, ಆದರೆ ಒತ್ತಾಯಿಸದಿರಿ:

ಡಾ. ವತ್ಸಲ ಕಾಶಿ, ಎಂ.ಡಿ ರವರು, “ಈಗೆಲ್ಲ, ಸಕ್ಕರೆ ಕಾಯಿಲೆ ಎಷ್ಟು ಸಾಮಾನ್ಯವಾಗಿದೆಯೆಂದರೆ, ಗೆಳೆಯರು ಹಾಗು ನೆಂಟರಿಂದ ಒಂದು ರಾಶಿ ಒಳ್ಳೆಯ ಸಲಹೆಗಳು ಸಿಗುತ್ತವೆ. ಇದು ಸಕ್ಕರೆ ಕಾಯಿಲೆ ಇದೆಯೆಂದು ಹೊಸದಾಗಿ ತಿಳಿದವರಿಗೆ ಹೊರೆಯಾಗಬಹುದು. ಅದರಲ್ಲೂ ವಿಶೇಷವಾಗಿ ಅವರ ಗಂಡ/ಹೆಂಡತಿ ಪ್ರತಿಯೊಂದು ಉಪಾಯವನ್ನೂ ಮಾಡಿ ನೋಡಬೇಕೆಂಬ ಹಠ ತೊಟ್ಟಿದ್ದರೆ, ಕಿರಿಕಿರಿಯಾಗುವುದು ಕಟ್ಟಿಟ್ಟ ಬುತ್ತಿ. ಕಾಯಿಲೆ ಇರುವವರು ಏನು ಮಾಡಬೇಕೆಂಬುದನ್ನು ಅವರೇ ತೀರ್ಮಾನಿಸಿದರೆ ಒಳಿತು. ನೀವು ಅವರನ್ನು ಬೆಂಬಲಿಸಿ, ಅವರು ತೆಗೆದುಕೊಂಡ ತೀರ್ಮಾನಗಳಿಗೆ ಅಂಟಿಕೊಳ್ಳಲು ಹುರಿದುಂಬಿಸಿ.” ಎಂದು ಹೇಳುತ್ತಾರೆ. 

ನೀವೇನು ಮಾಡಬೇಕೆಂದರೆ, ಒಳ್ಳೆಯ ಪರಿಣಾಮ ತೋರಬಲ್ಲ ಮೆನ್ಯು ತಯಾರಿಸಿ, ಅದರಂತೆ ಆರೋಗ್ಯಕರ ಆಹಾರ ಸಾಮಗ್ರಿಗಳನ್ನು ಜೊತೆಯಲ್ಲಿ ಹೋಗಿ ಖರೀದಿಸುವುದು. ಉದಾಹರಣೆಗೆ, ಸ್ಮಿತಾಳ ಗಂಡ ಪ್ರತಿದಿನ ನಡಿಗೆಗೆ ಹೋಗುವಾಗ, ಅವಳೂ ಸಹ ಜೊತೆಗೆ ಹೆಜ್ಜೆ ಹಾಕಿದಳು. ಇದರಿಂದ, ನಿಯಮಿತವಾಗಿ ವ್ಯಾಯಾಮ ಮಾಡಬೇಕೆಂಬ ವೈದ್ಯರ ಸಲಹೆಯನ್ನು ಆಕೆಯ ಗಂಡ ಇನ್ನೂ ಒಳ್ಳೆಯ ರೀತಿಯಲ್ಲಿ ಅನುಸರಿಸುವುದನ್ನು ಸ್ಮಿತಾ ಕಂಡುಕೊಂಡಳು.

ನಿಮ್ಮ ಪ್ರೀತಿಪಾತ್ರರಿಗೆ, ಈ ರೀತಿ ನೀವು ಪ್ರತಿಯೊಂದರಲ್ಲೂ ಕೈ ಹಾಕುವುದು ಹಿಡಿಸದಿದ್ದರೆ, ಹಿಂದಡಿಯಿಟ್ಟು, ಅವರು ಬೇಡಿದಷ್ಟು ಬೆಂಬಲ ಮಾತ್ರ ನೀಡಿ.

3. ಸೂಕ್ಷ್ಮಗಳನ್ನು ಅರಿತುಕೊಳ್ಳಿ:

ಸಕ್ಕರೆ ಕಾಯಿಲೆ ಉಳ್ಳವರು ಆರೋಗ್ಯಕರ ಊಟ ಮಾಡಬೇಕು ಎಂದ ಮಾತ್ರಕ್ಕೆ, ಅವರು ಅದನ್ನು ಇಷ್ಟಪಡುತ್ತಾರೆ ಎಂದೇನಿಲ್ಲ. ಈ ವಿಷಯದಲ್ಲಿ ನೀವು ಸ್ವಲ್ಪ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅವರಿಗೆ ಇನ್ನೂ ಕಿರಿಕಿರಿಯಾಗಬಹುದು. ನಿಮಗೆ ಐಸ್‍ಕ್ರೀಮ್ ಇಲ್ಲವೆ ಪನೀರ್ ಬಟರ್ ಮಸಾಲೆ ಸವಿಯುವ ಬಯಕೆಯಾಗಿದೆಯೆ? ಧಾರಾಳವಾಗಿ ತಿನ್ನಿ, ಆದರೆ ಅವರ ಎದುರು ತಿನ್ನುವ ಅಗತ್ಯವಿಲ್ಲ, ಅಲ್ಲವೆ? 

ನೀವು ಊಟದ ವ್ಯವಸ್ಥೆಯಿರುವ ಯಾವುದೋ ಸಮಾರಂಭಕ್ಕೆ ಹೋಗಿದ್ದರೆ, ನಿಮ್ಮ ಪ್ರೀತಿಪಾತ್ರರಿಗೆ ಸಕ್ಕರೆ ಕಾಯಿಲೆ ಇದೆಯೆಂದು ಅಲ್ಲಿರುವ ಎಲ್ಲರಿಗು ಡಂಗುರ ಸಾರುವ ಅಗತ್ಯವಿಲ್ಲ. ಅಂದರೆ, ಅವರು ಅಲ್ಲಿ ಸ್ವಲ್ಪ ಅನಾರೋಗ್ಯಕರ ಆಹಾರ ತಿನ್ನುವಂತಾದರೂ ಏನೂ ಅಡ್ಡಿಯಿಲ್ಲ. ಅವರು ಸ್ವಲ್ಪವೂ ಶಿಸ್ತು ತೋರದೆ ಸಿಕ್ಕಿದ್ದೆಲ್ಲ ತಿನ್ನುತ್ತಿರುವುದು ನಿಮ್ಮ ಚಿಂತೆಯಾದರೆ, ಅವರು ಸಕ್ಕರೆ ಕಾಯಿಲೆಗೆ ಹೊಂದಿಕೊಳ್ಳುವ ತನಕ, ಅಂತಹ ಸಭೆ ಸಮಾರಂಭಗಳಿಂದ ದೂರವಿರುವುದು ಒಳಿತು.

4. ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿ:

ಸಕ್ಕರೆ ಕಾಯಿಲೆ ಇದೆಯೆಂದು ಗೊತ್ತಾಗುವುದು, ಆರೋಗ್ಯಕರ ಅಡುಗೆಗೆ ದಾರಿ ಮಾಡಿಕೊಡಬಹುದು. ಉದಾಹರಣೆಗೆ, ಸ್ಮಿತಾ ತನ್ನ ಗಂಡನ ಅಚ್ಚುಮೆಚ್ಚಿನ ತಿನಿಸುಗಳನ್ನು ಎಣ್ಣೆಯಲ್ಲಿ ಕರಿಯುವ ಬದಲು, ಬೇಕ್ ಕೂಡ ಮಾಡಬಹುದು ಎಂದು ಕಂಡುಕೊಂಡಳು. ನಿಮ್ಮ ಸೃಜನಶೀಲತೆ ಬಳಸಿ ಹೊಸ ಅಡುಗೆಗಳನ್ನು ಮಾಡಿ. ಹೆಚ್ಚು ಕ್ಯಾಲರಿ ಅಡಕಗಳ ಬದಲು ಕಡಿಮೆ ಕ್ಯಾಲರಿ ಇರುವುದನ್ನು ಹಾಕಿ. ಇದರಿಂದ ನಿಮ್ಮ ಪ್ರೀತಿಪಾತ್ರರು ರುಚಿಯಾದ, ಜೊತೆಗೆ ಆರೋಗ್ಯಕರವಾದ ಊಟ ಮಾಡಬಹುದು.

ನಿಮ್ಮ ಊರಿನಲ್ಲಿ ಹೊಸ ರೆಸ್ಟೋರೆಂಟ್‍ಗಳು ಎಲ್ಲೆಲ್ಲಿ ತೆರೆದಿವೆಯೆಂದು ಹುಡುಕಿ, ಅಲ್ಲಿನ ರುಚಿ ನೋಡುವ ಅಭ್ಯಾಸ ನಿಮಗೆ ಇದ್ದಿರಬಹುದು. ಸಕ್ಕರೆ ಕಾಯಿಲೆ ಇರುವುದು ತಿಳಿದಾಗಿನಿಂದ, ಈ ಸುಖದಿಂದ ನೀವು ವಂಚಿತರಾಗಬೇಕಿಲ್ಲ. ನಿಮ್ಮ ಹುಡುಕಾಟದ ದಿಕ್ಕು ಬದಲಾಯಿಸಬೇಕಷ್ಟೆ. ನೀವೇಕೆ ಆರೋಗ್ಯಕರ ತಿನಿಸುಗಳನ್ನು ಮಾರುವ ಅಂಗಡಿಗಳು ಇಲ್ಲವೆ ಸಾಲಡ್ ಬಾರ್ ಇಲ್ಲವೆ ಲೋ-ಕ್ಯಾಲರಿ ಅಡುಗೆಗೆ ಹೆಸರಾದ ರೆಸ್ಟೋರೆಂಟ್‍ಗಳಿಗಾಗಿ ಹುಡುಕಬಾರದು?(2)

5. ನಿಯಮಿತವಾಗಿ ವ್ಯಾಯಾಮ ಮಾಡಲು ಹುರಿದುಂಬಿಸಿ:

ದೇಹದ ತೂಕ ಮತ್ತು ರಕ್ತದ ಗ್ಲುಕೋಸ್ ಮಟ್ಟವನ್ನು ಹಿಡಿತದಲ್ಲಿಡಲು ನಿಯಮಿತವಾದ ವ್ಯಾಯಾಮವು ನೆರವಾಗುವುದು. ಇದರ ಜೊತೆಗೆ, ಸಕ್ಕರೆ ಕಾಯಿಲೆ ಉಳ್ಳವರಲ್ಲಿ ಆಗುವ ತಳಮಳವನ್ನು ಸಹ ಕಮ್ಮಿ ಮಾಡುತ್ತದೆಯೆಂದು ವರದಿಯಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ಖುಷಿ ಕೊಡುವ ವ್ಯಾಯಾಮ ದಿನಚರಿಯನ್ನು ಹುಡುಕಲು ಬೆಂಬಲ ನೀಡಿ ಹಾಗು ಅದನ್ನು ಬಿಡದೆ ಪಾಲಿಸಲು ಹುರಿದುಂಬಿಸಿ. ಸ್ಮಿತಾಳ ಗಂಡ ಚಟುವಟಿಕೆಯಿಂದಿರಲು, ಮೊದಲಿಗೆ ಬ್ಯಾಡ್‍ಮಿಂಟನ್ ಮತ್ತು ಸೈಕ್ಲಿಂಗ್ ಆರಂಭಿಸಿದರು. ಆದರೆ ಅವರಿಗೆ ತುಂಬ ದಣಿವಾಗತೊಡಗಿ, ಕಡೆಗೆ ತಪ್ಪಿಸಿಕೊಳ್ಳಲು ಶುರುಮಾಡಿದರು. ಆಮೇಲೆ ಯೋಗದ ಮೊರೆ ಹೋದರು. ಯೋಗ ಮಾಡುವುದು ಬಹಳ ಹಿಡಿಸಿ, ಅವರು ಅದಕ್ಕೆ ಅಂಟಿಕೊಳ್ಳುವುದು ಸುಲಭವಾಯಿತು. ನೀವೂ ಜೊತೆಗೆ ವ್ಯಾಯಾಮ ಮಾಡುವುದರಿಂದ, ನಿಮ್ಮ ಪ್ರೀತಿಪಾತ್ರರು ಇನ್ನೂ ಉತ್ಸಾಹದಿಂದ ವ್ಯಾಯಾಮದ ದಿನಚರಿಯನ್ನು ಪಾಲಿಸುತ್ತಾರೆಂದರೆ, ಖಂಡಿತ ಕೈ ಜೋಡಿಸಿ.(3)

6. ತುರ್ತು ಪರಿಸ್ಥಿತಿಗಳಲ್ಲಿ, ಬಳಕೆಗೆ ಬರುವ ಕ್ರಮಗಳ ವ್ಯವಸ್ಥೆ ಮಾಡಿ:

ಡಾ. ಕಾಶಿ ರವರು, ಸಕ್ಕರೆ ಕಾಯಿಲೆ ಇದೆಯೆಂದು ಹೊಸದಾಗಿ ತಿಳಿದಾಗ, ಎಲ್ಲಿ ಹೈಪೊಗ್ಲೈಸೆಮಿಯದಂತಹ ತುರ್ತು ಪರಿಸ್ಥಿತಿ ಉಂಟಾಗುವುದೊ ಎಂಬ ತಳಮಳವೇ ಹೆಚ್ಚೆಂದು ಹೇಳುತ್ತಾರೆ. “ಅಂತಹ ಪರಿಸ್ಥಿತಿಗಳಿಗಾಗಿ ಸುಳುವಾದ ಕ್ರಮಗಳನ್ನು ಕೈಗೊಳ್ಳಿ. ಬ್ಯಾಗಿನಲ್ಲಿ ಚಾಕಲೇಟ್ ಬಾರ್ ಇಟ್ಟುಕೊಳ್ಳಿ, ನಿಮ್ಮ ಹಾಸಿಗೆಯ ಬಳಿ ಬಿಸ್ಕೆಟ್ ಡಬ್ಬಿಯನ್ನು ಇರಿಸಿ, ನಿಮ್ಮ ವೈದ್ಯರ, ಆರೈಕೆಗಾರರ ಮತ್ತು ಹತ್ತಿರದ ನೆರೆ ಹೊರೆಯವರ ನಂಬರ್ ಫೋನಿನ ಸ್ಪೀಡ್ ಡಯಲ್‍ನಲ್ಲಿ ಹಾಕಿಡಿ. ನಿಮ್ಮ ಪ್ರೀತಿಪಾತ್ರರಿಗೆ ಇಂತಹ ಪರಿಸ್ಥಿತಿಗಳಲ್ಲಿ ನೆರವು ಬಂದೊದಗುವುದು ಎಂದು ಖಾತ್ರಿಪಡಿಸಲು ಏನು ಮಾಡಲು ಸಾಧ್ಯವೊ ಅದೆಲ್ಲ ಮಾಡಿ.”

ಸ್ಮಿತಾ ಈಗ ನಮಗೆ ಹೇಳುವಂತೆ, ಆಕೆಯ ಗಂಡನಿಗೆ ಸಕ್ಕರೆ ಕಾಯಿಲೆ ಇದೆಯೆಂದು ಹೊಸದಾಗಿ ತಿಳಿದಾಗ, ಅತ್ಯಂತ ಕಷ್ಟವೆನಿಸಿದ್ದು, ಜೀವನ ಮೊದಲಿನಂತೆ ಇರುವುದಿಲ್ಲ ಎಂಬ ನಿಜವನ್ನು ಒಪ್ಪಿಕೊಂಡದ್ದು. ಆದರೂ, ಅವರು ಒಬ್ಬರಿಗೊಬ್ಬರು ಆಸರೆಯಾಗಿದ್ದಾರೆ. ಏಕೆಂದರೆ, ಅವರು “ಬೇರೆ ತರಹದ ಜೀವನ” ಎಂದರೆ “ದುಃಖದ ಜೀವನ” ಆಗಬೇಕಿಲ್ಲ ಎಂಬ ಅರಿವು ಮೂಡಿಸಿಕೊಂಡರು. ಈ ಅರಿವೇ ಸಕ್ಕರೆ ಕಾಯಿಲೆಯನ್ನು ಸಮರ್ಥವಾಗಿ ಎದುರಿಸಲು ಇರುವ ಅಸ್ತ್ರವಾಗಿರಬಹುದು.

ಟಿಪ್ಪಣಿ:

ಡಾ. ವತ್ಸಲ ಕಾಶಿ, ಬೆಂಗಳೂರಿನ ರಾಮಕೃಷ್ಣ ನರ್ಸಿಂಗ್ ಹೋಮ್‍ನಲ್ಲಿ ಕನ್ಸಲ್ಟಂಟ್ ಫಿ಼ಸೀಷಿಯನ್ ಆಗಿದ್ದಾರೆ.

 

ಉಲ್ಲೇಖ:

[1] D.C. Protasiewicz, M-M. Sandu, A.G. Firanescu, E.C. Lacatusu, M.L. Bicu, M. Mota. Data regarding the prevalence and incidence of diabetes mellitus and prediabetes. Rom J Diabetes Nutr Metab Dis.; 2016; 23(1); 095-103; DOI: 10.1515/rjdnmd-2016-0012

[2] A. Abbott. Understanding Diabetes. Diabetic Connect. http://www.diabeticconnect.com/diabetes-information-articles/general/487-5-ways-to-help-your-newly-diagnosed-diabetic-partner

[3] Y. P. S. Balhara and R. Sagar. Correlates of anxiety and depression among patients with type 2 diabetes mellitus. Indian J Endocrinol Metab; 2011; 15 (Suppl 1); S50-S54; DOI: 10.4103/2230-8210.83057

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.