symptoms heart failure
Reading Time: 2 minutes

ಮೈಕೈ ನೋವೆ? ಗುಳಿಗೆ ತೆಗೆದುಕೊಳ್ಳಿ. ಉಸಿರೆಳೆಯಲು ಕಷ್ಟವೆ? ಸ್ವಲ್ಪ ಗಾಳಿ ತೆಗೆದುಕೊಳ್ಳಿ. ಸುಸ್ತಾಗಿದೆಯೆ? ಸ್ವಲ್ಪ ಹೊತ್ತು ಮಲಗಿ.

ನಮ್ಮ ಹೃದಯ ಮುಂಚಿತವಾಗಿಯೆ ನಮಗೆ ನೀಡುವ ಎಚ್ಚರಿಕೆಗಳನ್ನು, ಸಾಮಾನ್ಯವಾಗಿ ಹೀಗೆಯೆ ನಾವು ಕಡೆಗಣಿಸುತ್ತೇವೆ. ಸಡನ್ ಕಾರ್ಡಿಯಾಕ್ ಅರೆಸ್ಟ್ ಫೌಂಡೇಷನ್ ಪ್ರಕಾರ, ಕಳೆದ ವರ್ಷ, ಒಮ್ಮೆಗೆ ಪಾರ್ಶ್ವವಾಯು ಬಡಿದು ಆಸ್ಪತ್ರೆಗೆ ಸೇರಿದ ಸುಮಾರು 25% ಮಂದಿಗೆ, ಹೃದಯ ವೈಫಲ್ಯದ ಯಾವ ಗುರುತುಗಳೂ ಮುಂಚೆ ಕಾಣಿಸಿರಲಿಲ್ಲ. ಮನೆಯಲ್ಲೇ ಇದ್ದಾಗ ಇಂತಹ ತುರ್ತು ಪರಿಸ್ಥಿತಿ ಉಂಟಾದರೆ, ಅಂಥವರು ಬದುಕುಳಿಯುವ ಸಾಧ್ಯತೆ ಬರಿ 28% ಎಂದು ಸಹ ಫೌಂಡೇಷನ್ ಹೇಳುತ್ತದೆ.[1] ಇದು ಸ್ವಲ್ಪ ಯೋಚಿಸಬೇಕಾದ ವಿಷಯವೆ ಸರಿ. ನಮ್ಮ ಹೃದಯ ನೀಡುವ ಎಚ್ಚರಿಕೆಗಳನ್ನು ಗುರುತಿಸುವ ಬಗೆ ಹೇಗೆ? ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಹೃದಯ ವೈಫಲ್ಯ ತುಂಬ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಭಾರತೀಯರಿಗೆ ಕಿರಿಯ ವಯಸ್ಸಿನಲ್ಲೆ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ. ಟ್ರಿವ್ಯಾಂಡ್ರಮ್ ಹಾರ್ಟ್ ಫೈಲ್ಯೂರ್ ರಿಜಿಸ್ಟ್ರಿಯ ಪ್ರಕಾರ, ಪಾಶ್ಚಿಮಾತ್ಯರಿಗೆ ಹೋಲಿಸಿದರೆ, ಹೃದಯ ವೈಫಲ್ಯ ಇರುವ ಭಾರತೀಯರು ಸಾಮಾನ್ಯವಾಗಿ 10 ವರ್ಷ ಸಣ್ಣ ಹರೆಯದವರಾಗಿರುತ್ತಾರೆ.[2]

ಹಲವು ಬಗೆಗಳಲ್ಲಿ ನೆರವಿಗಾಗಿ ಮೊರೆಯಿಡುತ್ತಿರುವ ನಮ್ಮ ಹೃದಯದ ಕರೆಗೆ, ನಾವು ತುರ್ತಾಗಿ ಕಿವಿಗೊಡಬೇಕಿದೆ. ಹೃದಯದ ತೊಂದರೆಗಳು ಇವೆಯೊ ಇಲ್ಲವೊ ಎಂದು ಪರೀಕ್ಷೆ ಮಾಡಿ ತಿಳಿಯಲು, ನಿಮ್ಮ ಡಾಕ್ಟರ್ ಬಳಿ ಈ ಕುರುಹುಗಳ ಕುರಿತು ನೀವು ಚರ್ಚಿಸಬೇಕು.

  1. ಉಸಿರೆಳೆಯಲು ಕಷ್ಟವಾಗುವುದು: ದೈಹಿಕ ಚಟುವಟಿಕೆಯಲ್ಲಿ ತೊಡಗಿರುವಾಗ, ಉಸಿರೆಳೆಯಲು ಕಷ್ಟವಾದಂತೆ ಅನಿಸುವುದು ಸಾಮಾನ್ಯ. ಆದರೆ, ನೀವು ಮಲಗಿರುವಾಗ ಇಲ್ಲವೆ ವಿಶ್ರಾಂತಿ ಪಡೆಯುತ್ತಿರುವಾಗಲೂ ಹೀಗಾದರೆ, ಡಾಕ್ಟರನ್ನು ಕಾಣಿರಿ. ಹಾಸಿಗೆಯ ಮೇಲೆ ಅಂಗಾತ ಮಲಗಿದಾಗ, ಬಹಳ ಮಂದಿಗೆ ಹಾಯಾಗಿ ಉಸಿರಾಡಲು ಆಗುವುದಿಲ್ಲ. ಒಳಬರುವ ರಕ್ತವನ್ನೆಲ್ಲ ಹೃದಯವು ಹಿಡಿದಿಟ್ಟುಕೊಳ್ಳಲು ಆಗದಿರುವುದರಿಂದ, ಹೀಗಾಗುತ್ತದೆ. ಶ್ವಾಸಕೋಶಗಳ ಒಳಗೂ ದ್ರವ ಸೋರಿಕೆಯಾಗಿ, ಉಸಿರಾಡಲು ಕಷ್ಟವಾಗಬಹುದು. ರಾತ್ರಿಯಿಡೀ ನಿದ್ದೆ ಮಾಡಿದ ಮೇಲೂ ಸುಸ್ತೆನಿಸಿದರೆ, ಡಾಕ್ಟರನ್ನು ಭೇಟಿಯಾಗಿ.
  2. ಇಡೀಮ ಅಥವಾ ಊತ: ಇತ್ತೀಚೆಗೆ ನಿಮ್ಮ ಶೂಗಳು ಬಿಗಿಯಾಗಿವೆ ಅನಿಸುತ್ತಿದೆಯೆ? ಇಲ್ಲವೆ, ನಿಮ್ಮ ಹಿಮ್ಮಡಿಯ ಗಂಟಿನ ಸುತ್ತ ಊದಿಕೊಂಡಿದೆಯೆ? ಇತ್ತೀಚೆಗೆ ನಿಮ್ಮ ಹೊಟ್ಟೆಯ ಸುತ್ತ ಬೊಜ್ಜು ಬೆಳೆದಿದೆ ಅನಿಸುತ್ತಿದೆಯೆ? ಇದು ನಿಮ್ಮ ದೇಹವು ದ್ರವವನ್ನು ಹಿಡಿದಿಟ್ಟುಕೊಳ್ಳುವುದರ ಕುರುಹು. ಇದಕ್ಕೆ ಕಾರಣ, ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡದಿರುವುದರಿಂದ, ಹೃದಯಕ್ಕೆ ವಾಪಸ್ ಹೋಗಿ ಸೇರಬೇಕಾದ ರಕ್ತ, ರಕ್ತನಾಳಗಳಲ್ಲೆ ಉಳಿದು, ಊತ ಉಂಟಾಗುತ್ತದೆ.
  3. ದಣಿವು: ಸುಲಭವಾದ ದೈನಂದಿನ ಕೆಲಸಗಳಾದ ಶಾಪಿಂಗ್ ಮಾಡುವುದು ಇಲ್ಲವೆ ದಿನಸಿ ಸಾಮಾನು ಹೊರುವುದರಿಂದ ಕೂಡ ದಣಿವಾದರೆ, ಡಾಕ್ಟರನ್ನು ತಪ್ಪದೆ ಕಾಣಿರಿ. ನಿಮ್ಮ ಹೃದಯ ನೆರವಿಗಾಗಿ ಕೂಗುತ್ತಿರಬಹುದು. ನಿಮ್ಮ ದೇಹದ ಪ್ರಮುಖ ಅಂಗಗಳಿಗೆ, ಹೃದಯದಿಂದ ಸಾಕಷ್ಟು ರಕ್ತ ಹರಿಯದಿದ್ದರೆ, ದೇಹವು ಸ್ನಾಯುಗಳಿಂದ ಆ ಅಂಗಗಳಿಗೆ, ರಕ್ತವನ್ನು ಹರಿಸುತ್ತದೆ. ಹೀಗಾದಾಗ, ನಿಮ್ಮ ಸ್ನಾಯುಗಳು ಅವುಗಳ ಎಂದಿನ ಕೆಲಸ ಮಾಡಲು ಆಗುವುದಿಲ್ಲ.
  4. ಉಬ್ಬಸ ಇಲ್ಲವೆ ವಾಸಿಯಾಗದ ಕೆಮ್ಮು: ನಿಮಗೆ ತುಂಬ ಸಮಯದಿಂದ ಕೆಮ್ಮಿದ್ದರೆ ಮತ್ತು ಉಸಿರಾಡಲು ತೊಂದರೆಯಾಗುತ್ತಿದ್ದರೆ, ಅದು ನಿಮ್ಮ ಹೃದಯಕ್ಕೆ ನೆರವು ಬೇಕೆಂಬುದರ ಗುರುತಾಗಿರಬಹುದು. ಇದಕ್ಕೂ ಅದೇ ಕಾರಣ. ದುರ್ಬಲಗೊಂಡ ಹೃದಯ, ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಳ್ಳುವಂತೆ ಮಾಡಬಹುದು. ಇದರಿಂದ ಕೆಮ್ಮು ಬರಬಹುದು ಮತ್ತು ಉಸಿರೆಳೆಯಲು ಕಷ್ಟವಾಗಬಹುದು.
  5. ಯೋಚನೆ ಕುಂಠಿತಗೊಳ್ಳುವುದು ಹಾಗೂ ಗೊಂದಲಕ್ಕೊಳಗಾಗುವುದು: ನಿಮ್ಮ ಹತ್ತಿರದವರು ಯಾರಾದರೂ ಇತ್ತೀಚೆಗೆ, ನಿಮಗೆ ಮರೆವು ಉಂಟಾಗುತ್ತಿದೆಯೆಂದು ಹೇಳಿದ್ದಾರಾ? ನೀವು ಈಗೀಗ ಕಕ್ಕಾಬಿಕ್ಕಿಯಾಗಿ, ಗೊಂದಲಕ್ಕೆ ಬಿದ್ದಂತೆ ಅನಿಸುತ್ತಿದೆಯೆ? ನಿಮ್ಮ ರಕ್ತದಲ್ಲಿನ ಕೆಲವು ರಾಸಾಯಾನಿಕಗಳ ಮಟ್ಟದಲ್ಲಿ ಬದಲಾವಣೆಗಳಾಗಿರುವ ಸಾಧ್ಯತೆ ಇದೆ. ಸೋಡಿಯಂ ಮಟ್ಟದಲ್ಲಿ ಹೆಚ್ಚು ಕಡಿಮೆ ಆದರೆ, ನಿಮಗೆ ಗೊಂದಲಕ್ಕೆ ಬಿದ್ದಂತೆ ಅನಿಸಬಹುದು. ಇಂತಹ ಅನುಭವ ನಿಮಗೆ ಹೊಸದಾದರೆ, ಡಾಕ್ಟರ್ ಬಳಿ ಹೋಗಿ.
  6. ವಾಂತಿ ಬಂದಂತಾಗುವುದು ಇಲ್ಲವೆ ಹಸಿವಾಗದಿರುವುದು: ನಿಮಗೆ ಹೊಟ್ಟೆಯಲ್ಲಿ ಸಂಕಟವಾಗುತ್ತಿದ್ದರೆ ಇಲ್ಲವೆ ಪದೇ ಪದೇ ಹೊಟ್ಟೆ ತುಂಬಿದೆಯೆಂದು ಅನಿಸುತ್ತಿದ್ದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಾಕಷ್ಟು ರಕ್ತವನ್ನು ಪಡೆಯುತ್ತಿಲ್ಲ ಎಂಬುದರ ಗುರುತಾಗಿರಬಹುದು. ದೇಹದ ಯಾವುದೇ ಅಂಗ ಇಲ್ಲವೆ ವ್ಯವಸ್ಥೆಗೆ ಕಡಿಮೆ ರಕ್ತ ಸಿಕ್ಕರೆ, ಅದು ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಬಹುಶಃ ಈ ಕಾರಣಕ್ಕೂ, ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವುಂಟಾಗಿದೆ. ನಿಮಗೆ ಹೊಟ್ಟೆಯ ತೊಂದರೆಗಳು ಯಾಕಾಗಿದೆಯೆಂದು ತಿಳಿಯಲು ನಿಮ್ಮ ಡಾಕ್ಟರ್ ರೊಡನೆ ಮಾತನಾಡಿ.
  7. ಎದೆಬಡಿತ ಜೋರಾಗುವುದು: ಹೃದಯ ಸಾಕಷ್ಟು ರಕ್ತವನ್ನು ಪಂಪ್ ಮಾಡದಿದ್ದರೆ, ಅದರ ಪರಿಹಾರಕ್ಕಾಗಿ, ಎಲ್ಲಾ ಅಂಗಗಳಿಗೆ ರಕ್ತ ಹರಿಸಲು, ವೇಗವಾಗಿ ಪಂಪ್ ಮಾಡುತ್ತದೆ. ವೇಗವಾಗಿ ಪಂಪ್ ಮಾಡುವುದೆಂದರೆ, ನಿಮಿಷಕ್ಕೆ ಹೆಚ್ಚಿನ ಬಡಿತ ಎಂದು. ಬಹಳ ಸಮಯದಿಂದ ಬಾಕಿ ಇರುವ ಡಾಕ್ಟರ್ ಭೇಟಿಯನ್ನು, ಇಂದೇ ಮುಗಿಸಿಕೊಳ್ಳಿ. ಈ ರೀತಿ ಯಾಕಾಗುತ್ತಿದೆಯೆಂದು ತಿಳಿದುಕೊಳ್ಳಿ.

ನೀವು ನೆನಪಿಡಬೇಕು. ಈ ಕುರುಹುಗಳಲ್ಲಿ ಯಾವುದಾದರೊಂದು ನಿಮ್ಮ ಅನುಭವಕ್ಕೆ ಬಂದ ಕೂಡಲೆ, ನಿಮಗೆ ಹೃದಯ ವೈಫಲ್ಯ ಆಗಿದೆ ಎಂದರ್ಥವಲ್ಲ. ತುಂಬ ಕುರುಹುಗಳು ಸೇರಿಕೊಂಡಾಗ ಹೃದಯ ವೈಫಲ್ಯ ಆಗಿರುವ ಸಾಧ್ಯತೆಯಿದೆ.[3] ಎಲ್ಲಾ ಕುರುಹುಗಳಿಗೆ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗದೆ ಇರಬಹುದು. ಆದರೆ ಬೇಗನೆ ಅವುಗಳ ಕಡೆ ಗಮನ ಹರಿಸಿ, ಸರಿಯಾಗಿ ನಿರ್ವಹಣೆ ಮಾಡಿದರೆ, ಆಸ್ಪತ್ರೆ ಪ್ರಯಾಣ ತಪ್ಪುತ್ತದೆ.

ಉಲ್ಲೇಖಗಳು:

  1. Mary Newman. AHA releases latest statistics on sudden cardiac arrest [Internet]. 2018 Feb 01 [cited 2019 Jul 22]. Available from: https://www.sca-aware.org/sca-news/aha-releases-latest-statistics-on-sudden-cardiac-arrest.
  2. Guha S, Harikrishnan S, Ray S, Sethi R, Ramakrishnan S., Banerjee S, et al. CSI position statement on the management of heart failure in India. Indian Heart J. 2018 Jul;70(Suppl 1):S1–S72. doi: 10.1016/j.ihj.2018.05.003.
  3. Warning signs of heart failure [Internet]. [updated 2017 May 31; cited 2019 Jul 22]. Available from: https://www.heart.org/en/health-topics/heart-failure/warning-signs-of-heart-failure.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.