Benefits of vegan diet in managing dyslipidemia
Reading Time: 2 minutes

ಡಿಸ್ಲಿಪಿಡೀಮಿಯ ಎಂಬುದು ರಕ್ತದಲ್ಲಿರುವ ಕೊಲೆಸ್ಟರಾಲ್ ಮತ್ತು ಲಿಪಿಡ್‌ಗಳ ಅಸಹಜ ಮಟ್ಟದಿಂದ ಉಂಟಾಗುವ ಕಾಯಿಲೆಯಾಗಿದೆ. ಲಿಪಿಡ್‌ಗಳು ದೇಹದ ಹಲವಾರು ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುವ ಕೊಬ್ಬುಗಳಷ್ಟೇ ಹೊರತು ಬೇರೆ ಏನೂ ಅಲ್ಲ. ಅವು ನಮ್ಮ ದೇಹದಲ್ಲಿರುವ ಜೀವಕೋಶಗಳ ಒಂದು ಪ್ರಮುಖ ಅಂಶವಾಗಿದ್ದು, ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತವೆ.1,2

ಡಿಸ್ಲಿಪಿಡೀಮಿಯದಲ್ಲಿ ನಾನಾ ಬಗೆ ಇದ್ದು, ಅವುಗಳೆಂದರೆ:1

 • ಲೋ ಡೆನ್ಸಿಟಿ ಲಿಪೊಪ್ರೋಟೀನ್ ಅಥವಾ ಎಲ್‌ಡಿಎಲ್‌ನ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನದು
 • ಹೈ ಡೆನ್ಸಿಟಿ ಲಿಪೊಪ್ರೋಟೀನ್ ಅಥವಾ ಎಚ್‌ಡಿಎಲ್‌ನ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ
 • ಟ್ರೈಗ್ಲಿಸರೈಡ್‌ಗಳ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನದು

ವಯಸ್ಕರಲ್ಲಿ ಕೊಲೆಸ್ಟರಾಲ್‌ನ ಸಾಮಾನ್ಯ ಮಟ್ಟ:1

 • ಎಲ್‌ಡಿಎಲ್ ಕೊಲೆಸ್ಟರಾಲ್: <100 ಮಿಗ್ರಾಂ / ಡಿಎಲ್
 • ಎಚ್‌ಡಿಎಲ್ ಕೊಲೆಸ್ಟರಾಲ್: ಪುರುಷರು,> 40 ಮಿಗ್ರಾಂ / ಡಿಎಲ್; ಮಹಿಳೆಯರು,> 50 ಮಿಗ್ರಾಂ / ಡಿಎಲ್
 • ಒಟ್ಟು ಕೊಲೆಸ್ಟರಾಲ್: <200 ಮಿಗ್ರಾಂ / ಡಿಎಲ್
 • ಟ್ರೈಗ್ಲಿಸರೈಡ್ಗಳು: <150 ಮಿಗ್ರಾಂ / ಡಿಎಲ್

ರಕ್ತದಲ್ಲಿರುವ ಕೊಲೆಸ್ಟರಾಲ್‌ನ ಅಸಹಜ ಮಟ್ಟವು ವ್ಯಕ್ತಿಯನ್ನು ಹೃದ್ರೋಗಗಳಿಗೆ ಈಡುಮಾಡಬಹುದು.2

ಡಿಸ್ಲಿಪಿಡೀಮಿಯಕ್ಕೆ ಕಾರಣಗಳೇನು?

ಡಿಸ್ಲಿಪಿಡೀಮಿಯದ ಸಾಮಾನ್ಯ ಕಾರಣಗಳು: 2

 • ಬೊಜ್ಜು
 • ಡಯಾಬಿಟಿಸ್
 • ಹೈಪೋಥೈರಾಯ್ಡಿಸಮ್
 • ಆನುವಂಶಿಕ ಸಮಸ್ಯೆಗಳು
 • ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್

ಕೆಲವು ಔಷಧಿಗಳು ಮತ್ತು ಧೂಮಪಾನ ಕೂಡ ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.1

ವ್ಯಾಯಾಮ ಮಾಡದ ಅನಾರೋಗ್ಯಕರ ಜೀವನಶೈಲಿಯ ಅಭ್ಯಾಸದಿಂದಾಗಿ ಕೂಡ, ಕೊಲೆಸ್ಟರಾಲ್ ಹೆಚ್ಚಿನ ಮಟ್ಟವನ್ನು ತಲುಪಬಹುದು.1

ಕೆಟ್ಟ ಕೊಲೆಸ್ಟರಾಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಮಟ್ಟದ ಎಲ್‌ಡಿಎಲ್ ಕೊಲೆಸ್ಟರಾಲ್ ಆರ್ಟರಿಗಳಲ್ಲಿ (ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವ ರಕ್ತನಾಳಗಳು) ಕೊಬ್ಬು ಬಂದು ಕೂರಲು ಕಾರಣವಾಗಬಹುದು. ಹೀಗೆ ಆರ್ಟರಿಗಳಲ್ಲಿ ಬಂದು ಕೂತಂತಹ ಕೊಬ್ಬನ್ನು ಪ್ಲಾಕ್ ರಚನೆ ಎಂದು ಕರೆಯಲಾಗುತ್ತದೆ. ದಿನಗಳೆದಂತೆ, ಈ ಪ್ಲಾಕ್ ಆರ್ಟರಿಯನ್ನು ಕಿರಿದಾಗಿಸುತ್ತಾ, ಅವುಗಳನ್ನು ಬಿಗಿಗೊಳಿಸಿ, ಈ ಕೆಳಗಿನ ತೊಂದರೆಗಳ ಉದ್ಭವಕ್ಕೆ ಎಡೆಮಾಡಿಕೊಡುತ್ತದೆ:1

 • ಹೃದ್ರೋಗ
 • ಪಾರ್ಶ್ವವಾಯು
 • ಕೈಕಾಲುಗಳಲ್ಲಿ ರಕ್ತದ ಹರಿವು ಕಡಿಮೆಯಾಗುವುದು
 • ಹೃದಯಾಘಾತ

ಕಡಿಮೆ ಮಟ್ಟದ ಎಲ್‌ಡಿಎಲ್ ಮತ್ತು ಹೆಚ್ಚಿದ ಟ್ರೈಗ್ಲಿಸರೈಡ್‌ಗಳು ಸಹ ಆರ್ಟರಿಗಳಲ್ಲಿ ಕೊಬ್ಬನ್ನು ಹೆಚ್ಚಿಸಲು ಕಾರಣವಾಗಬಹುದು.1

ಸಸ್ಯಾಹಾರ ಪದ್ಧತಿಯು ಡಿಸ್ಲಿಪಿಡೀಮಿಯ ನಿರ್ವಹಣೆಗೆ ಸಹಕಾರಿಯಾಗಬಲ್ಲದೇ?

ಸಸ್ಯಾಹಾರ ಪದ್ಧತಿಯಲ್ಲಿ ಸಸ್ಯಗಳು ಮತ್ತು ಸಸ್ಯಾಧಾರಿತ ಆಹಾರಗಳಿಗಷ್ಟೆ ಸ್ಥಳಾವಕಾಶವಿದ್ದು. ಯಾವುದೇ ಮಾಂಸ ಮಡ್ಡಿಗಾಗಲಿ ಅಥವಾ ಪ್ರಾಣಿಗಳ ಉತ್ಪನ್ನಗಳಾದ ಹಾಲು, ಚೀಸ್ ಅಥವಾ ಮೊಟ್ಟೆಗಳಿಗಾಗಲಿ ಪ್ರವೇಶವಿರುವುದಿಲ್ಲ.5

ಸಸ್ಯಾಹಾರ ಪದ್ಧತಿಯಂತಹ ಬರಿ ಸಸ್ಯಾಧಾರಿತ ಆಹಾರಗಳ ಸೇವನೆಯು ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು 2017 ರಲ್ಲಿ ನಡೆಸಿದ ಅಧ್ಯಯನ ಒಂದರಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಆದಾಗ್ಯೂ, ಅಧ್ಯಯನದ ಪ್ರಕಾರ, ಸಸ್ಯಾಧಾರಿತ ಆಹಾರ ಸೇವನೆಯು ಟ್ರೈಗ್ಲಿಸರೈಡ್ ಮಟ್ಟದಲ್ಲಿನ ಇಳಿಕೆಯಲ್ಲಿ ಹೇಳಿಕೊಳ್ಳುವಂತಹ ಕೊಡುಗೆ ನೀಡಿಲ್ಲ.2

ಈ ಕೆಳಗಿನ ಕೆಲವು ಆಹಾರಗಳು ಎಲ್‌ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ:3,4

ಕರಗಬಲ್ಲ ನಾರಿನಾಂಶವನ್ನು ಹೊಂದಿರುವ ಆಹಾರಗಳು: ಕರಗಬಲ್ಲ ನಾರಿನಾಂಶವನ್ನು ಹೊಂದಿರುವ ಆಹಾರಗಳು, ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕೊಲೆಸ್ಟರಾಲನ್ನು ರಕ್ತದಲ್ಲಿ ಬೆರೆಯುವುದಕ್ಕೂ ಮೊದಲೇ ಬಂಧಿಸಿ ದೇಹದಿಂದ ಹೊರಹಾಕಿಬಿಡುತ್ತವೆ. ಹಾಗೆಯೇ ಈ ಆಹಾರಗಳು ಅರಗಲು ತುಂಬಾ ಹೊತ್ತು ಹಿಡಿಯುವುದರಿಂದ ಅಷ್ಟು ಬೇಗ ಹೊಟ್ಟೆ ಹಸಿಯುವುದಿಲ್ಲ. ಇಷ್ಟೇ ಅಲ್ಲದೆ, ತೂಕ ಇಳಿಸಲು ಒದ್ದಾಡುತ್ತಿರುವವರಿಗೆ ಈ ಆಹಾರಗಳು ಸಹಾಯಕವಾಗಿವೆ. ಈ ಕೆಳಗಿನ ಆಹಾರಗಳಲ್ಲಿ ಕರಗಬಲ್ಲ ನಾರಿನಾಂಶ ಹೇರಳವಾಗಿರುತ್ತದೆ:

 • ತರಕಾರಿಗಳಾದ ಬೆಂಡೆಕಾಯಿ, ಬದನೆ, ಗೆಣಸು, ಶತಾವರಿ ಮತ್ತು ಕ್ಯಾರೆಟ್ 
 • ದ್ವಿದಳ ಧಾನ್ಯಗಳಾದ ಬೀನ್ಸ್ ಮತ್ತು ಬಟಾಣಿ
 • ಧಾನ್ಯಗಳಾದ ಗೋಧಿ, ಬಾರ್ಲಿ ಮತ್ತು ಓಟ್ಸ್
 • ಮಾವು, ಸೇಬು ಮತ್ತು ಕಿತ್ತಳೆಯಂತಹ ಹಣ್ಣುಗಳು
 • ನಟ್ಸ್: ವಾಲ್‌ನಟ್ಸ್, ಕಡಲೆಕಾಯಿ ಅಥವಾ ಬಾದಾಮಿ ಮುಂತಾದ ಕಾಯಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಕ್ಕೆ ಒಳ್ಳೆಯದು, ಇವು ಎಲ್‌ಡಿಎಲ್ ಮಟ್ಟವನ್ನು 5% ನಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ತರಕಾರಿಯಿಂದ ತೆಗೆದ ಎಣ್ಣೆಗಳು: ಬೆಣ್ಣೆಯನ್ನು ಕಡಿಮೆ ಮಾಡಿ ಅಥವಾ ಅದರ ಬದಲಿಗೆ, ಕೆನೊಲಾ ಇಲ್ಲವೇ ಸೂರ್ಯಕಾಂತಿ ಎಣ್ಣೆಯಂತಹ ತರಕಾರಿಯಿಂದ ತೆಗೆದ ಎಣ್ಣೆಗಳನ್ನು ಬಳಸುವುದರಿಂದ ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡಬಹುದು.

ಡಿಸ್ಲಿಪಿಡೀಮಿಯವನ್ನು ನಿಭಾಯಿಸಲು ಅಗತ್ಯವಾದ ಆಹಾರ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಒತ್ತಡವನ್ನು ನಿಯಂತ್ರಣದಲ್ಲಿಡುವುದು, ನಿಯಮಿತ ದೈಹಿಕ ಚಟುವಟಿಕೆ, ಧೂಮಪಾನವನ್ನು ಬಿಡುವುದು ಮತ್ತು ಆಲ್ಕೊಹಾಲ್ ಸೇವನೆಯನ್ನು ಸೀಮಿತಗೊಳಿಸುವುದು ಹಾಗೂ ಪ್ರತಿದಿನ ಇರುಳಿನ ಹೊತ್ತು 7-9 ಗಂಟೆಗಳವರೆಗೆ ನೆಮ್ಮದಿಯಾಗಿ ನಿದ್ರೆ ಮಾಡುವುದು ಮುಂತಾದ ಆರೋಗ್ಯಕರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯ .4

ಸಸ್ಯಾಹಾರ ಪದ್ಧತಿಯಲ್ಲಿ ಸರಿಯಾದ ಪೋಷಕಾಂಶಗಳನ್ನು ಪಡೆಯಲು ನಿಮ್ಮ ಆಹಾರಕ್ರಮದಲ್ಲಿ ವಿವಿಧ ಹಣ್ಣು, ತರಕಾರಿ, ಧಾನ್ಯ, ದ್ವಿದಳ ಧಾನ್ಯ, ನಟ್ಸ್ ಮತ್ತು ಅನ್‍ಸ್ಯಾಚುರೇಟೆಡ್ ಎಣ್ಣೆಗಳನ್ನು ಸೇರಿಸಬೇಕು ಹಾಗೂ ಸಾಕಷ್ಟು ನೀರನ್ನು ಕುಡಿಯಬೇಕು ಎಂಬುದನ್ನು ಮರೆಯಬಾರದು. ಇವುಗಳ ಉಪಸ್ಥಿತಿಯು ನಿಮ್ಮ ದೇಹಕ್ಕೆ ಅಗತ್ಯವಿರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ನಂತಹ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತವೆ. ಪ್ರತಿದಿನದ ಅಗತ್ಯತೆಯಾದ ವಿಟಮಿನ್ ಡಿ ಅನ್ನು ಪಡೆಯಲು ದಿನದ ಕೆಲಹೊತ್ತು ಬಿಸಿಲಿಗೆ ನಿಮ್ಮ ದೇಹವನ್ನು ಒಡ್ಡಿ.5

ಆಹಾರ ಚೆನ್ನಾಗಿ ಜೀರ್ಣವಾಗಲು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ಹದ್ದುಬಸ್ತಿನಲ್ಲಿಡಲು, ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಸ್ಯಾಹಾರ ಪದ್ಧತಿ ಹೊಂದಿದೆ.5

ಸಸ್ಯಾಹಾರಿ ಪದ್ಧತಿಯನ್ನು ಅಳವಡಿಸಿಕೊಳ್ಳಿ, ನಿಮ್ಮ ಹೃದಯಕ್ಕಾಗಿ ಚಿಂತಿಸುವುದನ್ನು ಬಿಟ್ಟುಬಿಡಿ; ನಿಮ್ಮ ಜೀವನವನ್ನು ಪೂರ್ಣವಾಗಿ ಜೀವಿಸಿ.


ಉಲ್ಲೇಖಗಳು:

 

 1. Endocrine Society. Dislipidemia [Internet]. [updated 2018 May; cited 2019 Nov 29]. Available from: https://www.hormone.org/diseases-and-conditions/dyslipidemia.
 2. Yokoyama Y, Levin SM, Barnard ND. Association between plant-based diets and plasma lipids: a systematic review and meta-analysis. Nutr Rev. 2017 Sep 1;75(9):683-698.
 3. Harvard Health Publishing. 11 foods that lower cholesterol [Internet]. [updated 2019 Feb 6; cited 2019 Nov 29]. Available from: https://www.health.harvard.edu/heart-health/11-foods-that-lower-cholesterol.
 4. Scarlett E. Dietary approaches for managing hyperlipidemia [Internet]. [updated 2018 Dec 7; cited 2019 Nov 29]. Available from: https://medicine.umich.edu/sites/default/files/content/downloads/Scarlett%20Erin%20December%207%20Dietary%20Approaches.pdf
 5. NHS. The vegan diet [Internet]. [updated 2018 Aug 2; cited 2019 Nov 29]. Available from: https://www.nhs.uk/live-well/eat-well/the-vegan-diet/.

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.