Eat colourful
Reading Time: 2 minutes


ಮಳೆಬಿಲ್ಲನ್ನು ತಿನ್ನುವ ಬಯಕೆ ನಿಮಗೆ ಎಂದಾದರೂ ಆಗಿದೆಯೇ? ಬಣ್ಣಬಣ್ಣದ ಆಹಾರಗಳು ನಿಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವುದಲ್ಲದೆ, ಸರಿಯಾದ ಪೋಷಣೆಯನ್ನೂ ಒದಗಿಸುತ್ತವೆ.(1,2) ಹಣ್ಣು ಮತ್ತು ತರಕಾರಿಗಳ ಚಂದದ ಬಣ್ಣಗಳು, ಅವುಗಳಲ್ಲಿ ಬಗೆಬಗೆಯ ಬಯೋಆ್ಯಕ್ಟಿವ್‌ ಅಂಶಗಳು, ವಿಟಮಿನ್‌ಗಳು, ಖನಿಜಗಳು ಹಾಗೂ ಹಲವು ಇತರ ಮುಖ್ಯವಾದ ಅಂಶಗಳು ಹೇರಳವಾಗಿವೆ ಎಂಬುದರ ಗುರುತಾಗಿದೆ.(1,2)

ಬಗೆಬಗೆಯ ಬಣ್ಣಬಣ್ಣದ ಆಹಾರಗಳಿಂದ ತುಂಬಿರುವ ಆಹಾರಕ್ರಮವು, ಡಿಸ್ಲಿಪಿಡೀಮಿಯಾದ ನಿರ್ವಹಣೆಯಲ್ಲಿ ನೆರವಾಗಬಹುದು.(1) ಡಿಸ್ಲಿಪಿಡೀಮಿಯಾದಲ್ಲಿ ಬಣ್ಣಬಣ್ಣದ ಹಾಗೂ ಬಗೆಬಗೆಯ ಆಹಾರಗಳ ಮಹತ್ವವನ್ನು, ಈ ಬರಹ ತಿಳಿಸಿಕೊಡಲಿದೆ.

ಡಿಸ್ಲಿಪಿಡೀಮಿಯಾ ಎಂದರೇನು?

ಲಿಪೊಪ್ರೋಟೀನ್‌ಗಳ ಮೆಟಬಾಲಿಸಂ ಮೇಲೆ ಪ್ರಭಾವ ಬೀರುವ ಸ್ಥಿತಿಯನ್ನು ಡಿಸ್ಲಿಪಿಡೀಮಿಯಾ ಎನ್ನುತ್ತಾರೆ. ಇದರಿಂದ, ಒಟ್ಟು ಸೆರಂ ಕೊಲೆಸ್ಟರಾಲ್‌, ಲೋ-ಡೆನ್ಸಿಟಿ ಲಿಪೊಪ್ರೋಟೀನ್‌ಗಳು, ಟ್ರೈಗ್ಲಿಸರೈಡ್‌ಗಳ ಮಟ್ಟ ಹೆಚ್ಚಾಗುತ್ತದೆ ಹಾಗೂ ಹೈ-ಡೆನ್ಸಿಟಿ ಲಿಪೊಪ್ರೋಟೀನ್‌ಗಳ ಮಟ್ಟ ಕಡಿಮೆಯಾಗುತ್ತದೆ(3)

ಡಿಸ್ಲಿಪಿಡೀಮಿಯಾದಿಂದಾಗಿ, ಇಸ್ಕೀಮಿಕ್‌ ಹೃದ್ರೋಗ ಮತ್ತು ಬೇರೆ ಹೃದಯದ ತೊಂದರೆಗಳಿಗೆ ಎಡೆ ಮಾಡಿಕೊಡುವ ಹೃದಯದ ರಕ್ತನಾಳಗಳ ಅಗಲಕಿರಿದಾಗುವಿಕೆಯ ಸಾಧ್ಯತೆ ನಿಮ್ಮಲ್ಲಿ ಹೆಚ್ಚಾಗುತ್ತದೆ.(3)

ಡಿಸ್ಲಿಪಿಡೀಮಿಯಾದಲ್ಲಿ ಯಾವ ಬಗೆಯ ಆಹಾರಕ್ರಮ ಸೂಚಿಸಲಾಗುತ್ತದೆ?

ಡಿಸ್ಲಿಪಿಡೀಮಿಯಾದ ನಿರ್ವಹಣೆಯಲ್ಲಿ, ಜೀವನಶೈಲಿ ಮತ್ತು ಆಹಾರಕ್ರಮದ ಬದಲಾವಣೆಗಳು ನೆರವಾಗುತ್ತವೆ.(1) ದೇಹಕ್ಕೆ ಬಹಳ ಮುಖ್ಯವಾದ ಖನಿಜಗಳು, ವಿಟಮಿನ್‌ಗಳು ಹಾಗೂ ಆ್ಯಂಟಿಆಕ್ಸಿಡಂಟ್‌ಗಳನ್ನು ಒದಗಿಸಲು, ಬಗೆಬಗೆಯ ಬಣ್ಣಬಣ್ಣದ ಆಹಾರಗಳನ್ನು ತಿನ್ನುವುದು ಸರಳವಾದ ಮತ್ತು ಆರೋಗ್ಯಕರವಾದ ದಾರಿಯಾಗಿದೆ.(2) ಡಿಸ್ಲಿಪಿಡೀಮಿಯಾವನ್ನು ನಿರ್ವಹಿಸಲು, ಈ ಕೆಳಗಿನ ಆಹಾರಕ್ರಮದ ಬದಲಾವಣೆಗಳನ್ನು ಸೂಚಿಸಲಾಗುತ್ತದೆ:

– ಸ್ಯಾಚುರೇಟಡ್‌, ಟ್ರಾನ್ಸ್‌ ಕೊಬ್ಬು ಹಾಗೂ ಕೊಲೆಸ್ಟರಾಲ್‌ ತುಂಬಿದ ಆಹಾರಗಳನ್ನು ಕಡಿಮೆ ತಿನ್ನಿ.(4)
– ಕರಗಬಲ್ಲ ನಾರನ್ನು ಹೆಚ್ಚೆಚ್ಚು ತಿನ್ನಿ.(4)
– ಕಾರ್ಬೊಹೈಡ್ರೇಟ್‌ ಹೇರಳವಾಗಿರುವ ಆಹಾರಗಳನ್ನು ಕಡಿಮೆ ತಿನ್ನಿ.(2,4)
– ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಆ್ಯಂಟಿಆಕ್ಸಿಡಂಟ್‌ಗಳು ಹಾಗೂ ಕೊಲೆಸ್ಟರಾಲ್‌ ಇಳಿಸುವ ಆಹಾರಗಳನ್ನು ಸೇರಿಸಿ.(.2,4)

ಡಿಸ್ಲಿಪಿಡೀಮಿಯಾದ ನಿರ್ವಹಣೆಯಲ್ಲಿ, ಬಣ್ಣಬಣ್ಣದ ಬಗೆಬಗೆಯ ಆಹಾರಗಳ ಪಾತ್ರವೇನು?

ಬಣ್ಣಬಣ್ಣದ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ನೆಮ್ಮದಿ, ನಲಿವು, ಕ್ರಿಯಾಶೀಲತೆ, ಕುತೂಹಲ ಮೂಡುತ್ತದೆ, ಹಾಗೂ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಅದಷ್ಟೆ ಅಲ್ಲ, ನಮ್ಮನ್ನು ದೈಹಿಕವಾಗಿ ಆರೋಗ್ಯವಾಗಿಡಲು, ಇಂತಹ ಆಹಾರಗಳು ಕೂಡ ತಮ್ಮ ಕೊಡುಗೆ ನೀಡುತ್ತವೆ. ಬಹುತೇಕ ಸಸ್ಯಾಹಾರಗಳಲ್ಲಿ, ಒಂದಕ್ಕಿಂತ ಹೆಚ್ಚು ಬಣ್ಣದ ಪಿಗ್ಮೆಂಟ್‌ ಇರುತ್ತದೆ. ಅವುಗಳ ಬಣ್ಣದ ದಟ್ಟಣೆ, ಅವುಗಳಲ್ಲಿರುವ ಫೈಟೊಪೋಷಕಾಂಶಗಳ ಮೇಲೆ ನಿಂತಿದೆ. ಕೆಲವು ಉದಾಹರಣೆಗಳು ಹೀಗಿವೆ:

– ಕೆರಾಟಿನಾಯ್ಡ್‌ ತುಂಬಿರುವ ಆಹಾರಗಳಿಗೆ ಕಿತ್ತಳೆ ಬಣ್ಣವಿರುತ್ತದೆ.(2)
– ಫ್ಲೇವನಾಯ್ಡ್‌ ತುಂಬಿರುವ ಆಹಾರಗಳಲ್ಲಿ ನೇರಳೆ ಹಾಗೂ ಹಳದಿ ಬಣ್ಣದ ಪಿಗ್ಮೆಂಟ್‌ಗಳಿರುತ್ತವೆ.(2,5)
– ಕ್ಲೋರೊಫಿಲ್‌ ಇರುವ ಆಹಾರಗಳಿಗೆ ಹಸಿರು ಬಣ್ಣವಿರುತ್ತದೆ.(2)
– ಲೈಕೊಪೀನ್‌ ಇರುವ ಆಹಾರಗಳಿಗೆ ಕೆಂಪು ಬಣ್ಣವಿರುತ್ತದೆ.(2)

ಬಗೆಬಗೆಯ ಹಣ್ಣು ತರಕಾರಿಗಳಿಂದ ಫೈಟೊಕೆಮಿಕಲ್ಸ್‌ ತಿನ್ನುವುದು ಹೆಚ್ಚಾಗುವುದರಿಂದ, ತೂಕದಲ್ಲಿ ಹೆಚ್ಚಳವಾಗದು, ತೂಕ ಇಳಿಯುವುದು, ಲಿಪಿಡ್‌ಗಳ ಮಟ್ಟ ಸುಧಾರಿಸುತ್ತದೆ ಹಾಗೂ ಹೈಪರ್‌ಟೆನ್ಶನ್‌ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಕೆಲವು ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಉದಾಹರಣೆಗೆ, ಬಿಳಿ ಮತ್ತು ಕಡು ಕಿತ್ತಳೆ ಬಣ್ಣದ ಹಣ್ಣು ತರಕಾರಿಗಳು, ಪಾರ್ಶ್ವವಾಯು ಮತ್ತು ಕೊರೊನರಿ ಹೃದ್ರೋಗದ ಸಾಧ್ಯತೆಯನ್ನು ಕಡಿಮೆ ಮಾಡಿದವು. ಟೊಮ್ಯಾಟೊದಂತಹ ಕೆಂಪು ಬಣ್ಣದ ಆಹಾರಗಳಿಂದ ಲಿಪಿಡ್‌ ಮಟ್ಟಗಳಲ್ಲಿ ಸುಧಾರಣೆ ಕಂಡುಬಂದಿತು.(1,2) ಅಂತಹ ಆಹಾರಕ್ರಮದಲ್ಲಿ ನಾರು ಕೂಡ ಹೆಚ್ಚಾಗಿರಬಹುದು, ಕ್ಯಾಲರಿಗಳು ಕಡಿಮೆ ಇರಬಹುದು ಹಾಗೂ ಸಾಕಷ್ಟು ಪೋಷಕಾಂಶಗಳು ತುಂಬಿರಬಹುದು.(1,2) ಬಗೆಬಗೆಯ ಬಣ್ಣಬಣ್ಣದ ಆಹಾರಗಳಲ್ಲಿ, ಮ್ಯಾಕ್ರೊ ಪೋಷಕಾಂಶಗಳು, ಮೈಕ್ರೊ ಪೋಷಕಾಂಶಗಳು ಹಾಗೂ ಶಕ್ತಿಯ ದಟ್ಟಣೆ ಹೇರಳವಾಗಿರುತ್ತವೆ. ಹಾಗಾಗಿ, ಕ್ಯಾಲರಿಗಳನ್ನು ಹೆಚ್ಚು ಮಾಡದೆ, ಡಿಸ್ಲಿಪಿಡೀಮಿಯಾದ ನಿರ್ವಹಣೆಯಲ್ಲಿ ಅವು ನೆರವಾಗಬಹುದು.(1)

ಡಿಸ್ಲಿಪಿಡೀಮಿಯಾದಲ್ಲಿ ನೆರವಾಗುವ ಕೆಲವು ಬಣ್ಣಬಣ್ಣದ ಬಗೆಬಗೆಯ ಆಹಾರಗಳೆಂದರೆ:

– ಓಟ್ಸ್‌, ಸಿರಿಧಾನ್ಯಗಳು ಮತ್ತು ಬಾರ್ಲಿಯಂತಹ ಆಹಾರಗಳಲ್ಲಿರುವ ಕರಗಬಲ್ಲ ನಾರು, ಕೊಲೆಸ್ಟರಾಲ್‌ ದಟ್ಟಣೆಯನ್ನು ಕಡಿಮೆ ಮಾಡುತ್ತವೆ.(5)
– ಸೋಯಾಅವರೆ, ಬೀನ್ಸ್‌ ಮತ್ತು ಬೇರೆ ಬೇಳೆಗಳಲ್ಲಿ ಪ್ರೋಟೀನ್‌ಗಳಿದ್ದು, ಅವು ಕೊಲೆಸ್ಟರಾಲ್‌ ತಗ್ಗಿಸಲು ನೆರವಾಗುತ್ತವೆ.(5)
– ದ್ರಾಕ್ಷಿ, ಕೊಕೊ, ಚಕ್ಕೆ ಮತ್ತು ಕ್ರ್ಯಾನ್‌ಬೆರಿಗಳು, ಪಾಲಿಫಿನಾಲ್‌ಗಳು ತುಂಬಿರುವ ಬಣ್ಣದ ಆಹಾರಗಳಾಗಿದ್ದು, ಅವು ತಮ್ಮ ಆ್ಯಂಟಿಆಕ್ಸಿಡಂಟ್‌ ಗುಣದಿಂದಾಗಿ ಕೊಲೆಸ್ಟರಾಲ್‌ ತಗ್ಗಿಸುತ್ತವೆ ಹಾಗೂ ಎಂಡೊಜಿನಸ್‌ ಕೊಲೆಸ್ಟರಾಲ್‌ ಸಿಂತೆಸಿಸ್‌ ಅನ್ನು ತಡೆಯುವ ಶಕ್ತಿ ಹೊಂದಿವೆ.(5)
– ಅರಿಶಿನದಲ್ಲಿ ಉರಿಯೂತ ತಗ್ಗಿಸುವ ಮತ್ತು ಆ್ಯಂಟಿಆಕ್ಸಿಡಂಟ್‌ ಗುಣಗಳಿದ್ದು, ಅದು ಆರೋಗ್ಯಕರ ಲಿಪಿಡ್‌ ಮಟ್ಟ ಕಾಪಾಡಲು ನೆರವಾಗುತ್ತದೆ ಎಂದು ಸಾಬೀತಾಗಿದೆ.(5)
– ಈರುಳ್ಳಿಯಲ್ಲಿ ಫೈಟೊಕೆಮಿಕಲ್‌ಗಳು ತುಂಬಿದ್ದು, ಒಳ್ಳೆಯ ಕೊಲೆಸ್ಟರಾಲ್‌ ಹೆಚ್ಚಿಸಲು ಹಾಗೂ ಕೆಟ್ಟ ಕೊಲೆಸ್ಟರಾಲ್‌ ತಗ್ಗಿಸಲು ನೆರವಾಗುತ್ತವೆ.(5)

ಇಂತಹ ಆಹಾರಕ್ರಮದ ವಿಶೇಷತೆಯೆಂದರೆ, ಇದರಲ್ಲಿ ಪೋಷಕಾಂಶಗಳು ದಟ್ಟವಾಗಿರುತ್ತವೆ ಮತ್ತು ಹಲವು ಬಗೆಗಳಲ್ಲಿರುತ್ತವೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಕಡಿಮೆ ಬಗೆಯ ಆಹಾರಗಳಿರುವ ಆಹಾರಕ್ರಮಕ್ಕೆ ಹೋಲಿಸಿದರೆ, ಈ ಆಹಾರಕ್ರಮವು, ಆರೋಗ್ಯ ತೊಂದರೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.(2)
ನಿಮ್ಮ ಕೊಲೆಸ್ಟರಾಲ್‌ ಅನ್ನು ಅಂಕೆಯಲ್ಲಿಡಲು, ಬಗೆಬಗೆಯ, ಬಣ್ಣಬಣ್ಣದ ಹಾಗೂ ಆರೋಗ್ಯಕರ ಆಹಾರಗಳನ್ನು ಆರಿಸಿಕೊಳ್ಳಿ. ಒಳ್ಳೆಯ ಆರೋಗ್ಯದ ಬಣ್ಣಗಳಿಂದ ತುಂಬಿಕೊಂಡು, ನಿಮ್ಮ ಬಾಳು ಬೆಳಗಲಿ.

ಉಲ್ಲೇಖಗಳು: 

  1. Schwellnus MP, Patel DN, Nossel C, Dreyer M, Whitesman S, Derman W. Healthy lifestyle interventions in general practice. Part 8: Lifestyle and dyslipidaemia. S Afr Fam Pract. 2009;51(6):453-460. doi: 10.1080/20786204.2009.10873903.
  2. Minich DM. A review of the science of colorful, plant-based food and practical strategies for “Eating the Rainbow”. J Nutr Metab. 2019 Jun 2;(2):1-19. doi: https://doi.org/10.1155/2019/2125070.
  3. Ahmed, SM, Clasen, ME, Donnelly, JE. Management of dyslipidemia in adults. Am Fam Physician. 1998 May 1;57(9):2192-2204, 2207-8.
  4. Kelly, RB. Diet and exercise in the management of hyperlipidemia. Am Fam Physician. 2010 May 1;81(9):1097-102.
  5. Rosa Cde O, dos Santos CA, Leite JIA, Caldas APS, Bressan J. Impact of nutrients and food components on dyslipidemias: what is the evidence? Adv Nutr. 2015 Nov 13;6(6):703-11. doi: 10.3945/an.115.009480.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.