Reading Time: 2 minutes

ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿ 17 ವರ್ಷಗಳ ಅನುಭವ ಇರುವ ರಿಜಿಸ್ಟರ್ಡ್ ಡಯಟೀಶಿಯನ್ ಅಶ್ವಿನಿ ಎಸ್.ಕಾನಡೆ ಅವರು ನುರಿತ-ವಿಮರ್ಶೆ ಮಾಡಿದ್ದಾರೆ.

ಡಯಾಬಿಟಿಸ್ ಅನ್ನು ನಿರ್ವಹಿಸುವುದರಲ್ಲಿ ಮತ್ತದನ್ನು ತಡೆಯುವುದರಲ್ಲಿ ಡಾಕ್ಟರ್ ನಿಜಕ್ಕೂ ನಿಮಗೆ ಉತ್ತಮ ಮಾರ್ಗದರ್ಶಿಯಾಗಬಹುದು. ಆದ್ದರಿಂದ, ನಿಮ್ಮ ಡಯಾಬಿಟಿಸ್ ಡಾಕ್ಟರ್ ಭೇಟಿಯಿಂದ ಉತ್ತಮವಾದದ್ದನ್ನು ಪಡೆಯಲು ಸಿದ್ಧರಾಗಿ ಮತ್ತು ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳಿ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಯ ಕನ್ಸಲ್ಟೆಂಟ್, ಎಂಡೋಕ್ರಿನಾಲೊಜಿಸ್ಟ್ ಮತ್ತು ಡಯಾಬಿಟೊಲೊಜಿಸ್ಟ್ ಆಗಿರುವ ಡಾ.ಮಂಜುನಾಥ ಮಳಿಗೆ ಅವರು ನಮಗೆ ಆರು ಉತ್ತಮವಾದ ಸಲಹೆಗಳನ್ನು ಕೊಟ್ಟಿದ್ದಾರೆ. ಇದು ನಿಮ್ಮ ಮುಂದಿನ ಡಯಾಬಿಟೊಲೊಜಿಸ್ಟ್ ಭೇಟಿಯಲ್ಲಿ ನೀವು ಹೆಚ್ಚಿನದನ್ನು ಪಡೆಯಲು ಸಹಾಯ ಮಾಡುತ್ತದೆ.

  1. ನಿಮ್ಮ ರಕ್ತದ ಸಕ್ಕರೆಯ ಮಟ್ಟದ ದಾಖಲೆಗಳನ್ನು ತನ್ನಿ

ಕೊನೆಯ ಬಾರಿಗೆ ನಿಮ್ಮ ಡಾಕ್ಟರ್ ನಿಮ್ಮನ್ನು ಭೇಟಿಯಾದಾಗಿನಿಂದ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೇಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ, ಅಗತ್ಯವಿದ್ದರೆ, ನಿಮ್ಮ ಚಿಕಿತ್ಸೆಯನ್ನು ಬದಲಾಯಿಸುವ ಬಗ್ಗೆ ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಅವರಿಗೆ ಸಹಾಯ ಮಾಡಲು, ಮನೆಯಲ್ಲಿ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಮಾನಿಟರ್ ಮಾಡಲು ಪ್ರಾರಂಭಿಸಿ. ಗ್ಲುಕೋಮೀಟರ್‌ ಬಳಸಿ ಈ ಕೆಲಸವನ್ನು ಸುರಕ್ಷಿತವಾಗಿ, ವೇಗವಾಗಿ ಮತ್ತು ಅನುಕೂಲಕರವಾಗಿ ಮಾಡಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿನಕ್ಕೆ ಹೆಚ್ಚೆಂದರೆ ಎರಡು ಬಾರಿ ಅಥವಾ ಎರಡು ದಿನಕ್ಕೊಮ್ಮೆ ನೀವು ಪರಿಶೀಲಿಸಬೇಕು. ನಿಮ್ಮ ರಕ್ತದ ಸಕ್ಕರೆ ಮಟ್ಟದ ಮಾದರಿಗಳ ಬಗ್ಗೆ ನಿಗಾ ಇಡಲು, ಒಂದು ದಿನಚರಿ ಪುಸ್ತಕವನ್ನಿಟ್ಟು ಅದರಲ್ಲಿ ನಿಮ್ಮ ಗ್ಲುಕೋಮೀಟರ್‌ನ ಫಲಿತಾಂಶಗಳನ್ನು ಪಟ್ಟಿ ಮಾಡಿ. ಮುಂದಿನ ಭೇಟಿಯಲ್ಲಿ ನಿಮ್ಮ ಡಾಕ್ಟರ್ ಇದನ್ನು ನೋಡಿದಾಗ, ನಿಮ್ಮ ರಕ್ತದ ಸಕ್ಕರೆ ಮಟ್ಟವು ಅತೀ ಹೆಚ್ಚು ಅಥವಾ ಅತೀ ಕಡಿಮೆ ಏಕೆ ಆಗುತ್ತಿದೆ ಎಂಬುದನ್ನು ನಿರ್ಣಯಿಸಲು ಅವರಿಗೆ ಸಾಧ್ಯವಾಗುತ್ತದೆ.

ಗ್ಲುಕೋಮೀಟರನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿಯಲು ನಮ್ಮ ನುರಿತ ಕೈಪಿಡಿಯನ್ನು ಓದಿ.

  1. ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಪಟ್ಟಿ ಮಾಡಿ

ಕನ್ಸಲ್ಟೇಶನ್‌ಗೆ ಹೋಗುವ ಮುನ್ನ, ಡಾಕ್ಟರ್ ಬಳಿ ನೀವು ಕೇಳಬಯಸುವ ಎಲ್ಲಾ ಪ್ರಶ್ನೆಗಳನ್ನು ಪಟ್ಟಿ ಮಾಡಿ‌. ಹೀಗೆ ಮಾಡುವುದರಿಂದ ಯಾವುದೇ ಪ್ರಶ್ನೆಗಳನ್ನು ಮರೆಯುವ ಸಾಧ್ಯತೆ ಇರುವುದಿಲ್ಲ. ನಿಮ್ಮ ಪ್ರಶ್ನೆಗಳ ಪಟ್ಟಿಯಲ್ಲಿ ನೀವು ಸೇರಿಸಿಕೊಳ್ಳಬಹುದಾದ ಕೆಲವು ಪ್ರಶ್ನೆಗಳು ಇಲ್ಲಿವೆ:

ನನ್ನ ಡಯಾಬಿಟಿಸ್‌ ನಿಯಂತ್ರಣದಲ್ಲಿದೆಯೇ? ನನ್ನ ಆಹಾರಕ್ರಮ ಅಥವಾ ವ್ಯಾಯಾಮವನ್ನು ಬದಲಾಯಿಸಬೇಕೆ?ಮೂತ್ರಪಿಂಡಗಳಿಗೆ, ಹೃದಯಕ್ಕೆ ಅಥವಾ ಕಣ್ಣುಗಳಿಗೆ ಹಾನಿಯಾಗುವುದು, ಅಧಿಕ ರಕ್ತದೊತ್ತಡ – ಇಂತಹ ಡಯಾಬಿಟಿಸ್ ಸಂಬಂಧಿತ ತೊಂದರೆಗಳ ಯಾವುದಾದರೂ ಕುರುಹು ಇದೆಯೇ?
ಡಯಾಬಿಟಿಸ್ ಸಂಬಂಧಿತ ಆರೋಗ್ಯ ಸಮಸ್ಯೆಗಳು ಎದುರಾಗುವ ಅಪಾಯ ಏನಾದರು ಇದೆಯೇ? ಹಾಗಿದ್ದಲ್ಲಿ, ಇವನ್ನು ಬೇಗನೆ ಹೇಗೆ ಪರಿಹರಿಸಬಹುದು.
ನನ್ನ ಔಷಧಿಗಳನ್ನು ಬದಲಾಯಿಸಬೇಕೆ? (ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳಿಂದ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿದ್ದರೆ, ಈ ಪ್ರಶ್ನೆಯನ್ನು ತಪ್ಪದೇ ಕೇಳಿ)

  1. ನಿಮ್ಮ ರೋಗದ ಲಕ್ಷಣಗಳನ್ನು ಬಹಿರಂಗವಾಗಿ ಚರ್ಚಿಸಿ

ಭೇಟಿಗಳ ನಡುವೆ ನೀವು ಯಾವುದೇ ಸಾಮಾನ್ಯವಲ್ಲದ ಲಕ್ಷಣಗಳನ್ನು ಗಮನಿಸಿದರೆ, ಅವುಗಳನ್ನು ಪಟ್ಟಿ ಮಾಡಿ. ವಿಶೇಷವಾಗಿ ಅವು ಯಾವ ಹೊತ್ತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಪಟ್ಟಿಮಾಡಿ ಮತ್ತು ಅವು ಎಷ್ಟು ತೀವ್ರವಾಗಿ ಗೋಚರಿಸುತ್ತವೆ ಎಂಬುದರ ಕುರಿತು ನಿಗಾ ಇರಿಸಿ. ಯಾವುದೇ ಸಣ್ಣ ರೋಗ ಲಕ್ಷಣಗಳನ್ನೂ ಬಿಡಬೇಡಿ, ರೋಗ ಲಕ್ಷಣಗಳ ಬಗ್ಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿರುವುದು ಬಹಳ ಮುಖ್ಯ. ಇದು ಡಾಕ್ಟರ್‌ಗೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಸರಿಯಾಗಿ ಪತ್ತೆಹಚ್ಚಲು ಮತ್ತು ಮುಂದಿನ ನಿರ್ವಹಣೆಯನ್ನು ಯೋಜಿಸಲು ಸಹಾಯ ಮಾಡುತ್ತದೆ.

ನೀವು ಕಡೆಗಣಿಸುತ್ತಿರಬಹುದಾದ ಡಯಾಬಿಟಿಸ್ ಸಂಬಂಧಿತ ರೋಗಲಕ್ಷಣಗಳ ಎಂಟು ಆರಂಭಿಕ ಕುರುಹುಗಳ ಬಗ್ಗೆ ಓದಿ.

  1. ನಿಮ್ಮ ಡಯಾಬಿಟಿಸ್ ನಿರ್ವಹಣೆಯ ಅಗತ್ಯ ಮತ್ತು ಗುರಿಗಳನ್ನು ಸ್ಪಷ್ಟವಾಗಿ ವಿವರಿಸಿ

ಡಯಾಬಿಟಿಸ್ ಇರುವವರು, ಹೇಗೆ ಅವರ ಜೀವನಶೈಲಿ ಮತ್ತು ಡಯಾಬಿಟಿಸ್ ಒಂದಕ್ಕೊಂದು ಸಂಬಂಧಿಸಿವೆ ಎನ್ನುವುದನ್ನು ವಿಶ್ಲೇಷಿಸಬೇಕು. ಬಳಿಕ ಡಯಾಬಿಟಿಸನ್ನು ನಿಯಂತ್ರಣದಲ್ಲಿಡಲು ಅವರ ಜೀವನಶೈಲಿಯನ್ನು ಮಾರ್ಪಡಿಸುವ ಕೆಲಸ ಮಾಡಬೇಕು. ಒಂದು ವೇಳೆ, ನೀವು ಹಾಕಿಕೊಂಡಿರುವ ಯೋಜನೆಯ ಪ್ರಕಾರ, ನಿಮ್ಮ ಜೀವನಶೈಲಿಯಲ್ಲಿ ಬಿರುಸಿನ ಬದಲಾವಣೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದರೆ, ಆಗ ನೀವು ಆ ಯೋಜನೆಗೆ ಅಂಟಿಕೊಳ್ಳಲು ಸಾಧ್ಯವಾಗದಿರಬಹುದು.

ನಿಮ್ಮ ಜೀವನಶೈಲಿಗೆ ಯಾವುದು ಹೊಂದುತ್ತದೆ ಮತ್ತು ಯಾವುದು ಹೊಂದುವುದಿಲ್ಲ ಎಂಬುದನ್ನು ಡಾಕ್ಟರ್ ಬಳಿ ಕೇಳುವುದಕ್ಕೆ ಶುರುಮಾಡಿ. ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಡಯಾಬಿಟಿಸ್ ನಿರ್ವಹಣೆಯ ಅಡಿಪಾಯ. ಮತ್ತಿದು ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಬಹುದು.

ಹಾಗೆಯೇ, ವ್ಯಾಯಾಮ ಶುರು ಮಾಡುತ್ತಿದ್ದಂತೆ ಪಾದ ಏಕೆ ಉರಿಯುತ್ತದೆ, ನಾವೇ ಚುಚ್ಚಿಕೊಳ್ಳುವ ಇನ್ಸುಲಿನ್‌ಗೆ ಪರ್ಯಾಯವೇನು, ಪ್ರತೀ ಎರಡು ಮೂರು ಗಂಟೆಗಳಿಗೊಮ್ಮೆ ನಿಮಗೆ ಏಕೆ ಹಸಿವಾಗುತ್ತದೆ? –  ದಿನನಿತ್ಯದ ಬದುಕಿನಲ್ಲಿ ಎದುರಾಗುವ ಇಂತಹ ಚಿಕ್ಕ ಚಿಕ್ಕ ಸಮಸ್ಯೆಗಳ ಕುರಿತೂ ನಿಮ್ಮ ಡಾಕ್ಟರ್ ಬಳಿ ಕೇಳಿ.

  1. ಅತ್ಯುತ್ತಮ ಡಯಾಬಿಟಿಸ್ ಸಾಧನಗಳ ಬಗ್ಗೆ ಕೇಳಿ

ಡಯಾಬಿಟಿಸ್ ನಿರ್ವಹಣೆಯನ್ನು ನಿಮಗೆ ಸುಲಭಗೊಳಿಸುವ ವಿವಿಧ ಸಾಧನಗಳಿವೆ. ಕೆಲವು ಉದಾಹರಣೆಗಳೆಂದರೆ – ಡಯಾಬಿಟಿಸ್ ಡಯಟ್ ಚಾರ್ಟ್‌ಗಳು, ವ್ಯಾಯಾಮದ ಚಾರ್ಟ್‌ಗಳು, ರಕ್ತದ ಸಕ್ಕರೆ ಮಟ್ಟವನ್ನು ಮಾನಿಟರ್ ಮಾಡುವ ಚಾರ್ಟ್‌ಗಳು, ಇನ್ಸುಲಿನ್ ಇಂಜೆಕ್ಷನ್ ತಂತ್ರಗಳ ಚಾರ್ಟ್‌ಗಳು, ಕಡಿಮೆ ಬ್ಲಡ್‌ ಶುಗರ್‌ ಚಾರ್ಟ್‌ಗಳು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವ ಚಾರ್ಟ್‌ಗಳು.

ಹೆಚ್ಚಿನ ಮಾಹಿತಿಯೊಂದಿಗೆ ಗೊಂದಲಕ್ಕೊಳಗಾಗದೆ, ಯಾವುದು ಮುಖ್ಯವಾದುದು ಮತ್ತು ಯಾವುದು ದಿನನಿತ್ಯದ ಜೀವನಕ್ಕೆ ಉಪಯುಕ್ತವಾಗಿರುವುದು ಎಂಬುದನ್ನು ನಿಮ್ಮ ಡಾಕ್ಟರನ್ನು ಕೇಳಿ ತಿಳಿಯಿರಿ.

  1. ನಿಮ್ಮ ಮಕ್ಕಳು ಡಯಾಬಿಟಿಸ್‌ನ ಅಪಾಯದಲ್ಲಿದ್ದಾರೆಯೇ ಎಂಬುದನ್ನು ಕೇಳಿ

ನಿಮಗೆ ಡಯಾಬಿಟಿಸ್ ಇದೆ ಎಂದ ಮಾತ್ರಕ್ಕೆ, ನಿಮ್ಮ ಮಕ್ಕಳಿಗೂ ಇರುತ್ತದೆ ಎಂದೇನಿಲ್ಲ. ಬೊಜ್ಜಿರುವ, ಕಡಿಮೆ ವ್ಯಾಯಾಮ ಮಾಡುವ ಮತ್ತು ಕುಟುಂಬದಲ್ಲಿ ಡಯಾಬಿಟಿಸ್‌ನ ಇತಿಹಾಸವಿರುವ ಮಕ್ಕಳು ಡಯಾಬಿಟಿಸ್ ಬೆಳೆಸಿಕೊಳ್ಳುವ ಅಪಾಯವಿದೆ‌‌. ಹಾಗೆಯೇ, ಡಯಾಬಿಟಿಸ್ ಗಂಭೀರವಾದ ದೀರ್ಘಕಾಲದ ಕಾಯಿಲೆಯಾಗಿದ್ದರೂ, ಅದನ್ನು ನಿಯಂತ್ರಿಸಬಹುದು ಎಂಬುದನ್ನು ಯಾವಾಗಲೂ ನೆನಪಿಡಿ.

ಆಹಾರ ಕ್ರಮದಿಂದ ವ್ಯಾಯಾಮದವರೆಗೆ, ಅಲ್ಲಿಂದ ಪೂರ್ಣ ಜೀವನಶೈಲಿಯ ನಿರ್ವಹಣೆಯವರೆಗೆ, ಸಂಪೂರ್ಣ ಡಯಾಬಿಟಿಸ್ ನಿರ್ವಹಣೆಯ ಯೋಜನೆಯನ್ನು ರಚಿಸಲು ನಿಮ್ಮ ಡಾಕ್ಟರ್ ಜೊತೆ ನೀವು ಕೆಲಸ ಮಾಡಿ.

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.