ನಾವೆಲ್ ಕರೋನ ವೈರಸ್ ಕಾಯಿಲೆ COVID-19 ಗೆ ತುತ್ತಾಗಿರುವ ಮಂದಿಯ ಎಣಿಕೆ ತುಂಬ ಹೆಚ್ಚಾಗುತ್ತಿರುವಂತೆ, ಪ್ರಯಾಣಿಸುವಾಗ ಹೇಗೆ ಸುರಕ್ಷಿತವಾಗಿರಬೇಕು ಎಂಬ ಪ್ರಶ್ನೆಯಿಂದ ಹಿಡಿದು ಪ್ರಯಾಣ ಮಾಡಲೇಬೇಕೇ ಎಂದು ಕೇಳುವವರೆಗೆ ಪ್ರಶ್ನೆಗಳು ಏಳುತ್ತಿವೆ. ಪ್ರಯಾಣ ಮಾಡುವ ವ್ಯಕ್ತಿಯ ಸುರಕ್ಷತೆ ಮಾತ್ರವಲ್ಲ, ಸಮುದಾಯದ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣ ಮಾಡಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.
ಚೀನಾದಲ್ಲಿ ಈ ಕಾಯಿಲೆ ಮೊದಲು ಕಾಣಿಸಿಕೊಂಡಾಗಿನಿಂದ, ಜಗತ್ತಿನಾದ್ಯಂತ ಇದು ಹರಡಿದೆ. ಆದರೆ ಇದಕ್ಕೆ ಮದ್ದನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಸಾಧ್ಯವಾದರೆ, ಎಲ್ಲ ಬಗೆಯ ಪ್ರಯಾಣವನ್ನು ನಿಲ್ಲಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲರಿಗೂ ಸಲಹೆ ನೀಡುತ್ತಿದೆ. ಪ್ರಯಾಣ ಒಂದರಿಂದಲೇ ಕಾಯಿಲೆ ಹರಡುತ್ತದೆ ಎಂದು ಅರ್ಥವಲ್ಲ, ಅದಕ್ಕೆ ಹಲವು ಬೇರೆ ಸಂಗತಿಗಳು ದಾರಿ ಮಾಡಿಕೊಡುತ್ತವೆ.
COVID-19 ನೊಂದಿಗೆ ಹೋರಾಡಿ ಅದನ್ನು ಹಿಡಿತದಲ್ಲಿಡಲು, ಪ್ರಯಾಣವು ಏಕೆ ಕೇಂದ್ರಬಿಂದುವಾಗಿದೆ?
ವಿವೇಚನೆಯಿಂದ ಹೇಳುವುದಾದರೆ, ನೀವು ಗಮನಿಸಬೇಕಾದ ಸಂಗತಿಗಳಲ್ಲಿ ಮುಖ್ಯವಾದುದು, ನೀವು ಎಲ್ಲಿಗೆ ಪ್ರಯಾಣ ಮಾಡಬೇಕೆಂದಿರುವಿರಿ ಎನ್ನುವುದು. ಅಲ್ಲಿ ಹೆಲ್ತ್ಕೇರ್ ಸೌಲಭ್ಯಗಳ ಗುಣಮಟ್ಟ ಹೇಗಿದೆ ಎಂದು ವಿಚಾರಿಸಿ. ಮುಂದೆ, ನಿಮಗೆ ಸೋಂಕು ತಗಲಿದರೆ, ನಿಮ್ಮನ್ನು ನೀವು ಕ್ವಾರಂಟೈನ್ನಲ್ಲಿರಿಸಿಕೊಳ್ಳಲು ಆಗುವುದೇ? ನಿಮ್ಮ ಯೋಜನೆಗಳಲ್ಲಿ ಅದಕ್ಕಾಗಿ ಸಮಯವಿದೆಯೇ? ವಿಶ್ವ ಆರೋಗ್ಯ ಸಂಸ್ಥೆಯು ಜನವರಿಯಿಂದಲೇ ಪ್ರಯಾಣಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಾ ಬಂದಿದೆ (ನಿಯಮಿತ ಅಪ್ಡೇಟ್ಗಳೊಂದಿಗೆ). ಈ ಸಂಸ್ಥೆಯು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಇತರರಿಗೆ ಕಿರಿಕಿರಿಯಾಗದಂತೆ ಕೆಮ್ಮುವ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಹಾಗೂ ಗುಂಪಿನಿಂದ ದೂರವಿರುವುದರಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ತೊಂದರೆಯನ್ನು ನಿರ್ವಹಣೆ ಮಾಡಬೇಕು ಎಂದು ಕರೆ ಕೊಟ್ಟಿದೆ.
ಭಾರತದ ಪ್ರಯಾಣಿಕರಿಗಾಗಿ
ಈ ಕಾಯಿಲೆಯು ಬಹಳ ಬೇಗ ಹರಡುತ್ತದೆ, ಆದರೆ ಕ್ಯಾಬಿನ್ನಲ್ಲಿರುವ ಗಾಳಿಯ ಬಗ್ಗೆ ನೀವು ಚಿಂತಿಸಬೇಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ವರದಿ ಹೇಳುತ್ತದೆ. ಬದಲಿಗೆ, ನೀವು ಕೈಗಳನ್ನು ಎಲ್ಲಿ ಇಡುವಿರಿ ಮತ್ತು ಗೊತ್ತಿದ್ದೊ ಗೊತ್ತಿಲ್ಲದೆಯೊ ಏನನ್ನು ಮುಟ್ಟುವಿರಿ ಎಂಬುದರ ಕಡೆ ಗಮನಹರಿಸಿ.1 ನಿಮ್ಮ ಮುಖ, ಕಣ್ಣುಗಳು, ಮೂಗು ಮತ್ತು ತುಟಿಯನ್ನು ಮುಟ್ಟುವ ಮೊದಲು, ನಿಮ್ಮ ಕೈಗಳನ್ನು ಚೆನ್ನಾಗಿ ಸಾಬೂನು ಇಲ್ಲವೇ ಸ್ಯಾನಿಟೈಸರ್ನಿಂದ ತೊಳೆದುಕೊಳ್ಳುವುದನ್ನು ಮರೆಯಬೇಡಿ.
ಆದರೆ, ಭಾರತವೂ ಸೇರಿದಂತೆ ಹಲವು ದೇಶಗಳು ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣವನ್ನು ತಡೆಯಲು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿವೆ. ವಿದೇಶದಿಂದ ಭಾರತಕ್ಕೆ ಯಾರೇ ಬಂದರೂ, ಅದರಲ್ಲೂ ವಿಶೇಷವಾಗಿ ವೈರಸ್ನ ಅಟ್ಟಹಾಸ ಮುಂದುವರಿಯುತ್ತಿರುವ ದೇಶಗಳಿಗೆ ಅವರು ಹೋಗಿದ್ದರೆ, ಅಂತಹವರನ್ನು 14 ದಿನಗಳು ಪ್ರತ್ಯೇಕವಾಗಿರುವಂತೆ (ಕ್ವಾರಂಟೈನ್ನಲ್ಲಿರುವಂತೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೇಳಿಕೊಳ್ಳುತ್ತಿದೆ. ಜೊತೆಗೆ, ಭಾರತವು ಹಂತಹಂತವಾಗಿ ವಿಮಾನ ಹಾರಾಟ ಮತ್ತು ಗಡಿಗಳಿಂದ ರಸ್ತೆಯ ಮೂಲಕ ಒಳಬರುವುದನ್ನು ಕಟ್ಟುಪಾಡಿಗೊಳಪಡಿಸಿದೆ. ಇಂತಹ ಸನ್ನಿವೇಶದಲ್ಲಿ ಅನಗತ್ಯ ಪ್ರಯಾಣ ಮಾಡದಿದ್ದರೆ ಒಳಿತು.2
ನೀವು ಪ್ರಯಾಣ ಮಾಡಲೇಬೇಕೆಂದರೆ, ಹೋಗಬೇಕಾಗಿರುವ ಪ್ರದೇಶದಲ್ಲಿ ಯಾವ ಸನ್ನಿವೇಶವಿದೆ ಎಂದು ತಿಳಿದುಕೊಳ್ಳಿ ಹಾಗೂ ಬೇಕಾದ ಮುನ್ನೆಚ್ಚರಿಕೆ ವಹಿಸಿ. ನಿಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳಿ ಇಲ್ಲವೇ ಆಲ್ಕೊಹಾಲ್ ಇರುವ ಸ್ಯಾನಿಟೈಸರ್ ಬಳಸಿ. ಅಲ್ಲದೆ, ನಿಮ್ಮ ಮತ್ತು ಇತರರ ನಡುವೆ, ಅದರಲ್ಲೂ ವಿಶೇಷವಾಗಿ ಅವರಿಗೆ ಕಾಯಿಲೆಯಿದ್ದರೆ 3-6 ಅಡಿಗಳ ದೂರ ಕಾಪಾಡಿಕೊಳ್ಳಿ.3 ನೀವು ದೇಶದ ಒಳಗೆ ಪ್ರಯಾಣಿಸಬೇಕೆಂದರೂ ಕೂಡ, ಈ ಪ್ರಶ್ನೆಗಳ ಕಡೆ ಗಮನಹರಿಸಿ ಎಂದು ಸಿಡಿಸಿ (CDC) ಸಲಹೆ ನೀಡುತ್ತದೆ;4
- ನೀವು ಹೋಗಬೇಕಾದ ಜಾಗದಲ್ಲಿ COVID-19 ಜೋರಾಗಿ ಹರಡುತ್ತಿದೆಯೇ?
- ನಿಮ್ಮ ಪ್ರಯಾಣದುದ್ದಕ್ಕೂ ನೀವು ಇತರರಿಗೆ ತುಂಬ ಹತ್ತಿರದಲ್ಲಿ ಇರುತ್ತೀರಾ?
- ನೀವು ಇಲ್ಲವೇ ನಿಮ್ಮ ಪ್ರಯಾಣದ ಜೊತೆಗಾರರು (ನೀವು ಇತರರನ್ನು ಕರೆದೊಯ್ಯುತ್ತಿದ್ದರೆ) ಅನಾರೋಗ್ಯಕ್ಕೆ ಈಡಾಗಬಲ್ಲವರೇ?
- ಒಂದು ವೇಳೆ ನಿಮಗೆ ಸೋಂಕು ತಗಲಿದರೆ, ನೀವು 15 ದಿನಗಳ ಕಾಲ ಬೇರ್ಪಡಿಕೆಯಲ್ಲಿರಲು ನಿಮ್ಮ ಬಳಿ ಜಾಗವಿದೆಯೇ?
- ನೀವು ವಯಸ್ಸಾದವರು (60 ವರ್ಷ ಮೇಲ್ಪಟ್ಟವರು) ಇಲ್ಲವೇ COVID-19 ಸೋಂಕು ಹೆಚ್ಚು ಸುಲಭವಾಗಿ ತಾಗುವ ದೀರ್ಘಕಾಲದ ತೊಂದರೆಗಳಿಂದ ಬಳಲುತ್ತಿರುವವರೊಂದಿಗೆ ವಾಸಿಸುತ್ತೀರಾ?
- ನೀವು ನಿಮ್ಮ ಮನೆಗೆ ಹಿಂತಿರುಗುತ್ತಿದ್ದರೆ, ಸೋಂಕು ನಿಮ್ಮ ಪ್ರದೇಶದಲ್ಲಿ ಇಲ್ಲವೇ ಸಮುದಾಯದಲ್ಲಿ ಹರಡುತ್ತಿದೆಯೇ?
ಈ ಕಾಳಜಿಗೆ ಇರುವ ಕಾರಣವೇನು?
ಬಹಳ ಮಂದಿ ಪ್ರಯಾಣಿಸುವ ಸಾರ್ವಜನಿಕೆ ಸಾರಿಗೆ ಮತ್ತು ಕಿಕ್ಕಿರಿದ ಎಡೆಗಳಲ್ಲಿ ವೈರಸ್ ಬಿರುಸಾಗಿ ಹರಡುತ್ತದೆ ಎಂದು ಈಗಾಗಲೇ ತಿಳಿದಿದೆ. ಅದೇ ಬಗೆಯಲ್ಲಿ, ವಸ್ತುವಿನ ಮೇಲ್ಮೈಗೆ ಅನುಗುಣವಾಗಿ, ವೈರಸ್ ಕೆಲವು ಗಂಟೆಗಳಿಂದ ಹಿಡಿದು ದಿನಗಳವರೆಗೆ ಬೆಳೆಯುತ್ತದೆ ಎಂಬುದು ತಿಳಿದಿರುವುದರಿಂದ, ಕ್ಯಾಬ್ಗಳಲ್ಲಿ ಪ್ರಯಾಣಿಸುವುದು ಕೂಡ ಸುರಕ್ಷಿತವಲ್ಲ. ಹಾಗಾಗಿ, ನೀವು ಮನೆಯಲ್ಲೇ ಸುರಕ್ಷಿತವಾಗಿರುವುದು ಒಳಿತು.
ನೆರವುಕರೆ
ಭಾರತ ಸರ್ಕಾರ ಹೊರಪಡಿಸಿರುವ ಪ್ರಯಾಣಕ್ಕೆ ಸಂಬಂಧಿಸಿದ ಸಲಹೆಗಳನ್ನು ಓದಲು, https://www.mygov.in/covid-19 ಗೆ ಹೋಗಿ. ನಿಮಗೆ ನೆರವು ಇಲ್ಲವೇ ಇನ್ನಷ್ಟು ತಿಳುವಳಿಕೆ ಬೇಕಿದ್ದರೆ, ರಾಷ್ಟ್ರೀಯ ಸಹಾಯವಾಣಿ +91-11-23978046 ಗೆ ಕರೆಮಾಡಿ. ನೀವು +91 9013151515 ಗೆ ಒಂದು ಸಂದೇಶ ಕಳುಹಿಸುವ ಮೂಲಕ, ಭಾರತ ಸರ್ಕಾರ ಹುಟ್ಟುಹಾಕಿರುವ ವಾಟ್ಸಾಪ್ ಚಾಟ್ಬಾಟ್ ಅನ್ನು ಕೂಡ ಬಳಸಿಕೊಳ್ಳಬಹುದು ಇಲ್ಲವೇ ನಿಮ್ಮ ಪ್ರಶ್ನೆಗಳನ್ನು ncov2019@gmail.com ಗೆ ಬರೆದು ಕಳುಹಿಸಿ.
ಉಲ್ಲೇಖಗಳು:
- Joint ICAO-WHO Statement on COVID-19 [Internet]. www.who.int. 2020 [cited 2020 Mar 22]. Available from: https://www.who.int/news-room/articles-detail/joint-icao-who-statement-on-covid-19
- COVID-19 [Internet]. MyGov.in. Government of India; 2020 [cited 2020 Mar 22]. Available from: https://www.mygov.in/covid-19
- Canada PHA of. Coronavirus disease (COVID-19): Travel advice [Internet]. Government of Canada. 2020. Available from: https://www.canada.ca/en/public-health/services/diseases/2019-novel-coronavirus-infection/latest-travel-health-advice.html
- CDC. Coronavirus Disease 2019 (COVID-19) [Internet]. Centers for Disease Control and Prevention. 2020. Available from: https://www.cdc.gov/coronavirus/2019-ncov/travelers/travel-in-the-us.html