Reading Time: 3 minutes

ಜಗತ್ತಿನಾದ್ಯಂತ ಬಹಳಷ್ಟು ಜನರು ತೀವ್ರವಾದ ಡಯಾಬಿಟಿಸ್‌ನಿಂದ ನರಳುತ್ತಿದ್ದಾರೆ, ಅಲ್ಲದೇ ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಲವು ಅಧ್ಯಯನಗಳು ವರದಿ ಮಾಡಿವೆ.1 ಟೈಪ್-2 ಡಯಾಬಿಟಿಸ್ ಎಂಬ ಸ್ಥಿತಿಯಲ್ಲಿ ರೋಗಿಯ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಯಾವಾಗಲೂ ಏರಿದ ಸ್ಥಿತಿಯಲ್ಲೇ ಇರುತ್ತದೆ. ಟೈಪ್-2 ಡಯಾಬಿಟಿಸ್ ಯಾವ ವಯಸ್ಸಿನಲ್ಲಿ ಬೇಕಾದರೂ ಬರಬಹುದು, ಆದರೆ ಸಾಮಾನ್ಯವಾಗಿ ಮಧ್ಯವಯಸ್ಕರಲ್ಲಿ ಇಲ್ಲವೇ ವಯಸ್ಸಾದ ವ್ಯಕ್ತಿಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.2

ಡಯಾಬಿಟಿಸನ್ನು ಸರಿಯಾಗಿ ನಿಯಂತ್ರಿಸದಿದ್ದಾಗ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗಲು ಶುರುವಾಗುತ್ತದೆ. ಹೀಗೆ ರಕ್ತದಲ್ಲಿನ ಅಧಿಕ ಗ್ಲೋಕೋಸ್ ಮಟ್ಟವು, ಡಿಮೆನ್ಶಿಯಾದ ಅಪಾಯ ಹೆಚ್ಚಾಗಲು ಕಾರಣವಾಗಿವೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.3 ಈ ಲೇಖನದಲ್ಲಿ, ಟೈಪ್-2 ಡಯಾಬಿಟಿಸ್ ಹಾಗೂ ಡಿಮೆನ್ಶಿಯಾದ ಅಪಾಯದ ಬಗ್ಗೆ ತಿಳಿಸಲಾಗಿದೆ.

ಡಿಮೆನ್ಶಿಯಾ ಎಂದರೇನು?

ಡಿಮೆನ್ಶಿಯಾ ಕ್ರಮೇಣವಾಗಿ ಹೆಚ್ಚಾಗುವಂತಹ ಕಾಯಿಲೆಯಾಗಿದ್ದು, ಇದು ವ್ಯಾಪಕವಾದ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಂದ ಕೂಡಿದೆ. ಡಿಮೆನ್ಶಿಯಾದಿಂದ ಉಂಟಾಗುವ ತೊಂದರೆಗಳಿಗೆ ಮುಖ್ಯ ಕಾರಣ ಮೆದುಳಿನಲ್ಲಾಗುವ ಅಸಹಜ ಬದಲಾವಣೆಗಳು. ಈ ಬದಲಾವಣೆಗಳು ಒಬ್ಬ ವ್ಯಕ್ತಿಯ ಆಲೋಚಿಸುವ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದ ಅವರಿಗೆ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಇರಬಹುದು, ಆ ಮೂಲಕ ಅವರು ತಮ್ಮದೇ ಕೆಲಸಗಳಿಗಾಗಿ ಇತರರನ್ನು ಅವಲಂಬಿಸಬೇಕಾಗುತ್ತದೆ.4 ಗಾಯಗಳು ಹಾಗೂ ರೋಗಗಳು, ಡಿಮೆನ್ಶಿಯಾದ ಪ್ರಮುಖ ಕಾರಣವಾಗಿವೆ. ರಕ್ತನಾಳಗಳ ಡಿಮೆನ್ಶಿಯಾ ಮತ್ತು ಆಲ್ಜೈಮರ್ ಕಾಯಿಲೆಯು, ಡಿಮೆನ್ಶಿಯಾದ ಸಾಮಾನ್ಯ ವಿಧಗಳಾಗಿವೆ.5

ಡಿಮೆನ್ಶಿಯಾದ ಚಿಹ್ನೆಗಳು ಹಾಗೂ ಗುಣಲಕ್ಷಣಗಳು ಹೀಗಿವೆ:5                                                          

 • ಇತ್ತೀಚಿನ (ಶಾರ್ಟ್-ಟರ್ಮ್) ಘಟನೆಗಳ ಮರೆಯುವಿಕೆ
 • ಮಾತನಾಡಲು ತೊಂದರೆ ಅಥವಾ ಕಷ್ಟವಾಗುವುದು
 • ಕಲಿಕೆ, ಲೆಕ್ಕಚಾರ ಹಾಗೂ ಗ್ರಹಿಸುವಲ್ಲಿ ತೊಂದರೆ
 • ವೈಯಕ್ತಿಕ ಆರೈಕೆಗಾಗಿ ಸಹಾಯದ ಅಗತ್ಯ
 • ನಡುವಳಿಕೆಯಲ್ಲಿ ವ್ಯತ್ಯಾಸ
 • ಸಮಯ ಮತ್ತು ಜಾಗದ ಅರಿವಿಲ್ಲದಿರುವುದು
 • ನಡೆಯಲು ತೊಂದರೆ ಅಥವಾ ಕಷ್ಟವಾಗುವುದ

ಟೈಪ್-2 ಡಯಾಬಿಟಿಸ್ ಡಿಮೆನ್ಶಿಯಾದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಟೈಪ್-2 ಡಯಾಬಿಟಿಸ್‌ಗೆ ರಕ್ತದಲ್ಲಿನ ಅತಿಯಾದ ಸಕ್ಕರೆಯ ಅಂಶವೇ ಕಾರಣ, ಅಂದರೆ ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟ, ಇದು ಮೆದುಳಿನ ಮೇಲೆಯೂ ಸಹ ಪರಿಣಾಮ ಬೀರಬಹುದು. ಇದು ಆಲ್ಜೈಮರ್ ಕಾಯಿಲೆಗೆ ಕಾರಣವಾಗಬಹುದು ಮತ್ತು ಅಲ್ಜೈಮರ್ ಕಾಯಿಲೆಯೂ ಮುಂಬರುವ ವರ್ಷಗಳಲ್ಲಿ ಬರಬಹುದಾದ ಡಿಮೆನ್ಶಿಯಾದ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.6

ಟೈಪ್-2 ಡಯಾಬಿಟಿಸ್ ಹೇಗೆ ಡಿಮೆನ್ಶಿಯಾದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದರ ಸಂಭವನೀಯ ರೋಗಶಾಸ್ತ್ರೀಯ ಕಾರ್ಯವಿಧಾನಗಳು ಈ ಕೆಳಗಿನಂತಿವೆ:6-8

 • ಎಲ್ಲರಿಗೂ ಗೊತ್ತಿರುವಂತೆ ಡಯಾಬಿಟಿಸ್ ಪಾರ್ಶ್ವವಾಯುವಿನ ಅಪಾಯಕಾರಿ ಅಂಶ. ಹಾಗೆಯೇ ಟೈಪ್-2 ಡಯಾಬಿಟಿಸ್, ಮೆಟಬಾಲಿಸಮ್ ಮೇಲೆ ಪರಿಣಾಮ ಬೀರುವಂತಹ ಇತರ ಹಲವು ಆರೋಗ್ಯ ಸಮಸ್ಯೆಗಳೊಂದಿಗೆ, ಮೆದುಳಿನ ರಕ್ತನಾಳಗಳಲ್ಲಿರುವ ಪದರದ ಗಾತ್ರ ಹೆಚ್ಚಿಸಬಹುದು ಹಾಗೂ ಸಣ್ಣ ರಕ್ತನಾಳಗಳಲ್ಲಿನ ಬದಲಾವಣೆಗೆ ಕಾರಣವಾಗಬಹುದು. ಇದು ಅಂತಿಮವಾಗಿ ಮೆದುಳಿನ ಇಸ್ಕೀಮಿಯಾಗೆ ಕಾರಣವಾಗಬಹುದು (ರಕ್ತ ಮತ್ತು ಆಮ್ಲಜನಕದ ಕೊರತೆ). ಇಸ್ಕೀಮಿಯಾ ಅರಿವಿನ ಏರುಪೇರನ್ನು ಉಂಟುಮಾಡಬಹುದು.
 • ರಕ್ತದಲ್ಲಿನ ಅಧಿಕ ಗ್ಲೂಕೋಸ್ ಮಟ್ಟವು ಉರಿಯೂತಕ್ಕೆ ಕಾರಣವಾಗಬಹುದು ಹಾಗೂ ಪ್ರತಿಯಾಗಿ ಅದು ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡಿ, ಆಲ್ಜೈಮರ್ ಕಾಯಿಲೆ ಬರಲು ಕಾರಣವಾಗಬಹುದು.
 • ಟೈಪ್-2 ಡಯಾಬಿಟಿಸ್‌ನ ಆರಂಭಿಕ ಹಂತಗಳಲ್ಲಿ, ರಕ್ತದಲ್ಲಿನ ಇನ್ಸುಲಿನ್ ಮಟ್ಟವು ಅಧಿಕವಾಗಿರುತ್ತದೆ. ರಕ್ತದಲ್ಲಿನ ಅಧಿಕ ಇನ್ಸುಲಿನ್ ಮಟ್ಟವು, ಅರಿವಿನ ಶಕ್ತಿಯನ್ನು ಕುಗ್ಗಿಸುವ ಮೂಲಕ ಡಿಮೆನ್ಶಿಯಾ ಬರಲು ಕಾರಣವಾಗುತ್ತದೆ.

ಡಿಮೆನ್ಶಿಯಾಗೆ ಚಿಕಿತ್ಸೆ ಏನು?

ಸದ್ಯಕ್ಕೆ, ಡಿಮೆನ್ಶಿಯಾದ ಬೆಳವಣಿಗೆಯನ್ನು ತಡೆಯಲು ಅಥವಾ ಅದನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದಾಗ್ಯೂ, ಕ್ಲಿನಿಕಲ್ ಪ್ರಯೋಗಗಳ ಮೂಲಕ ಈ ಚಿಕಿತ್ಸೆಗೆ ಸಂಬಂಧ ಪಟ್ಟಂತೆ ಹೊಸ ಔಷಧಿಗಳನ್ನು ಕಂಡು ಹಿಡಿಯಲಾಗುತ್ತಿದೆ. ಆರೈಕೆದಾರರು ಹಾಗೂ ಕುಟುಂಬದವರು ಡಿಮೆನ್ಶಿಯಾದಿಂದ ಬಳಲುತ್ತಿರುವವರಿಗೆ ಬೆಂಬಲವನ್ನು ವ್ಯಕ್ತಪಡಿಸಿ ಅವರ ಜೀವನವನ್ನು ಸುಧಾರಿಸಬಹುದು. ಈ ಸ್ಥಿತಿಯನ್ನು ನಿರ್ವಹಿಸುವ ಪ್ರಾಥಮಿಕ ಗುರಿಗಳೆಂದರೇ ಅದರೊಂದಿಗೆ ಬರುವ ದೈಹಿಕ ಅಸ್ವಸ್ಥತೆ ಹಾಗೂ ನಡುವಳಿಕೆಯಲ್ಲಾಗುವ ಬದಲಾವಣೆಗಳನ್ನು ಬೇಗನೆ ಪತ್ತೆಹಚ್ಚುವುದು ಹಾಗೂ ಅವುಗಳಿಗೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು.5

ಡಿಮೆನ್ಶಿಯಾವನ್ನು ವೈದ್ಯರು ಹೇಗೆ ಪತ್ತೆ ಹಚ್ಚುತ್ತಾರೆ ಹಾಗೂ ಟೈಪ್-2 ಡಯಾಬಿಟಿಸ್‌ ಇದ್ದಾಗ ಅದನ್ನು ತಡೆಗಟ್ಟಬಹುದೇ?

ಡಿಮೆನ್ಶಿಯಾವನ್ನು ಪತ್ತೆಹಚ್ಚುವ ಯಾವುದೇ ನಿರ್ದಿಷ್ಟ ಪರೀಕ್ಷೆಗಳಿಲ್ಲ, ಅದಾಗ್ಯೂ ಆರೋಗ್ಯದ ಇತಿಹಾಸ, ದೈಹಿಕ ಪರೀಕ್ಷೆ, ಲ್ಯಾಬ್ ಪರೀಕ್ಷೆಗಳು ಹಾಗೂ ಆಲೋಚಿಸುವ ಶಕ್ತಿಯಲ್ಲಿನ ಬದಲಾವಣೆಗಳನ್ನು ಪರೀಕ್ಷಿಸುವ ಮೂಲಕ ಡಾಕ್ಟರ್ ಈ ಕಾಯಿಲೆಯನ್ನು ಪತ್ತೆ ಮಾಡಬಹುದು.4

ಡಿಮೆನ್ಶಿಯಾದ ಬೆಳವಣಿಗೆ ಮತ್ತು ಟೈಪ್-2 ಡಯಾಬಿಟಿಸ್ ನಡುವೆ ನೇರವಾದ ಸಂಬಂಧವಿದೆ ಎಂದು ಸಂಶೋಧನೆಯ ಅಧ್ಯಯನಗಳು ಅಷ್ಟು ಕರಾರುವಕ್ಕಾಗಿ ಸಾಬೀತು ಪಡಿಸಿಲ್ಲವಾದರೂ, ನಿಯಂತ್ರಣದಲ್ಲಿರದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹಾಗೂ ಇನ್ಸುಲಿನ್, ಮೆದುಳಿನ ಸೂಕ್ಷ್ಮ ಕೆಲಸಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸಾಬೀತಾಗಿದೆ. ಹಾಗಾಗಿ ರಕ್ತದಲ್ಲಿನ ಗ್ಲೂಕೋಸನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುವುದರಿಂದ, ಡಿಮೆನ್ಶಿಯಾದ ಅಪಾಯವು ಕಡಿಮೆಯಾಗಲು ಸಹಾಯಕವಾಗಬಹುದು.

ನಿಮ್ಮ ಜೀವನಶೈಲಿಯಲ್ಲಿ ಈ ಕೆಳಗಿನ ಬದಲಾವಣೆಗಳು, ರಕ್ತದಲ್ಲಿನ ಗ್ಲೋಕೋಸನ್ನು ಆರೋಗ್ಯಕರ ಮಟ್ಟದಲ್ಲಿರುವಂತೆ ನಿಭಾಯಿಸಲು ಸಹಕಾರಿಯಾಗಬಹುದು:2,3 

 • ತೂಕದ ಇಳಿಕೆ: ದೇಹದ ತೂಕ ಹೆಚ್ಚಿದ್ದರೆ, ದೇಹದ 5-7% ತೂಕವನ್ನು ಇಳಿಸುವುದರಿಂದ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವುದನ್ನು ತಡೆಯಬಹುದು ಇಲ್ಲವೇ ಅದರಿಂದಾಗುವ ದುಷ್ಪರಿಣಾಮಗಳನ್ನು ಮುಂದೂಡಬಹುದು.
 • ಸರಿಯಾದ ಆಹಾರಕ್ರಮವನ್ನು ಸೇವಿಸಿ: ಕಾರ್ಬೋಹೈಡ್ರೇಟ್ಸ್ ಇರುವ ಊಟ ಹಾಗೂ ಸಿಹಿಯಾದ ಆಹಾರವನ್ನು ಕಡಿಮೆ ಮಾಡಿ ಹಾಗೆಯೇ ನೀವು ಸೇವಿಸುವ ಊಟದ ಪ್ರಮಾಣ ನಿಯಂತ್ರಣದಲ್ಲಿರಲಿ.
 • ದೈಹಿಕವಾಗಿ ಸಕ್ರಿಯರಾಗಿರಿ: ಊಟದ ನಂತರ ಒಂದು ಚಿಕ್ಕ ವಾಕಿಂಗ್ ಅಥವಾ ಬ್ರಿಸ್ಕ್ ನಡಿಗೆಯನ್ನು ವಾರದಲ್ಲಿ ಐದು ದಿನಕ್ಕೊಮ್ಮೆಯಾದರೂ ಕನಿಷ್ಟ 30 ನಿಮಿಷದವರೆಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.8 

ನಿಮ್ಮ ರಕ್ತದಲ್ಲಿನ ಗ್ಲೋಕೋಸ್‌ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿಡುವ ಮೂಲಕ ಡಿಮೆನ್ಶಿಯಾ ಹಾಗೂ ಇನ್ನಿತರ ಅನಾರೋಗ್ಯ ಸಮಸ್ಯೆಗಳಿಂದ ದೂರವಿರಿ!


ಉಲ್ಲೇಖಗಳು:

 1. Matioli MNPDS, Suemoto CK, Rodriguez RD, Farias DS, da Silva MM, Leite REP, et al. Association between diabetes and causes of dementia: Evidence from a clinicopathological study. Dement Neuropsychol. 2017 Oct-Dec;11(4):406-412.
 2. National Institute of Diabetes and Digestive and Kidney Diseases [Internet]. [updated 2017 May; cited 2019 Dec 19]. Available from: https://www.niddk.nih.gov/health-information/diabetes/overview/what-is-diabetes/type-2-diabetes.
 3. Harvard Health Publishing. Above-normal blood sugar linked to dementia [Internet]. [updated 2013 Aug 7; cited 2019 Dec 19]. Available from: https://www.health.harvard.edu/blog/above-normal-blood-sugar-linked-to-dementia-201308076596.
 4. Alzheimer’s Association. What is dementia? [Internet]. [cited 2019 Dec 19]. Available from: https://www.alz.org/alzheimers-dementia/what-is-dementia.
 5. World Health Organization. Dementia [Internet]. [updated 2019 Sep 19; cited 2019 Dec 19]. Available from: https://www.who.int/news-room/fact-sheets/detail/dementia.
 6. Alzheimer’s Association. Alzheimer’s disease and type-2 diabetes [Internet]. [cited 2019 Dec 19]. Available from: https://www.alz.org/national/documents/latino_brochure_diabetes.pdf.
 7. Biessels GJ, Staekenborg S, Brunner E, Brayne C, Scheltens P. Risk of dementia in diabetes mellitus: a systematic review. Lancet Neurol. 2006 Jan;5(1):64-74.
 8. Gudala K, Bansal D, Schifano F, Bhansali A. Diabetes mellitus and risk of dementia: a meta-analysis of prospective observational studies. J Diabetes Investig. 2013 Nov 27;4(6):640-650.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.