type-2-diabetes-newly-diagnosed-guide
Reading Time: 3 minutes

ಸುಪ್ರಿಯಾ ಗೋಪಾಲನ್ ತಮ್ಮ ಬೆಳಗಿನ ಕಾಫಿ ಸವಿಯುತ್ತಿದ್ದರು, ಈಗ ಕೆಲವು ದಿನಗಳ ಹಿಂದೆ ಅವರು ತಮ್ಮ 45ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಮತ್ತು ಆ ಸಮಯದಲ್ಲಿ ಅವರಿಗೆ ಸ್ವಲ್ಪ ತಲೆಸುತ್ತು ಬಂದಂತಾಗಿತ್ತು. ಏನೋ ಆಕಸ್ಮಿಕವಾಗಿ ಹೀಗಾಗಿರಬಹುದು ಎಂದು ಅವರು ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅದಾಗಿ ಕೆಲವೇ ದಿನಕ್ಕೆ, ಈ ಹಿಂದೆಂದೂ ಇಲ್ಲದ ಒಂದಷ್ಟು ಬದಲಾವಣೆಗಳು ಕಂಡುಬಂದವು. ವಿಪರೀತ ಬಾಯಾರಿಕೆ, ಪದೇ ಪದೇ ಮೂತ್ರ ಬರುವುದು, ಸರಿಯಾಗಿ ನಿದ್ದೆ ಮಾಡಲು ಆಗದಿರುವುದು ಹೀಗೆ. ಅಲ್ಲದೇ ಅವರ ತೂಕ ಬೇರೆ ಇರಬೇಕಾದ್ದಕ್ಕಿಂತ ತುಂಬಾ ಹೆಚ್ಚಾಗಿತ್ತು. ಡಾಕ್ಟರನ್ನು ಭೇಟಿಯಾಗಿ ಕೆಲವು ತಪಾಸಣೆಗಳನ್ನು ಮಾಡಿಸಿಕೊಂಡ ಮೇಲೆ ಗೊತ್ತಾಗಿದ್ದು, ಅವರಿಗೆ ಟೈಪ್ 2 ಡಯಾಬಿಟಿಸ್ ಮೆಲಿಟಸ್(T2DM) ಇದೆ ಅನ್ನುವುದು! ಈ ವಿಷಯ ಗೊತ್ತಾದ ಮೇಲೆ ಅವರಿಗೆ ಒಂದು ರೀತಿಯ ಆಘಾತವೇ ಆಯಿತು, ಇದು ಅವರ ಮನಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಅಷ್ಟೇ ಏಕೆ, ಇದು ಅವರನ್ನು ಭಾವನಾತ್ಮಕವಾಗಿಯೂ ಕಾಡಿತು. ಆಕೆಗೆ ಕೇವಲ 45 ವರ್ಷವಾಗಿತ್ತು, ತಮ್ಮ ಮುಂದಿನ ಜೀವನ ಅಥವಾ ಆರೋಗ್ಯದ ಬೆಳವಣಿಗೆಯನ್ನು ನಿಲ್ಲಿಸಲು ಅವರು ಖಂಡಿತವಾಗಿಯೂ ತಯಾರಿರಲಿಲ್ಲ.

ಡಯಾಬಿಟಿಸ್ ಇರುವುದನ್ನು ತಿಳಿದ ಕೂಡಲೇ ಹಲವಾರು ಜನರು ಒಂದು ದೊಡ್ಡ ಮಾನಸಿಕ ಯಾತನೆಗೆ ಒಳಗಾಗುತ್ತಾರೆ. ಆದರೆ ಇಷ್ಟು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಡಯಾಬಿಟಿಸ್ ತಜ್ಞರು ಮತ್ತು ಡಾಕ್ಟರ್‌ಗಳು  ಹೇಳುತ್ತಾರೆ. “ಡಯಾಬಿಟಿಸ್ ಬಗ್ಗೆ ಗಾಬರಿಯಾಗುವ ಅಥವಾ ಆಗಬಾರದ್ದೇನೋ ಆಗಿಬಿಟ್ಟಿದೆ ಅನ್ನುವಂತೆ ತಲೆ ಮೇಲೆ ಕೈಹೊತ್ತು ಕೂರುವ ಅವಶ್ಯಕತೆ ಇಲ್ಲ, ಇದನ್ನು ಸುಲಭವಾಗಿ ನಿಭಾಯಿಸಬಹುದು. ಊಟ, ವ್ಯಾಯಾಮ ಮತ್ತು ಔಷಧಿ ತೆಗೆದುಕೊಳ್ಳುವಲ್ಲಿ ಒಂದು ಶಿಸ್ತನ್ನು ಪಾಲಿಸುವುದರಿಂದ ಇದನ್ನು ಪೂರ್ತಿಯಾಗಿ ತಡೆಗಟ್ಟಬಹುದು. ಮೊದಲಿಗೆ ಡಾಕ್ಟರೊಂದಿಗೆ ಸಮಾಲೋಚನೆ ನಡೆಸಿ ಆಗಿರುವುದನ್ನು ಧೈರ್ಯವಾಗಿ ಒಪ್ಪಿಕೊಳ್ಳಿ,” ಎನ್ನುತ್ತಾರೆ ಡಾ. ರವಿಕಿರಣ್ ಎಮ್‌. ಇವರು ಕನ್ಸಲ್ಟೆಂಟ್ ಎಂಡೋಕ್ರೈನೊಲೊಜಿಸ್ಟ್ ಆಗಿದ್ದು, ಚೆನ್ನೈನ ಎಸ್‌ಐಎಮ್‌ಎಸ್‌ ಆಸ್ಪತ್ರೆಯ ಎಂಡೋಕ್ರೈನ್ ಸೊಸೈಟಿ ಆಫ್ ಇಂಡಿಯಾದ ಸದಸ್ಯರೂ ಆಗಿದ್ದಾರೆ.

ಮೊದಲ ಬಾರಿ ಡಯಾಬಿಟಿಸ್ ಇರುವುದು ಪತ್ತೆಯಾದಾಗ ನೀವೇನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ: 

1. ತಪಾಸಣೆಗಳ ಕಡೆ ಗಮನವಿರಲಿ:

ಡಾಕ್ಟರ್‌ಗಳು ಸಾಮಾನ್ಯವಾಗಿ ಒಂದು ನಿಶ್ಚಿತ ಅವಧಿಯವರೆಗಿನ ರಕ್ತದ ಸಕ್ಕರೆಯ ಪ್ರಮಾಣವನ್ನು ಗಮನಿಸುತ್ತಾರೆ. ಡಾಕ್ಟರ್ ಹೇಳಿದ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ. ಇದರಲ್ಲಿ ಮುಖ್ಯವಾದವುಗಳೆಂದರೆ, ಸಕ್ಕರೆಯ ಪ್ರಮಾಣ, ರಕ್ತದಲ್ಲಿನ ಹಿಮೋಗ್ಲೋಬಿನ್/ಕೊಲೆಸ್ಟರಾಲ್, ರಕ್ತದೊತ್ತಡ, ಮೂತ್ರ ಪರೀಕ್ಷೆ/ಸಕ್ಕರೆಯನ್ನು ಪರೀಕ್ಷಿಸಲು ಯೂರಿಯಾ ಪರೀಕ್ಷೆ, ಮೂತ್ರದಲ್ಲಿನ ಕೀಟೋನ್‌ಗಳು ಮತ್ತು ಅಲ್ಬುಮಿನ್, ಕಣ್ಣು, ಪಾದ, ನರ ಮತ್ತು ಹೃದಯದ ಪರೀಕ್ಷೆಗಳು ಮತ್ತು ನಿಮ್ಮ ಊಟದ ಪದ್ಧತಿ ಹಾಗೂ ತೂಕ ಹೇಗಿದೆ ಎಂದು ನೋಡುವುದು ಇತ್ಯಾದಿ. ಈ ತಪಾಸಣೆಗಳು ಆರೋಗ್ಯದಿಂದಿರಲು ಬೇಕಾದ ಬಹಳ ಮುಖ್ಯವಾದ ಮಾಹಿತಿಯನ್ನು ಒದಗಿಸುತ್ತವೆ. ಉದಾಹರಣೆಗೆ ನಿಮ್ಮ ಮೂತ್ರದ ಬಣ್ಣ ಬದಲಿಯಾಗಿರುವುದು ಅಥವಾ ಯಾವುದೇ ಬಣ್ಣವಿಲ್ಲದಂತಿರುವುದು ಮತ್ತು ಇದಕ್ಕಾಗಿ ಏನೇನು ತಿನ್ನಬೇಕು, ತಿನ್ನಬಾರದು ಎಂಬುದನ್ನು ತಿಳಿದುಕೊಂಡಿರುವುದು.

2. ಸೂಚಿಸಿದ ಔಷಧಿಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಿ:

ಡಯಾಬಿಟಿಸ್ ಯಾವಾಗಲೂ ದೇಹದ ಪ್ರಕೃತಿ ಹೇಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಬ್ಬರ ದೇಹವೂ ಭಿನ್ನವಾಗಿರುತ್ತದೆ. ಒಬ್ಬರು ತೆಗೆದುಕೊಳ್ಳುತ್ತಿರುವ ಔಷಧಿಗಳು ಅಥವಾ ಅದರ ಪ್ರಮಾಣಗಳು ಇನ್ನೊಬ್ಬರ ದೇಹದ ಮೇಲೆ ಬೇರೆಯ ರೀತಿಯೇ ಕೆಲಸ ಮಾಡಬಹುದು. ಡಯಾಬಿಟಿಸ್‌ಗೆ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ಇಲ್ಲದಿರುವುದು ಇದೇ ಕಾರಣಕ್ಕಾಗಿ. ನಿಮ್ಮ ಪರೀಕ್ಷೆಗಳ ಆಧಾರದ ಮೇಲೆ ಡಾಕ್ಟರ್ ನಿಮಗೆ ಕೊಡಬೇಕಾದ ಔಷಧಿ ಮತ್ತು ಅದನ್ನು ತೆಗೆದುಕೊಳ್ಳುವ ಪ್ರಮಾಣವನ್ನು ನಿರ್ಧರಿಸುತ್ತಾರೆ. ಅದನ್ನು ಹೇಗೆ ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳಿಕೊಡುತ್ತಾರೆ.  ಔಷಧಿಯ ಡೋಸ್ ಎಷ್ಟಿರಬೇಕು ಎಂಬುದು ರಕ್ತದ ಸಕ್ಕರೆಯ ಮಟ್ಟ ಮತ್ತು ಎಷ್ಟು ಇನ್ಸುಲಿನ್ ಬಿಡುಗಡೆಯಾಗುತ್ತಿದೆ ಎಂಬುದನ್ನು ಆಧರಿಸಿದೆ, ಸರಿಯಾದ ಪ್ರಮಾಣವನ್ನು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. “ಟೈಪ್‌ 2 ಡಯಾಬಿಟಿಸ್‌ ಮೆಲಿಟಸ್‌ (T2DM) ಒಂದು ‘ವಿಶೇಷ’ ವಿಭಾಗಕ್ಕೆ ಸೇರುತ್ತದೆ. ಇವತ್ತಿಗೆ ಸುಮಾರು 13 ರೀತಿಯ ಡಯಾಬಿಟಿಸ್ ಔಷಧಿಗಳಿವೆ” ಎನ್ನುತ್ತಾರೆ ಡಾ. ರವಿಕಿರಣ್. ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ ಮತ್ತು ಫಲಿತಾಂಶಕ್ಕಾಗಿ ಸ್ವಲ್ಪ ತಾಳ್ಮೆಯಿಂದ ಕಾಯಿರಿ.

3. ಊಟದ ಕಡೆ ಗಮನವಿರಲಿ:

ಔಷಧಿ ಮತ್ತು ತಪಾಸಣೆಗಳ ಜವಾಬ್ದಾರಿಯನ್ನು ನಿಮ್ಮ ಡಾಕ್ಟರ್‌ಗೆ ಬಿಟ್ಟುಬಿಡಿ, ಆ ವಿಷಯಗಳನ್ನು ಅವರು ನೋಡಿಕೊಳ್ಳುತ್ತಾರೆ, ಆದರೆ ಸ್ವತಃ ನೀವು ಮಾಡಬೇಕಾಗಿರುವ ಮುಖ್ಯವಾದ ಕೆಲಸವೊಂದಿದೆ. ಅದುವೇ ಊಟದ ಮೇಲೆ ನಿಗಾ ಇಡುವುದು. ಕರಿದ, ಖಾರದ ಮತ್ತು ಅತಿಯಾಗಿ ಉಪ್ಪನ್ನು ಹಾಕಿದ ಪದಾರ್ಥ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಅಲ್ಲದೇ ಸರಳ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ ಪದಾರ್ಥ ಮತ್ತು ಸಿಹಿಹಣ್ಣು, ಹಾಲು ಮುಂತಾದವುಗಳನ್ನು ಬಿಡುವುದು ಒಳ್ಳೆಯದು. ಹೆಚ್ಚಾಗಿ ಪ್ರೋಟೀನ್, ಬಿಳಿ ಮತ್ತು ಕಡಿಮೆ ಕೊಬ್ಬಿರುವ ಮಾಂಸ ಹಾಗೂ ಸಿರಿಧಾನ್ಯಗಳು ಮತ್ತು ನಾರಿನಂತಹ ಕಠಿಣ ಕಾರ್ಬ್‌ಗಳನ್ನು ತಿನ್ನುವುದರತ್ತ ಗಮನ ಹರಿಸಿ. ಕೊಲೆಸ್ಟರಾಲನ್ನು ಒಂದು ಮಿತಿಯಲ್ಲಿಡಲು ಮತ್ತು ಲಿವರನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ನಮ್ಮ ಊಟದ ದಿನಚರಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಪ್ರತಿದಿನ ಅದೇ ಹೊತ್ತಿಗೆ ಊಟ ಮಾಡುವುದು ನಂತರ ಔಷಧಿ ತೆಗೆದುಕೊಳ್ಳುವುದು ಕಾಯಿಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ತುಂಬಾ ಉಪಕಾರಿ ಎನ್ನುತ್ತದೆ MRC ಮೆಡಿಕಲ್ ಸೆಂಟರ್ ಡಯಾಬಿಟಿಕ್ ಆ್ಯಂಡ್ ಹಾರ್ಟ್ ವಿಂಗ್.

ಏನು ತಿನ್ನಬೇಕು:

ಡಯಾಬಿಟಿಸ್ ಇರುವವರು ಇನ್ನೆಂದೂ ಧಾನ್ಯ, ಕಾಳುಗಳನ್ನು ತಿನ್ನಲೇಬಾರದು ಎಂದೇನಿಲ್ಲ. ಹಾಗೆಯೇ ತುಂಬಾ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅಳವಡಿಸಿಕೊಳ್ಳಬೇಕಿಲ್ಲ. ನಿಮ್ಮ ಊಟವು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:

  • 50-60 ಪ್ರತಿಶತದಷ್ಟು ಕಾರ್ಬೋಹೈಡ್ರೇಟ್‌ಗಳು: ಇದು ಹಣ್ಣು, ತರಕಾರಿ ಅಥವಾ ಧಾನ್ಯಗಳಾಗಿರಬಹುದು (ಎಲ್ಲಾ ಹಣ್ಣುಗಳನ್ನು ಅವುಗಳ ಪ್ರಮುಖ ಮ್ಯಾಕ್ರೋನ್ಯೂಟ್ರಿಯಂಟ್‌ಗಳಿಗಾಗಿ ತಿನ್ನಿರಿ, ಆದರೆ ತೀರಾ ಸಿಹಿಯಾದ ಹಣ್ಣುಗಳನ್ನು ತಿನ್ನಬೇಡಿ)
  • 20-25 ಪ್ರತಿಶತದಷ್ಟು ಪ್ರೊಟೀನ್: ಇದು ದ್ವಿದಳ ಧಾನ್ಯಗಳು, ಕಾಳುಗಳು ಅಥವಾ ತೆಳ್ಳಗಿನ ಮಾಂಸವಾಗಿರಬಹುದು.
  • 10-15 ಪ್ರತಿಶತದಷ್ಟು ಕೊಬ್ಬು: ಇದು ಬೀಜಗಳು, ಮೀನು, ಎಣ್ಣೆ (ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆ, MUFA ಮತ್ತು PUFA ಮೌಲ್ಯಕ್ಕಾಗಿ ಕಾಡ್-ಲಿವರ್ ಎಣ್ಣೆ). ವಿವಿಧ ಮೂಲಗಳ ಎಣ್ಣೆಯನ್ನು ಒಂದು ತಿಂಗಳಲ್ಲಿ ಅರ್ಧ ಲೀಟರ್‌ನಷ್ಟು ಸೇವಿಸಬಹುದು.

ಸ್ಥಳೀಯವಾಗಿ ದೊರಕುವ ಆಹಾರವನ್ನು ಸೇವಿಸಿ, ಆದರೆ ಅದು ಮಿತವಾಗಿರಲಿ ಮತ್ತು ಸಮತೋಲನದ ಆಹಾರವಾಗಿರಲಿ.

4. ತಪಾಸಣೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ:

ಡಯಾಬಿಟಿಸ್‌ಗೆ ಸಂಬಂಧಿಸಿದ ತಪಾಸಣೆಗಳನ್ನು ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಮಾಡಿಸಿಕೊಳ್ಳಲು ಹೇಳಲಾಗುತ್ತದೆ. ಡಾಕ್ಟರ್ ಸೂಚಿಸಿರುವ ಎಲ್ಲ ತಪಾಸಣೆಗಳನ್ನು ಅವರು ಹೇಳಿದ ದಿನಾಂಕದಂದು ತಪ್ಪದೇ ಮಾಡಿಸಿಕೊಳ್ಳಿ.

5. ದೈಹಿಕ ಚಟುವಟಿಕೆ ಮತ್ತು ಜೀವನಶೈಲಿ:

ವ್ಯಾಯಾಮ ಮಾಡುವುದು ನಿಮ್ಮ ಮೊದಲ ಆದ್ಯತೆಯಾಗಬೇಕು, ಇದರಿಂದ ನೀವು ಬಹಳಷ್ಟು ಉಲ್ಲಾಸದಿಂ ಇರುತ್ತೀರಿ. ನೀವು ಎಷ್ಟು ಚಟುವಟಿಕೆಯಿಂದ ಇರುವಿರೋ ಅಷ್ಟು ರಕ್ತದ ಸಕ್ಕರೆಯು ಬಳಕೆಯಾಗುತ್ತದೆ. ಈ ರೀತಿ ರಕ್ತದ ಸಕ್ಕರೆಯನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. “ಪ್ರತಿದಿನ 20 ರಿಂದ 30 ನಿಮಿಷ ನಡೆಯುವುದು, ಜಿಮ್‌ಗೆ ಹೋಗುವುದು ಅಥವಾ ಯಾವುದಾದರೊಂದು ರೀತಿಯ ದೈಹಿಕ ಚಟುವಟಿಕೆಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಟೈಪ್‌ 2 ಡಯಾಬಿಟಿಸ್‌ ಮೆಲಿಟಸನ್ನು (T2DM) ಚೆನ್ನಾಗಿ ನಿಭಾಯಿಸುವಲ್ಲಿ ತುಂಬಾ ಸಹಕಾರಿ” ಎನ್ನುತ್ತಾರೆ ಡಾ. ರವಿಕಿರಣ್. ಚೆನ್ನೈನಲ್ಲಿರುವ ಡಯಾಬಿಟಿಸ್ ಕೇರ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳುವಂತೆ ಸರಿಯಾದ ಊಟ ಮತ್ತು ವ್ಯಾಯಾಮದ ಜೊತೆ ಜೊತೆಗೆ ಒಂದು ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು ಹೋಗುವುದೂ ತುಂಬಾ ಮುಖ್ಯ. ಮೊದಲಿಗೆ, ಈ ಸೂತ್ರವನ್ನು ಬಳಸಿ ನಿಮ್ಮ ತೂಕ ಎಷ್ಟಿರಬೇಕು ಎಂಬುದನ್ನು ಕಂಡುಕೊಳ್ಳಿ, ((ಎತ್ತರ ಸೆ.ಮೀ.ಗಳಲ್ಲಿ – 100) x 0.9). ಬಳಿಕ ಪ್ರತಿದಿನ ತೂಕವನ್ನು ನೋಡಿಕೊಳ್ಳಿ. ತೂಕ ಕಡಿಮೆಯಾಗಲು ನೀವು ಸೇವಿಸುವ ಕ್ಯಾಲರಿಗಳಿಗಿಂತ ಹೆಚ್ಚು ಕ್ಯಾಲರಿಗಳು ಬಳಕೆಯಾಗಬೇಕು. 

6. ಶಾಂತವಾಗಿರಿ ಮತ್ತು ಚೆನ್ನಾಗಿ ನಿದ್ದೆ ಮಾಡಿ:

ಉದ್ವೇಗಕ್ಕೆ ಒಳಗಾದರೆ ರಕ್ತದ ಸಕ್ಕರೆಯು ಧಿಡೀರನೆ ಏರುತ್ತದೆ. ಇದರಿಂದ ದೇಹವು ಇನ್ಸುಲಿನ್‌ಗೆ ಸ್ಪಂದಿಸುವುದಿಲ್ಲ, ಹೀಗೆ ಇದು ಡಯಾಬಿಟಿಸ್‌ಗೆ ದಾರಿಮಾಡಿಕೊಡುತ್ತದೆ. ನಿಮ್ಮ ಒತ್ತಡವನ್ನು ಕಡಿಮೆ ಮಾಡುವಂತಹ ನಿಮ್ಮನ್ನು ಖುಷಿಯಾಗಿಡುವಂತಹ ವಿಷಯಗಳೇನು ಎಂಬುದನ್ನು ಯೋಚಿಸಿ. ಡಯಾಬಿಟಿಸ್ ಇರುವವರು ಸರಿಯಾಗಿ ನಿದ್ದೆ ಮಾಡದಿದ್ದರೆ ರಕ್ತದ ಸಕ್ಕರೆಯು ಏರುತ್ತದೆ, ಹಾಗೆಯೇ ರಕ್ತದ ಸಕ್ಕರೆ ಹೆಚ್ಚಿದ್ದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ಇದೊಂದು ಬಿಕ್ಕಟ್ಟಿನ ಹಾಗೆ. ಈ ಬಿಕ್ಕಟ್ಟನ್ನು ಬಗೆಹರಿಸಲು, ಡಾಕ್ಟರ್‌ ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿ ವಿಶ್ರಾಂತಿ ಪಡೆಯಿರಿ. ನಿದ್ದೆಯನ್ನು ಮಾತ್ರ ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ದಿನಕ್ಕೆ ಆರರಿಂದ ಎಂಟು ತಾಸುಗಳ ನಿದ್ದೆ ಬೇಕೇ ಬೇಕು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.