“ಹೃದಯ ವೈಫಲ್ಯ” ಎಂಬ ಪದಗಳನ್ನು ಕೇಳಿದ ಕೂಡಲೇ, ಎಲ್ಲರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳುತ್ತಾರೆ ಹಾಗೂ ಬಹಳಷ್ಟು ಬಾರಿ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ, ಹೃದಯ ವೈಫಲ್ಯ ಎಂದರೆ, ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಹಾಗೂ ಇನ್ನೇನೂ ಮಾಡಲು ಆಗದು ಎಂದರ್ಥವಲ್ಲ. ಹೃದಯ ವೈಫಲ್ಯ ಎಂದರೆ, ಹೃದಯವು ಮೊದಲಿನ ಸಾಮರ್ಥ್ಯದಂತೆ ರಕ್ತವನ್ನು ಪಂಪ್ ಮಾಡುತ್ತಿಲ್ಲ ಎಂದು.
ಹೃದಯ ರಕ್ತವನ್ನು ಪಂಪ್ ಮಾಡಿ, ದೇಹದ ಎಲ್ಲ ಅಂಗಗಳಿಗೆ ಆಕ್ಸಿಜನ್ ಅನ್ನು ಸಾಗಿಸಲು ನೆರವಾಗುತ್ತದೆ. ದುರ್ಬಲಗೊಂಡ ಹೃದಯಕ್ಕೆ, ಈ ಕೆಲಸವನ್ನು ಸರಿಯಾಗಿ ಮಾಡಲು ಆಗುವುದಿಲ್ಲ ಹಾಗೂ ಇದರಿಂದಾಗಿ, ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗುತ್ತದೆ[1]. ಇಲ್ಲಿ, ಹೃದಯ ವೈಫಲ್ಯದ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತೇವೆ ಹಾಗೂ ಅದರ ಕುರುಹುಗಳನ್ನು ಗುರುತಿಸಲು ಕಲಿಯುತ್ತೇವೆ. ಇದರಿಂದ, ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಹಾಗೂ ಬೇಕಾದಾಗ ನೆರವು ಪಡೆಯಬಹುದು.
ಹೃದಯ ವೈಫಲ್ಯ ಎಂದರೇನು?
ಹೃದಯದ ಸ್ನಾಯುವಿಗೆ ಯಾವುದೊ ಹಾನಿ ಉಂಟಾಗಿ, ಅದರಿಂದ ರಕ್ತವನ್ನು ಸರಿಯಾಗಿ ಪಂಪ್ ಮಾಡುವ ಹೃದಯದ ಸಾಮರ್ಥ್ಯ ಕುಂದುತ್ತದೆ. ಆಗ, ಸರಿಯಾಗಿ ರಕ್ತದ ಹರಿವು ಆಗದ ಕಾರಣ, ದೇಹಕ್ಕೆ ಬೇಕಾದ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತದೆ. ಇವೆಲ್ಲದರ ಪರಿಣಾಮವೇ ಹೃದಯ ವೈಫಲ್ಯ[2].
ಈ ಕೊರತೆಯನ್ನು ತುಂಬಲು ನಿಮ್ಮ ಹೃದಯವು ಈ ಕೆಳಗಿನ ಯಾವುದಾದರೊಂದನ್ನು ಮಾಡಲು ನೋಡುತ್ತದೆ:
- ಹೃದಯದ ಸ್ನಾಯುಗಳ ಮೇಲೆ ಒತ್ತಡ ಹಾಕುವುದು
- ಸ್ನಾಯುಗಳ ಅಳವಿಯನ್ನು ಹೆಚ್ಚಿಸಿಕೊಳ್ಳಲು ನೋಡುವುದು
- ರಕ್ತವನ್ನು ಬಿರುಸಾಗಿ ಪಂಪ್ ಮಾಡುವುದು
ಹೃದಯವು ಏನೇ ಕಸರತ್ತು ಮಾಡಿದರೂ, ಹೃದಯ ವೈಫಲ್ಯದ ತೊಂದರೆಗಳು ಬಗೆಹರಿಯುವುದಿಲ್ಲ, ಹಾಗೂ ಹೃದಯವು ಎಚ್ಚರಿಕೆಯ ಸನ್ನೆಗಳನ್ನು ನೀಡಲು ಶುರುಮಾಡುತ್ತದೆ[1].
ಇದರಿಂದಾಗಿ, ಹಲವು ಬೇರೆ ತೊಂದರೆಗಳ ಜೊತೆಗೆ, ಹೃದಯದ ಬೇರೆ ಬೇರೆ ಕೆಲಸಗಳು ಒತ್ತಡ ಇಲ್ಲವೇ ಹಾನಿಯಿಂದಾಗಿ ಸೋಲುವುದರೊಂದಿಗೆ, ಎಡಬದಿಯ ಹೃದಯ ವೈಫಲ್ಯ ಇಲ್ಲವೇ ಬಲಬದಿಯ ಹೃದಯ ವೈಫಲ್ಯಕ್ಕೆ ದಾರಿ ಮಾಡಿಕೊಡಬಹುದು[3].
ಹೃದಯ ವೈಫಲ್ಯದ ಎಚ್ಚರಿಕೆಯ ಸನ್ನೆಗಳು ಯಾವುವು, ಹಾಗೂ ಅವು ಏಕೆ ಕಾಣಿಸಿಕೊಳ್ಳುತ್ತವೆ?
ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಬಲ್ಲ ಹಲವು ಕುರುಹುಗಳು, ಹೃದಯ ವೈಫಲ್ಯದಲ್ಲಿ ಕಾಣಸಿಗುತ್ತವೆ1. ಹೃದಯದ ಮೇಲೆ ಉಂಟಾದ ಒತ್ತಡವನ್ನು ಸರಿದೂಗಿಸಲು, ದೇಹವು ಮಾಡುವ ಹೊಂದಾಣಿಕೆಯ ಕೆಲಸಗಳಿಂದಾಗಿ, ಈ ಕೆಳಗೆ ಕೊಟ್ಟಿರುವ ಎಚ್ಚರಿಕೆಯ ಕುರುಹುಗಳು ಏಳುತ್ತವೆ. ಕುರುಹುಗಳು ಗಂಭೀರವಾದದ್ದೋ ಇಲ್ಲವೋ ಎಂದು ಗುರುತಿಸುವುದು ಕಷ್ಟವಾಗಬಹುದು. ಹಾಗಾಗಿ, ಈ ಕೆಳಗಿನವುಗಳಲ್ಲಿ ಯಾವುದಾದರೂ ನಿಮ್ಮ ಅನುಭವಕ್ಕೆ ಬಂದರೆ, ನಿಮ್ಮ ಡಾಕ್ಟರನ್ನು ತಪ್ಪದೆ ಕಾಣಿರಿ[4]:
- ದಣಿವಾರಿಸುವಾಗ ಉಬ್ಬಸಗೊಳ್ಳುವುದು: ಎಂದಿನ ಸ್ಥಿತಿಯಲ್ಲಿ, ಉಸಿರುಚೀಲದ ಸೇರುಗೊಳವೆಗಳು (ಪಲ್ಮನರಿ ವೆಯ್ನ್) ಶ್ವಾಸಕೋಶಗಳಿಂದ ಹೃದಯಕ್ಕೆ ರಕ್ತವನ್ನು ಹಿಂತಿರುಗಿಸುತ್ತವೆ. ಆದರೆ, ಹೃದಯದ ಕಸುವು ಕುಂದಿದಾಗ, ರಕ್ತವು ಸೇರುಗೊಳವೆಗಳಲ್ಲೇ ಉಳಿದುಬಿಡುತ್ತದೆ. ಇದರಿಂದಾಗಿ, ರಕ್ತವು ಶ್ವಾಸಕೋಶಗಳ ಒಳಗೆ ಸೋರಿ, ಉಬ್ಬಸ ಉಂಟಾಗುತ್ತದೆ.
- ನಿಲ್ಲದಿರುವ ಕೆಮ್ಮು ಇಲ್ಲವೇ ಏದುಸಿರು ಬಿಡುವುದು: ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಳ್ಳುವುದರಿಂದ, ಕೆಮ್ಮು ಇಲ್ಲವೇ ಏದುಸಿರು ನಿಲ್ಲುವುದೇ ಇಲ್ಲ.
- ಕೈ, ಪಾದ ಮತ್ತು ಹಿಮ್ಮಡಿ ಗಂಟುಗಳ ಊತ: ಹೃದಯದಿಂದ ರಕ್ತವು ಮೆಲ್ಲನೆ ಹೊರಗೆ ಹರಿಯುವುದರಿಂದ, ಹೃದಯಕ್ಕೆ ಹಿಂತಿರುಗುವ ರಕ್ತವು ಅಂಗಾಂಶಗಳಲ್ಲಿ ಕಟ್ಟಿಕೊಳ್ಳುತ್ತದೆ. ಮೂತ್ರಪಿಂಡಗಳು, ದೇಹದಲ್ಲಿ ಹೆಚ್ಚಿದ ದ್ರವವನ್ನು ಹೊರಹಾಕಲು ಆಗದೆ ಕಷ್ಟಪಡುತ್ತವೆ. ಇದರಿಂದಾಗಿ, ಕೈ, ಪಾದ ಮತ್ತು ಹಿಮ್ಮಡಿ ಗಂಟುಗಳಲ್ಲಿ ದ್ರವ ಕಟ್ಟಿಕೊಂಡು ಊತವುಂಟಾಗುತ್ತದೆ.
- ಬಳಲಿಕೆ: ದೇಹದ ರಕ್ತದ ಬೇಡಿಕೆಯನ್ನು ಪೂರೈಸಲು ಹೃದಯಕ್ಕೆ ಆಗುವುದಿಲ್ಲ. ಇದರಿಂದಾಗಿ, ಕೈಕಾಲುಗಳಿಗೆ ಬೇಕಾಗುವಷ್ಟು ರಕ್ತ ಸಿಗದೆ, ಬಳಲಿಕೆ ಉಂಟಾಗುತ್ತದೆ.
- ಹಸಿವಿನ ಕೊರತೆ: ಹೃದಯದಿಂದ ಸರಿಯಾಗಿ ರಕ್ತದ ಪೂರೈಕೆ ಆಗದಿರುವುದರಿಂದ, ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟಾಗಿ, ಹೊಟ್ಟೆ ತುಂಬಿದಂತೆ ಅನಿಸುತ್ತದೆ. ನಿಮಗೆ ಕಸಿವಿಸಿಯಾದರೆ ಇಲ್ಲವೇ ಹೊಟ್ಟೆ ಉಬ್ಬರಿಸಿದರೆ ಕೂಡ ಅದರ ಬಗ್ಗೆ ಗಮನಹರಿಸಬೇಕು.
- ಗೊಂದಲ: ರಕ್ತದಲ್ಲಿನ ಸೋಡಿಯಂ ಅಳತೆಯಲ್ಲಿ ಬದಲಾವಣೆಗಳು ಆಗುವುದರಿಂದ, ಗಡಿಬಿಡಿ, ಮರೆವು ಇಲ್ಲವೇ ಗೊಂದಲ ಉಂಟಾಗುತ್ತದೆ. ನಿಮಗೆ ಒಮ್ಮಿಂದೊಮ್ಮೆಲೆ ತಲೆತಿರುಗುವುದು, ಡಿಪ್ರೆಶನ್ ಇಲ್ಲವೇ ಬೇಸರವಾದರೆ, ನಿಮ್ಮ ಡಾಕ್ಟರನ್ನು ಕಾಣಿರಿ.
- ಏರಿದ ಎದೆಬಡಿತ: ತನ್ನ ಪಂಪಿಂಗ್ ಸಾಮರ್ಥ್ಯದಲ್ಲಾದ ಕೊರತೆಯನ್ನು ಸರಿದೂಗಿಸಲು ಹೃದಯವು ಜೋರಾಗಿ ಬಡಿಯುತ್ತದೆ.
- ನೀವು ಎಚ್ಚರಿಕೆ ವಹಿಸಬೇಕಾದ ಮತ್ತೊಂದು ಸಂಗತಿಯೆಂದರೆ, ನಿಮ್ಮ ದೇಹದ ತೂಕ. ನಿಮ್ಮ ತೂಕದ ಮೇಲೆ ನಿಯಮಿತವಾಗಿ ನಿಗಾವಹಿಸಿ. ಏಕೆಂದರೆ ಒಮ್ಮೆಗೆ ಏರುವ ದೇಹ ತೂಕ ಕೂಡ ಕುರುಹುಗಳಲ್ಲೊಂದಾಗಿದೆ.
ಮುಗಿಲು ಮೈಮೇಲೆ ಬಿದ್ದಂತೆ ಅನಿಸುತ್ತಿದೆಯೇ, ಅಂತಹ ಚಿಂತೆ ಬೇಡ. ನಿಯಮಿತವಾದ ಡಾಕ್ಟರ್ ಭೇಟಿಯ ಜೊತೆಗೆ, ಔಷಧಗಳು ಹಾಗೂ ಜೀವನಶೈಲಿಯ ಬದಲಾವಣೆಗಳು, ನಿಮ್ಮ ಕುರುಹುಗಳನ್ನು ಚೆನ್ನಾಗಿ ಹಿಡಿತದಲ್ಲಿ ಇಡಲು ನೆರವಾಗಬಹುದು. ನಿಮ್ಮ ಸದ್ಯದ ಕುರುಹುಗಳ ಮೇಲೆ ನಿಗಾವಹಿಸಿ, ಅವನ್ನು ವಾಸಿ ಮಾಡಲು ಡಾಕ್ಟರ್ ನೆರವು ಪಡೆಯುವುದರಿಂದ, ನಿಮ್ಮ ಆರೋಗ್ಯ ತೊಂದರೆ ಸುಧಾರಿಸಲು ಹಾಗೂ ಅದನ್ನು ಚೆನ್ನಾಗಿ ನಿಭಾಯಿಸಲು ನೆರವಾಗಬಹುದು[3].
ಆದ್ದರಿಂದ, ಈ ಕುರುಹುಗಳನ್ನು ದಯವಿಟ್ಟು ಕಡೆಗಣಿಸಬೇಡಿ. ಕೆಲವೊಮ್ಮೆ ಅವು ಹಂತಹಂತವಾಗಿ ಹದಗೆಟ್ಟು, ಉಸಿರಾಟದ ತೊಂದರೆ ಹಾಗೂ ಮೂತ್ರಪಿಂಡದ ವೈಫಲ್ಯವನ್ನು ಕೂಡ ಉಂಟುಮಾಡಬಹುದು. ಆದರೆ, ಕುರುಹುಗಳನ್ನು ಹೋಗಲಾಡಿಸಲು ಚಿಕಿತ್ಸೆಗಳಿವೆ ಹಾಗೂ ನೀವು ನಲಿವಿನಿಂದ ಬದುಕು ನಡೆಸಬಹುದು[3].
References:
- American Heart Association. What is heart failure? [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/what-is-heart-failure.
- Harvard Health Publishing. 5 warning signs of early heart failure – Harvard Health [Internet]. Harvard Health. Harvard Health; 2016 [cited 2020 Apr 26]. Available from: https://www.health.harvard.edu/heart-health/5-warning-signs-of-early-heart-failure
- American Heart Association. Types of heart failure [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/what-is-heart-failure/types-of-heart-failure.
- American Heart Association. Warning signs of heart failure [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/warning-signs-of-heart-failure.