ಕೊಲೆಸ್ಟರಾಲ್ ಕೆಟ್ಟದ್ದು ಎಂಬುದು ಒಂದು ಜನಪ್ರಿಯ ನಂಬಿಕೆ, ಆದರೆ ಈ ನಂಬಿಕೆಗೆ ವಿರುದ್ಧವಾಗಿ, ನಾವು ಆರೋಗ್ಯವಾಗಿರಲು ಕೊಲೆಸ್ಟರಾಲ್ ಬೇಕೇ ಬೇಕು. ಆದರೆ, ಅದು ಯಾವುದೇ ತರಹದ ಕೊಲೆಸ್ಟರಾಲ್ ಅಲ್ಲ. ಆರೋಗ್ಯಕಾರಿ ಕೊಲೆಸ್ಟರಾಲ್ಗೂ (HDL – ಹೈ ಡೆನ್ಸಿಟಿ ಲಿಪೊ ಪ್ರೊಟೀನ್) ಅನಾರೋಗ್ಯಕಾರಿ ಕೊಲೆಸ್ಟರಾಲ್ಗೂ (LDL – ಲೊ ಡೆನ್ಸಿಟಿ ಲಿಪೊ ಪ್ರೊಟೀನ್) ಇರುವ ವ್ಯತ್ಯಾಸವನ್ನು ನೀವು ತಿಳಿದಿರಬೇಕು. ಜೀವಕೋಶದ ಗೋಡೆಗಳನ್ನು ಕಟ್ಟುವುದಕ್ಕೆ ಆರೋಗ್ಯಕಾರಿ ಕೊಲೆಸ್ಟರಾಲ್ ಸಹಾಯ ಮಾಡಿದರೆ, ಅನಾರೋಗ್ಯಕಾರಿ ಕೊಲೆಸ್ಟರಾಲ್ ದೇಹದಲ್ಲಿ ಹೆಚ್ಚಾಗಿ ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡಬಹುದು. LDL ಕೊಲೆಸ್ಟರಾಲ್ ಜಾಸ್ತಿ ಆಗುವುದರಿಂದ ಅತಿರೋಸ್ಕಿಲಿರೋಸಿಸ್ (atherosclerosis) ಬರುವ ಅಪಾಯವಿರುತ್ತದೆ, ಅಂದರೆ – ಅಪಧಮನಿಗಳು ತೆಳ್ಳಗಾಗುತ್ತವೆ ಮತ್ತು ಇದರಿಂದ ಹೃದಯಾಘಾತವೂ ಆಗಬಹುದು.
ಆದ್ದರಿಂದ, ಅನಾರೋಗ್ಯಕಾರಿ ಕೊಲೆಸ್ಟರಾಲ್ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ದೆಹಲಿಯ, ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ, ಡಯೆಟಿಕ್ಸ್ ವಿಭಾಗದ ಮುಖ್ಯಸ್ಥೆ, ನಿಧಿ ಧವನ್ ಅವರು, ನಮ್ಮ ಊಟದಲ್ಲಿನ ಕೊಲೆಸ್ಟರಾಲನ್ನು ಕಡಿಮೆ ಮಾಡಲು, ಈ ಕೆಳಗಿನ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ತಿನ್ನುವಂತೆ ಸೂಚಿಸುತ್ತಾರೆ:
1. ಕರಿದ ತಿಂಡಿಗಳು: ಕರಿಯಲು ಬಳಸುವ ಎಣ್ಣೆಯಲ್ಲಿ, ಆರೋಗ್ಯಕರವಲ್ಲದ ಕೊಬ್ಬು ತುಂಬಿಕೊಂಡಿರುತ್ತದೆ. ಎಣ್ಣೆಯನ್ನು ಹೆಚ್ಚು ಬಿಸಿ ಮಾಡುವುದರಿಂದ, ಅದರಲ್ಲಿರುವ ಫ್ಯಾಟಿ ಆ್ಯಸಿಡ್ಗಳು ಮಾರ್ಪಟ್ಟು, ಕ್ಯಾನ್ಸರ್ ಅಪಾಯ ತರಬಲ್ಲ ಹಾಗೂ ಅಪಧಮನಿಗಳಿಗೆ ಹಾನಿಮಾಡಬಲ್ಲ ವಸ್ತುವಾಗಿ ರೂಪುಗೊಳ್ಳುತ್ತದೆ. ಅಷ್ಟು ಹೆಚ್ಚು ಬಿಸಿಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳು ತಮ್ಮ ಪೋಷಕಾಂಶವನ್ನು ಕಳೆದುಕೊಳ್ಳುತ್ತವೆ. ಅಂತಹ ತಿನಿಸುಗಳ ಸೇವನೆಯು, ಟ್ರಾನ್ಸ್ ಫ್ಯಾಟ್ ಉಂಟಾಗುವುದಕ್ಕೆ ಕಾರಣವಾಗುತ್ತದೆ ಹಾಗೂ ಇದರಿಂದ ಕೊಲೆಸ್ಟರಾಲಿನ ಮಟ್ಟವೂ ಏರುಪೇರಾಗುತ್ತದೆ.
2. ಟ್ರಾನ್ಸ್ ಫ್ಯಾಟ್: ಬೇಕ್ ಮಾಡಿದ ತಿನಿಸುಗಳು, ಮೊದಲೇ ಪ್ಯಾಕ್ ಮಾಡಿಟ್ಟ ತಿನಿಸುಗಳು, ಸಿಹಿ ತಿಂಡಿ, ಬಿಸ್ಕೆಟ್ಗಳು ಮತ್ತು ಬೇರೆ ಬೇರೆ ತರಹದ ಚಾಕೊಲೇಟ್ಗಳಲ್ಲಿ ಟ್ರಾನ್ಸ್ ಫ್ಯಾಟ್ ಇರುತ್ತದೆ. ಇವು ‘ಅನಾರೋಗ್ಯಕಾರಿ‘ ಕೊಲೆಸ್ಟರಾಲ್ ಹೆಚ್ಚಾಗುವಂತೆ, HDL (ಆರೋಗ್ಯಕಾರಿ ಕೊಲೆಸ್ಟರಾಲ್) ಕಡಿಮೆಯಾಗುವಂತೆ ಮಾಡಿ, ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತವೆ. ಹೊರಗಿನ ತಿನಿಸುಗಳನ್ನು ಕೊಳ್ಳುವಾಗ ಹೈಡ್ರೋಜಿನೇಟೆಡ್ ಎಣ್ಣೆ ಅಥವಾ ಟ್ರಾನ್ಸ್ ಫ್ಯಾಟ್ ಇರುವುದನ್ನು ಪರಿಶೀಲಿಸಿ. ಹಾಗೆಯೇ, ಸರಿಯಾದ LDL ಮಟ್ಟವನ್ನು ಕಾಪಾಡಿಕೊಳ್ಳಲು, ಇಂಥವುಗಳಿಂದ ದೂರವಿರಬೇಕು.
3. ಸಂಸ್ಕರಿಸಿದ ಕೆಂಪು ಮಾಂಸ: ಮಾಂಸ, ಅದರಲ್ಲೂ ವಿಶೇಷವಾಗಿ ಸಾಸೇಜ್ ಅಥವಾ ಹ್ಯಾಮ್ ಬರ್ಗರ್ಗಳು, ಅನಾರೋಗ್ಯಕಾರಿ ಕೊಲೆಸ್ಟರಾಲನ್ನು ಹೆಚ್ಚಿಸುತ್ತವೆ. ನೀವು ಮಾಂಸದ ಅಡುಗೆಯನ್ನು ಮಾಡುವಾಗ, ಅದರಿಂದ ನಿಮ್ಮ ಕಣ್ಣಿಗೆ ಕಾಣುವಷ್ಟು ಕೊಬ್ಬನ್ನು ತೆಗೆಯುವುದರಿಂದ, ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಸಾಸೇಜ್ ಅಥವಾ ಹ್ಯಾಮ್ ಬರ್ಗರ್ಗಳನ್ನು ಕೊಳ್ಳುವಾಗ, ಪೋಷಕಾಂಶದ ಲೇಬಲ್ ಪರಿಶೀಲಿಸಿ ಮತ್ತು ಕಡಿಮೆ ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಇರುವುದನ್ನು ಆಯ್ಕೆ ಮಾಡಿಕೊಳ್ಳಿ.
4. ಸೋಡಾ: ನಾವು ಅತಿ ಹೆಚ್ಚು ದೂಷಿಸಬೇಕಾದದ್ದು ಗಾಳಿ ತುಂಬಿಸಿದ ಪಾನೀಯಗಳನ್ನು. ಸೋಡದಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆಯ ಅಂಶವು ದೇಹದಲ್ಲಿರುವ ಟ್ರೈ–ಗ್ಲಿಸರೈಡ್ಸ್ ಅನ್ನು ಹೆಚ್ಚಿಸಿ, ದೇಹದ ತೂಕ ಹೆಚ್ಚಿಸುತ್ತದೆ. ಇವೆರಡರಿಂದ LDL ಮಟ್ಟವೂ ಹೆಚ್ಚಾಗುತ್ತದೆ.
5. ಬಿಳಿ ಬ್ರೆಡ್, ಪಾಸ್ತಾ ಮತ್ತು ಅನ್ನ: ಸಂಸ್ಕರಿಸಿದ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಉದಾಹರಣೆಗೆ ಬಿಳಿ ಅಕ್ಕಿ, ಬಿಳಿ ಬ್ರೆಡ್ ಮತ್ತು ಪಾಸ್ತಾಗಳಂತಹ ಪದಾರ್ಥಗಳು, HDL ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಕೊಲೆಸ್ಟರಾಲ್ ಇಲ್ಲದ ಊಟದ ಪದ್ಧತಿಯನ್ನು ರೂಢಿಸಿಕೊಳ್ಳಲು ಇವನ್ನು ಆದಷ್ಟು ಕಡಿಮೆ ಮಾಡಬೇಕು. ಇಂತಹ ಸರಳಕಾರ್ಬೋಹೈಡ್ರೇಟ್ಗಳು ದೇಹದಲ್ಲಿ ಸುಲಭವಾಗಿ ಒಳಹೊಕ್ಕು ಉರಿಯೂತವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಇವುಗಳಿಂದ ಅನಾರೋಗ್ಯಕಾರಿ ಕೊಲೆಸ್ಟರಾಲಿನ ಮಟ್ಟವೂ ಹೆಚ್ಚಾಗುತ್ತದೆ.
ನೀವು ಯಾವೊಂದು ಪದಾರ್ಥ ತಿನ್ನುವುದನ್ನು ಬಿಡುವುದು ಬೇಡ, ಆದರೆ ಮೇಲೆ ಹೇಳಿರುವ ಆಹಾರ ಪದಾರ್ಥಗಳ ಬಗ್ಗೆ ಗಮನವಿರಲಿ ಮತ್ತು ಸರಿಯಾದ ಕೊಲೆಸ್ಟರಾಲಿನ ಮಟ್ಟವನ್ನು ಕಾಯ್ದುಕೊಳ್ಳಲು, ಇವನ್ನು ಮಿತವಾಗಿ ಸೇವಿಸಬೇಕಾಗುತ್ತದೆ.
ಈ ಲೇಖನ ಇಷ್ಟವಾಯಿತೇ, ಹಾಗಾದರೆ ಇದನ್ನು ಹಂಚಲು ಮರೆಯದಿರಿ!