Reading Time: 2 minutes

ಹೃದಯದ ಆರೋಗ್ಯಕ್ಕೆ ಕಾರ್ಡಿಯೊ (ಏರೋಬಿಕ್ಸ್‌) ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ[1]. ಆದರೆ ನೀವು ತುಂಬ ಕಾರ್ಡಿಯೊ ಮಾಡಿದ್ದರೆ ಇಲ್ಲವೇ ತುಂಬ ಸುಸ್ತಾಗುತ್ತಿದ್ದರೆ ಇಲ್ಲವೇ ಅದನ್ನು ಮಾಡಲು ಇಷ್ಟವಿಲ್ಲದಿದ್ದರೆ, ಚಿಂತಿಸದಿರಿ! ನಿಮ್ಮ ಮುಂದೆ “ಭಾರ ಎತ್ತುವ” ಆಯ್ಕೆಗಳಿವೆ. ಭಾರ ಎತ್ತುವುದು ಒಂದು ಸಾಮರ್ಥ್ಯ ತರಬೇತಿ ವ್ಯಾಯಾಮವಾಗಿದ್ದು, ಅದು ತಾಳಿಕೆ, ಬಾಗುವಿಕೆ ಹಾಗೂ ಸಮತೋಲನದೊಂದಿಗೆ ನಾಲ್ಕು ಪ್ರಮುಖ ಬಗೆಯ ವ್ಯಾಯಾಮಗಳಲ್ಲಿ ಒಂದಾಗಿದೆ.[1] ಹೃದಯಾಘಾತದಂತಹ ಕಾರ್ಡಿಯಾಕ್ ಘಟನೆಯ ಬಳಿಕ ಇಲ್ಲವೇ ನಿಮಗೆ ಹೃದ್ರೋಗ ಇದ್ದರೆ, ವ್ಯಾಯಾಮ ಮಾಡಲು ಹೆದರಿಕೆ ಆಗುವುದು ಸಹಜ[2,3]. ಆದರೆ, ಹೃದ್ರೋಗಿಗಳು ಭಾರ ಎತ್ತುವ ವ್ಯಾಯಾಮದಿಂದ ಪ್ರಯೋಜನಗಳನ್ನು ಪಡೆಯಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಅದು, ಇಸ್ಕೀಮಿಕ್‌ ಹೃದ್ರೋಗ ಎಂದೂ ಕರೆಯಲಾಗುವ ಕೊರೊನರಿ ಆರ್ಟರಿ ತೊಂದರೆ ಇರುವ ಮಂದಿಯ ಕೆಲಸ ಮಾಡುವ ಸಾಮರ್ಥ್ಯವನ್ನು ಸುಧಾರಿಸಬಹುದು[3,4].

ಇಸ್ಕೀಮಿಕ್‌ ಹೃದ್ರೋಗ ಎಂದರೇನು?

ರಕ್ತನಾಳಗಳು ಆಕ್ಸಿಜನ್‍ನಿಂದ ತುಂಬಿದ ರಕ್ತವನ್ನು ಹೃದಯಕ್ಕೆ ಕೊಂಡೊಯ್ಯಲು ಆಗದೆ ಇರುವ ಸ್ಥಿತಿಯನ್ನು ಇಸ್ಕೀಮಿಕ್‌ ಹೃದ್ರೋಗ ಎನ್ನುವರು. ರಕ್ತನಾಳಗಳ ಒಳಗೆ ಪ್ಲಾಕ್‌ ಎಂಬ ಮೇಣದಂತಹ ಅಂಶ ತುಂಬಿಕೊಂಡು, ರಕ್ತನಾಳಗಳ ಅಗಲಕಿರಿದಾಗಿ ಇಲ್ಲವೇ ಅವು ಗಡುಸಾಗಿ, ರಕ್ತದ ಹರಿವಿಗೆ ತಡೆ ಉಂಟಾದಾಗ, ಹೀಗಾಗುತ್ತದೆ. ಇಸ್ಕೀಮಿಕ್‌ ಹೃದ್ರೋಗ ಹೃದಯಾಘಾತಕ್ಕೆ ಎಡೆ ಮಾಡಿಕೊಡಬಹುದು[4].

ಭಾರ ತರಬೇತಿ ಎಂದರೇನು?

ಭಾರ ತರಬೇತಿಯನ್ನು ಪ್ರತಿರೋಧ ತರಬೇತಿ ಇಲ್ಲವೇ ಸಾಮರ್ಥ್ಯ ತರಬೇತಿ ಎಂದು ಕೂಡ ಕರೆಯಲಾಗುತ್ತದೆ. ಇದರಲ್ಲಿ, ಭಾರದ ವಸ್ತುಗಳನ್ನು ಬಳಸಿ ಸ್ನಾಯುಗಳನ್ನು ಕುಗ್ಗಿಸುವ ಮೂಲಕ, ಸ್ನಾಯುಗಳ ಗಾತ್ರ, ಬಲ ಮತ್ತು ತಾಳಿಕೆಯನ್ನು ಹೆಚ್ಚಿಸಲಾಗುತ್ತದೆ[5]. ಇದು, ಭಾರದ ಯಂತ್ರಗಳು, ಭಾರದ ಕಲ್ಲುಗಳು, ರೆಸಿಸ್ಟನ್ಸ್‌ ಬ್ಯಾಂಡ್‌ಗಳು ಹಾಗೂ ನಿಮ್ಮದೇ ದೇಹದ ಭಾರವನ್ನು ಬಳಸಿಕೊಳ್ಳುತ್ತದೆ. ಇದರಿಂದ ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ಹೃದ್ರೋಗಗಳನ್ನು ದೂರವಿಡಲು ಹಾಗೂ ಹಿಡಿತದಲ್ಲಿಡಲು, ಇದು ನೆರವಾಗುತ್ತದೆ[5]. ಸರಿಯಾಗಿ ವ್ಯಾಯಾಮ ಮಾಡಲು ಹಾಗೂ ಸುರಕ್ಷತೆಯ ಕ್ರಮಗಳನ್ನು ಪಾಲಿಸಲು, ಜಿಮ್‌ ಶಿಕ್ಷಕ ಇಲ್ಲವೇ ವೈಯಕ್ತಿಕ ತರಬೇತುದಾರರ ಮಾರ್ಗದರ್ಶನದಲ್ಲಿ, ಜಿಮ್‌ನಲ್ಲಿ ನೀವು ಭಾರ ತರಬೇತಿ ಪಡೆದುಕೊಳ್ಳಬಹುದು[5]. ಆರೋಗ್ಯಕರ ತೂಕ ಹಾಗೂ ಒಳ್ಳೆಯ ಗುಣಮಟ್ಟದ ಬದುಕನ್ನು ಪಡೆಯಲು, ಸರಿಯಾದ ಯೋಜನೆಯ ಭಾರ ತರಬೇತಿ ಪ್ರೋಗ್ರಾಂ ನಿಮಗೆ ನೆರವಾಗಬಹುದು[2].

ಇಸ್ಕೀಮಿಕ್‌ ಹೃದ್ರೋಗಿಗಳಲ್ಲಿ ಭಾರ ಎತ್ತುವ ವ್ಯಾಯಾಮಗಳಿಂದ ಆಗುವ ಪ್ರಯೋಜನಗಳೇನು?

ಹೊಸ ಸಂಶೋಧನೆಯ ಪ್ರಕಾರ, ನಿಮಗೆ ಹೃದ್ರೋಗ ಇದ್ದರೂ ಕೂಡ, ಭಾರ ಎತ್ತುವ ವ್ಯಾಯಾಮಗಳಿಂದ ನೆರವಾಗಬಹುದು[6]. ಸರಿಯಾದ ಅಳವಿಯ ಭಾರ ಎತ್ತುವ ವ್ಯಾಯಾಮ, ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಹೃದ್ರೋಗಿಗಳು ಇದನ್ನು ಸುರಕ್ಷಿತವಾಗಿ ಮಾಡಬಹುದು ಹಾಗೂ ಹೃದಯದ ತೊಂದರೆಗಳಾಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.

ಭಾರ ಎತ್ತುವ ವ್ಯಾಯಾಮಗಳ ಪ್ರಯೋಜನಗಳು ಹೀಗಿವೆ[2,3,6,7]

  • ಅದು ಹೃದಯರಕ್ತನಾಳದ ಫಿಟ್ನೆಸ್‌ ಹಾಗೂ ನಡೆಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ
  • ಅದು ಸ್ನಾಯು, ಮೂಳೆಗಳು, ಹಾಗೂ ಅಂಗಾಂಶಗಳ ಬಲವನ್ನು ಹೆಚ್ಚಿಸುತ್ತದೆ
  • ಅದು ಹೃದಯದ ಸುತ್ತ ಕೊಬ್ಬು ತುಂಬಿಕೊಳ್ಳುವುದನ್ನು ಕಡಿಮೆ ಮಾಡಿ, ಹೃದ್ರೋಗಗಳ ಸಾಧ್ಯತೆಯನ್ನು ತಗ್ಗಿಸುತ್ತದೆ
  • ಅದು ನಿಮ್ಮ ಹೃದಯದ ಸ್ನಾಯುವನ್ನು ಬಲಪಡಿಸಲು ನೆರವಾಗುತ್ತದೆ. ಅದರ ಜೊತೆಗೆ ಕಾರ್ಡಿಯೊ ವ್ಯಾಯಾಮಗಳನ್ನು ಸೇರಿಸಿದರೆ, ನಿಮ್ಮ ಕೆಟ್ಟ ಕೊಲೆಸ್ಟರಾಲ್‌ ಇಳಿಯಲು ಹಾಗೂ ಒಳ್ಳೆ ಕೊಲೆಸ್ಟರಾಲ್‌ ಮಟ್ಟಗಳು ಏರಲು ನೆರವಾಗಬಹುದು.
  • ನಿಮ್ಮ ದೇಹದ ಒಟ್ಟಾರೆ ಬೊಜ್ಜು ಕಡಿಮೆಯಾಗಲು ಕೂಡ ಅದು ನೆರವಾಗಿ, ಸ್ನಾಯುಗಳನ್ನು ಗಟ್ಟಿಮುಟ್ಟಾಗಿಸುತ್ತದೆ.

ನಿಮಗೆ ಹೃದಯದ ತೊಂದರೆಗಳ ಇತಿಹಾಸವಿದ್ದರೆ, ಭಾರ ಎತ್ತುವ ವ್ಯಾಯಾಮಗಳ ಸುರಕ್ಷತೆಯ ಬಗ್ಗೆ ಕಳಕಳಿ ಇರುವುದು ಸಹಜ. ಆದರೂ, ಪ್ರತಿ ವಾರ ಕಡಿಮೆ ಅಂದರೂ ಎರಡು ಬಾರಿ ಸಾಮರ್ಥ್ಯ ತರಬೇತಿ ಮಾಡಲು ಅಮೇರಿಕನ್‌ ಹಾರ್ಟ್‌ ಅಸೋಸಿಯೇಶನ್‌ (ಎಎಚ್‌ಎ) ಸೂಚಿಸುತ್ತದೆ[2]. ಭಾರ ಎತ್ತುವ ವ್ಯಾಯಾಮದ ನಡುವೆ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಬೀಳುವ ಒತ್ತಡ, ಏರೋಬಿಕ್‌ ವ್ಯಾಯಾಮದಷ್ಟೇ ಆಗಿರುತ್ತದೆ[3].

ನಿಮಗೆ ಇತ್ತೀಚೆಗೆ ಪಾರ್ಶ್ವವಾಯು ಆಗಿದ್ದರೆ, ಭಾರ ಎತ್ತುವ ವ್ಯಾಯಾಮ ಮಾಡುವ ಮುನ್ನ, ನೀವು ನಿಮ್ಮ ಹೃದ್ರೋಗ ತಜ್ಞರನ್ನು ಕಾಣಬೇಕು[2]. ಭಾರ ಎತ್ತುವ ವ್ಯಾಯಾಮ ಹಾಗೂ ಕಾರ್ಡಿಯೊದಿಂದ ನಿಮಗೆ ಎದೆನೋವು ಇಲ್ಲವೇ ಇಸ್ಕೀಮಿಕ್‌ ಹೃದ್ರೋಗದ ಇತರ ಕುರುಹುಗಳು ಪದೇ ಪದೇ ಕಾಣಿಸಿಕೊಳ್ಳುವ ಸಾಧ್ಯತೆ ಅಷ್ಟಾಗಿ ಇಲ್ಲವೆಂದು ಅಧ್ಯಯನಗಳು ತೋರಿಸಿವೆ. ಆದರೆ, ಹೃದ್ರೋಗ ಇರುವ, ಯಾವ ಕುರುಹುಗಳೂ ಇಲ್ಲದ ರೋಗಿಗಳು ಹಾಗೂ ಭಾರ ಎತ್ತುವ ವ್ಯಾಯಾಮ ಶುರುಮಾಡುವ ಮೊದಲೇ ಕಾರ್ಡಿಯೊ ದಿನಚರಿಯಲ್ಲಿ ಇದ್ದವರ ಮೇಲೆ ಈ ಅಧ್ಯಯನ ನಡೆಸಲಾಯಿತು[3]. ಹಾಗಾಗಿ, ನಿಮ್ಮಲ್ಲಿ ಕುರುಹುಗಳು ಕಾಣಿಸಿದರೆ ಇಲ್ಲವೇ ಹೊಸ ಕುರುಹುಗಳು ಹುಟ್ಟಿಕೊಂಡರೆ, ದಿನಚರಿಯನ್ನು ಮುಂದುವರೆಸುವ ಮುನ್ನ, ಕೂಡಲೇ ವ್ಯಾಯಾಮ ನಿಲ್ಲಿಸಿ ಹಾಗೂ ನಿಮ್ಮ ಡಾಕ್ಟರೊಂದಿಗೆ ಮಾತನಾಡಿ.

ಭಾರ ಎತ್ತುವ ವ್ಯಾಯಾಮವನ್ನು ವೃತ್ತಿಪರರ ನೆರವಿನಿಂದ, ಸರಿಯಾದ ರೀತಿಯಲ್ಲಿ ಸರಿಯಾದ ಅವಧಿಯವರೆಗೆ ಮಾಡಬೇಕು. ಅದು ನಿಮ್ಮ ಹೃದಯದ ಆರೋಗ್ಯಕ್ಕೆ ಲಾಭದಾಯಕ ಮತ್ತು ಸುರಕ್ಷಿತವಾಗಬಹುದು. ನಿಮ್ಮ ಡಾಕ್ಟರ್‌ ಒಪ್ಪಿಗೆ ನೀಡಿದ ಬಳಿಕ, ಕಾರ್ಡಿಯೊ ಜೊತೆಗೆ ಭಾರ ಎತ್ತುವ ವ್ಯಾಯಾಮವನ್ನು ನೀವು ಮಾಡಲು ತೊಡಗಬಹುದು. ಅದು ನಿಮ್ಮ ಹೃದಯವನ್ನು ಆರೋಗ್ಯವಾಗಿಟ್ಟು, ಯಾವುದೇ ಹೆಚ್ಚುವರಿ ತೊಂದರೆಗಳು ಆಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.[6]

ಸ್ವಲ್ಪವಾದರೂ ಭಾರ ಎತ್ತುವ ವ್ಯಾಯಾಮದೊಂದಿಗೆ ಚುರುಕಾಗಿರಿ ಹಾಗೂ ಆರೋಗ್ಯವಾದ ಹೃದಯ ನಿಮ್ಮದಾಗಿಸಿ!

References:

  1. Give your heart health a lift [Internet]. Harvard Health. 2019 [cited 2020 Apr 28]. Available from: https://www.health.harvard.edu/staying-healthy/give-your-heart-health-a-lift
  2. American Heart Association. Strength and resistance training exercise [Internet]. [updated 2018 Apr 19; cited 2019 Dec 10]. Available from: https://www.heart.org/en/healthy-living/fitness/fitness-basics/strength-and-resistance-training-exercise.
  3. McKelvie RS, McCartney N. Weightlifting training in cardiac patients. Considerations. Sports Med. 1990 Dec;10(6):355-64.
  4. National Heart, Lung, and Blood Institute. Ischaemic heart disease [Internet]. [cited 2019 Dec 2]. Available from: https://www.nhlbi.nih.gov/health-topics/ischemic-heart-disease.
  5. Better Health Channel. Resistance training – health benefits [Internet]. [updated 2018 Aug; cited 2019 Dec 10]. Available from: https://www.betterhealth.vic.gov.au/health/healthyliving/resistance-training-health-benefits.
  6. Harvard Health Publishing. Give your heart health a lift [Internet]. 2019 [cited 2019 Dec 10]. Available from: https://www.health.harvard.edu/staying-healthy/give-your-heart-health-a-lift.
  7. Johns Hopkins Medicine. 3 kinds of exercise that boost heart health [Internet]. [cited 2019 Dec 10]. Available from: https://www.hopkinsmedicine.org/health/wellness-and-prevention/3-kinds-of-exercise-that-boost-heart-health.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.