ನೀವು ಹೃದಯಸಂಬಂಧಿತ ಕಾಯಿಲೆ ಅಥವಾ ರಕ್ತದೊತ್ತಡದಿಂದ ಬಳಲುತ್ತಿದ್ದಲ್ಲಿ, ಅದನ್ನು ಕಡಿಮೆಗೊಳಿಸಲು ವೈದ್ಯರು ಹಲವು ಔಷಧಿಗಳನ್ನು ಸೂಚಿಸಿರುತ್ತಾರೆ. ಆ ಔಷಧಿಗಳಲ್ಲಿ ಒಂದು” ಡೈಯುರೆಟಿಕ್ ” (ಮೂತ್ರವರ್ಧಕ ) ಇದನ್ನು ಸಾಮಾನ್ಯವಾಗಿ “ನೀರಿನ ಮಾತ್ರೆ” ಎಂದು ಕರೆಯಲಾಗುತ್ತದೆ. ಹಾಗೆಯೇ ಇದರ ಸಾಮಾನ್ಯ ಹೆಸರುಗಳು ಫ್ಯೂರೋಸೆಮೈಡ್ & ಕ್ಲೊರೋಥಿಯಾಜೈಡ್. ಹೃದಯವೈಫಲ್ಯ ಚಿಕಿತ್ಸೆಗೆ ಈ ಮಾತ್ರೆಯು ಉಪಯೋಗಕಾರಿಯೆಂದು ಭಾರತೀಯ ಕಾರ್ಡಿಯಾಕ್ ಸೊಸೈಟಿ ತಿಳಿಸಿದೆ.[1]
ನೀರಿನ ಮಾತ್ರೆಗಳು ಯಾವುವು? ಅವುಗಳ ಕೆಲಸವೇನು?
ನೀರಿನ ಮಾತ್ರೆಗಳು (ಅಥವಾ ಡೈಯುರೆಟಿಕ್‍ಗಳು) ಕಾಫಿ ಹಾಗೂ ಟೀ ಕುಡಿದಾಗ ಆಗುವಂತೆ, ನಿಮ್ಮ ಬ್ಲ್ಯಾಡರ್ ತುಂಬಿಕೊಂಡು, ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕು ಅನಿಸುವುದು. ನೀರಿನ ಮಾತ್ರೆಗಳು ದೇಹದಿಂದ ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಹೃದಯದಿಂದ ಪಂಪ್ ಮಾಡಬೇಕಾದ ರಕ್ತದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಕೆಲಸದ ಒತ್ತಡವು ಕಡಿಮೆಯಾಗುತ್ತದೆ. ಇದು ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಳ್ಳುವುದನ್ನು ತಡೆಯುತ್ತದೆ. ಹೃದಯ ವೈಫಲ್ಯ ಇರುವವರಿಗೆ ಕಾಲಿನ ಹಿಮ್ಮಡಿಯ ಗಂಟಿನಲ್ಲಿ ಆಗುವ ಊತವನ್ನು ಕಡಿಮೆ ಮಾಡುತ್ತದೆ. ಹಾಗಾದರೆ, ನೀರು ಎಲ್ಲಿ ಹೋಗುವುದೆಂದು ನೀವು ಕೇಳಬಹುದು. ನೀರಿನ ಮಾತ್ರೆಗಳು ಹೆಚ್ಚುವರಿ ನೀರನ್ನೆಲ್ಲ ಮೂತ್ರದ ಮೂಲಕ ಹೊರ ಹಾಕುತ್ತದೆ. ಅಂದರೆ ನೀವು ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬರುವುದು.[2]
ನೀರಿನ ಮಾತ್ರೆಗಳು ಹೆಚ್ಚುವರಿ ನೀರನ್ನು ಹೇಗೆ ತೆಗೆದು ಹಾಕುತ್ತವೆ?
ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಡೈಯುರೆಟಿಕ್‍ಗಳು ಲಭ್ಯವಿದ್ದು, ಇವೆಲ್ಲವೂ ವಿಭಿನ್ನ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಆದರೆ ಇವೆಲ್ಲದರ ಸಾಮಾನ್ಯ ಕಾರ್ಯವೆಂದರೆ ಹೆಚ್ಚುವರಿ ನೀರು ಮತ್ತು ಸೋಡಿಯಂ ಅನ್ನು ಹೊರಹಾಕುವುದು. ರಕ್ತದೊತ್ತಡವನ್ನು ಕಡಿಮೆ ಮಾಡಲು ಫ್ಯೂರೋಸೆಮೈಡ್ ಮತ್ತು ಕ್ಲೋರೋಥಿಯಾಜೈಡ್ ಅನ್ನು ಬಳಸುತ್ತಾರೆ. ಇವು ಮೂತ್ರಪಿಂಡದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಎರಡೂ ಔಷಧಿಗಳು ನಿಮ್ಮ ಮೂತ್ರಪಿಂಡದಲ್ಲಿ ಮೂತ್ರ ಹೊರಹಾಕುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಹೃದಯದ ಒತ್ತಡವು ಕಡಿಮೆಗೊಳ್ಳುತ್ತದೆ. ಕ್ಲೋರೋಥಿಯಾಜೈಡ್ ಹೆಚ್ಚುವರಿಯಾಗಿ ರಕ್ತದೊತ್ತಡವನ್ನು ಕಮ್ಮಿ ಮಾಡಬಹುದು, ಯಾಕೆಂದರೆ, ಅದು ಪರೋಕ್ಷವಾಗಿ ರಕ್ತನಾಳಗಳ ಅಗಲ ಕಿರಿದಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮ್ಮ ಹೃದಯ ಬಡಿಯುವಾಗ, ಹೆಚ್ಚು ಬಲ ಹಾಕುವುದು ಕಡಿಮೆಯಾಗುತ್ತದೆ. ಈ ಎರಡೂ ಡೈಯುರೆಟಿಕ್ ಗುಂಪುಗಳ ಔಷಧಿಗಳು ನಿಮ್ಮ ದೇಹದ ಪೊಟ್ಯಾಷಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದೇ ಡೈಯುರೆಟಿಕ್‍ಗಳ ಮೂರನೇ ಗುಂಪು ಎಂದರೆ “ಪೊಟ್ಯಾಷಿಯಂ-ಸ್ಪೇರಿಂಗ್ ಡೈಯುರೆಟಿಕ್‍ಗಳು”. ಹೆಸರೇ ಸೂಚಿಸುವಂತೆ ಇದು ದೇಹದಿಂದ ಪೊಟ್ಯಾಷಿಯಂ ಅನ್ನು ತೆಗೆದು ಹಾಕುವುದಿಲ್ಲ.
ಡಾಕ್ಟರ್ ಈ ಕೆಳಗಿನವುಗಳಲ್ಲಿ, ನಿಮ್ಮ ದೇಹಕ್ಕೆ ಅಗತ್ಯವಿರುವ ಒಂದು ಮೂತ್ರರ್ಧಕವನ್ನು ಸೂಚಿಸುತ್ತಾರೆ.[3]
ನೀರಿನ ಮಾತ್ರೆಗಳು ಅಡ್ಡ ಪರಿಣಾಮ ಹೊಂದಿವೆಯೇ?
ಅತಿಯಾದ ಮೂತ್ರವಿಸರ್ಜನೆ ಹೊರತುಪಡಿಸಿ, ಕೆಲವೊಮ್ಮೆ ನೀರಿನ ಮಾತ್ರೆಗಳು ದೇಹದ ನಿರ್ಜಲೀಕರಣಕ್ಕೂ ಕಾರಣವಾಗಬಹುದು, ಹಾಗೆಯೇ ತಲೆ ಸುತ್ತುವಿಕೆ ಉಂಟಾಗಬಹುದು. ದೇಹದಲ್ಲಿನ ಪೊಟ್ಯಾಶಿಯಂ ಮತ್ತು ಸೋಡಿಯಂ ಪ್ರಮಾಣಗಳನ್ನು ಅವು ನಿಯಂತ್ರಿಸುವುದರಿಂದ, ಕೆಲವು ಡೈಯುರೆಟಿಕ್‍ಗಳು ಸ್ನಾಯುಗಳ ಸೆಳೆತಕ್ಕೂ ಕಾರಣವಾಗಬಹುದು. ಕೆಲವು ಪುರುಷರಲ್ಲಿ ನಿಮಿರುವಿಕೆಯ ತೊಂದರೆಗಳೂ ಕಾಣಿಸಬಹುದು. ನೀವು ಡೈಯುರೆಟಿಕ್ ಗಳನ್ನು ಸೇವಿಸಿದಾಗ, ಆಯಾಸ, ತಲೆನೋವು ಕೂಡ ಬರಬಹುದು. ಹಾಗಾಗಿ ಹೆಚ್ಚು ನೀರು ಕುಡಿಯುವುದನ್ನು ಮರೆಯಬೇಡಿ, ಇಲ್ಲವಾದಲ್ಲಿ ಬಾಯಿ ಒಣಗಬಹುದು.
ಇದರ ರೋಗಲಕ್ಷಣಗಳನ್ನು ತಡೆದುಕೊಳ್ಳಲು ಆಗದಿದ್ದಾಗ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಔಷಧಿಗಳು ನಿಮ್ಮ ಅಂಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆಯೆಂದು ತಿಳಿಯಲು, ನಿಮ್ಮ ವೈದ್ಯರು ಔಷಧಿಯ ಪ್ರಮಾಣವನ್ನು ಬದಲಾಯಿಸಿ ಕೊಡಬಹುದು. ರಕ್ತದೊತ್ತಡದ ಪರೀಕ್ಷೆ, ಮೂತ್ರಪಿಂಡದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳಬಹುದು. ನಿಮ್ಮ ತೂಕದ ಮೇಲೊಂದು ಕಣ್ಣಿಡಲು ವೈದ್ಯರು ಸೂಚಿಸಬಹುದು. ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಇವು ಔಷಧಿಯ ಕಾರ್ಯನಿರ್ವಹಣೆಯನ್ನು ನಿಮಗೆ ತಿಳಿಸುತ್ತದೆ.[4]
ಒಟ್ಟಾರೆಯಾಗಿ, ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು, ನಿಮ್ಮ ಹೃದಯ ವೈಫಲ್ಯದ ಲಕ್ಷಣಗಳ ನಿರ್ವಹಣೆಯಲ್ಲಿ ನೆರವಾಗುತ್ತದೆ. ಡೈಯುರೆಟಿಕ್‍ಗಳನ್ನು ತೆಗೆದುಕೊಳ್ಳುವುದರಿಂದ ಹೃದಯ ವೈಫಲ್ಯದಿಂದ ಆಗುವ ಸಾವಿನ ಪ್ರಮಾಣ ಕಡಿಮೆಯಾಗುವುದಿಲ್ಲ, 1 ಅವು ಹೃದಯದ ತೊಂದರೆ ಇದ್ದರೂ ಬದುಕುವುದನ್ನು ಸುಲಭಗೊಳಿಸುತ್ತವೆ. ಹಾಗಾಗಿ, ನೀವು ಡೈಯುರೆಟಿಕ್ ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ಆಹಾರದಲ್ಲಿ ಬೇಕಾ ಬಿಟ್ಟಿ ಉಪ್ಪು ತಿನ್ನಬಹುದು ಎಂದಲ್ಲ. ನಿಮ್ಮ ದೇಹವನ್ನು ನೀವು ಸರಿಯಾಗಿ ನೋಡಿಕೊಳ್ಳಬೇಕು. ಔಷಧಿಗಳು ಅವುಗಳ ಕಾರ್ಯವನ್ನು ನಿರ್ವಹಿಸಲಿ. ನಿಮ್ಮ ಮನಸ್ಸು, ಆತ್ಮ, ದೇಹದ ಕಾರ್ಯವನ್ನು ಸರಿಯಾಗಿ ಇರಿಸಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿ.