weight loss bmi-importance
Reading Time: 2 minutes

ಸಂಖ್ಯೆಗಳು ಮನುಷ್ಯನ ವ್ಯಕ್ತಿತ್ವವನ್ನು ಅಳೆಯುವುದಿಲ್ಲ. ಆದರೆ ಕೆಲವು ಸಂಖ್ಯೆಗಳು ನಿಮಗಿರುವ ಹೃದ್ರೋಗದ ಅಪಾಯವನ್ನು ಪತ್ತೆ ಮಾಡಲು ಖಂಡಿತ ನೆರವಾಗಬಹುದು.

ಬಾಡಿ ಮಾಸ್ ಇಂಡೆಕ್ಸ್, ಇಲ್ಲವೇ ಬಿಎಂಐ, ಎಂಬುದು ಅಂತಹದೇ ಒಂದು ಸಂಖ್ಯೆ. ನಿಮ್ಮ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಂಡುಹಿಡಿಯಲು ಈ ಸರಳ ಲೆಕ್ಕಚಾರವನ್ನು ಬಳಸಲಾಗುತ್ತದೆ. ನಿಮ್ಮ ಬಿಎಂಐ ನಿಮಗೆ ತಿಳಿದಾಗ, ನಿಮ್ಮ ತೂಕವು ನಿಮ್ಮ ಎತ್ತರಕ್ಕೆ ಸರಿಯಾಗಿ ಇದೆಯೇ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.(1) ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಬಹಳಷ್ಟು ದೇಶಗಳಲ್ಲಿ, ಕಡಿಮೆ ತೂಕಕ್ಕಿಂತಲೂ ಹೆಚ್ಚಿನ ತೂಕದಿಂದ ಉಂಟಾಗುವ ತೊಂದರೆಗಳಿಂದಾಗಿ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ.(2)

ಬನ್ನಿ ಲೆಕ್ಕಹಾಕೋಣ

ನಿಮ್ಮ ಬಿಎಂಐ ಅನ್ನು ಪತ್ತೆ ಮಾಡಲು ನೀವು ತ್ರಿಕಾಲ ಜ್ಞಾನಿಯಾಗಿರಬೇಕು ಎಂದೇನಿಲ್ಲ. ಅದಕ್ಕಾಗಿ ವೈಜ್ಞಾನಿಕ ಕ್ಯಾಲ್ಕ್ಯುಲೇಟರ್‌ ಕೂಡ ಬೇಕಿಲ್ಲ. ನಿಮ್ಮ ಫೋನಷ್ಟೆ ಸಾಕು.  ನಿಮ್ಮ ತೂಕವು ನಿಮಗೆ ಕಿಲೋಗ್ರಾಮ್‌ಗಳಲ್ಲಿ ಹಾಗೂ ಎತ್ತರವು ಮೀಟರ್‌ಗಳಲ್ಲಿ ತಿಳಿದಿರಬೇಕಷ್ಟೆ.

ನಿಮ್ಮ ತೂಕವನ್ನು ನೀವು ಪೌಂಡ್‌ಗಳಲ್ಲಿ ತಿಳಿದಿದ್ದರೆ, ಅದನ್ನು 0.45 ರಿಂದ ಗುಣಿಸಿ ಕಿಲೋಗ್ರಾಂಗೆ ಪರಿವರ್ತಿಸಿ (ಏಕೆಂದರೆ 1 ಪೌಂಡ್ = 0.45 ಕೆಜಿ). ನಿಮ್ಮ ಎತ್ತರವನ್ನು ಅಡಿಗಳಲ್ಲಿ ತಿಳಿದಿದ್ದರೆ, ಅದನ್ನು 0.3 (1 ಅಡಿ = 0.3 ಮೀಟರ್) ರಿಂದ ಗುಣಿಸಿ ಮೀಟರ್‌ಗೆ ಪರಿವರ್ತಿಸಿ. ಈಗ ನಿಮ್ಮ ಎತ್ತರದ ವರ್ಗವನ್ನು [(ಎತ್ತರ)2] ಕಂಡುಹಿಡಿಯಿರಿ.

ಬಿಎಂಐ ಮೌಲ್ಯವನ್ನು ಲೆಕ್ಕಹಾಕಲು, ಕಿಲೋಗ್ರಾಮ್‌ಗಳಲ್ಲಿರುವ ನಿಮ್ಮ ತೂಕವನ್ನು ಮೀಟರ್‌ನಲ್ಲಿರುವ ನಿಮ್ಮ ಎತ್ತರದ ವರ್ಗದಿಂದ ಭಾಗಿಸಿ. ಇಷ್ಟೇ! ನಿಮ್ಮ ಮ್ಯಾಜಿಕ್ ನಂಬರ್ ಈಗ ನಿಮ್ಮ ಕೈಯಲ್ಲಿದೆ, ಇದು ನೀವು ಎಷ್ಟು ಆರೋಗ್ಯಕರವಾಗಿದ್ದೀರಿ, ಮತ್ತು ನಿಮ್ಮ ಹೃದಯವು ದೀರ್ಘಕಾಲದವರೆಗೆ ಕೆಲಸ ಮಾಡುವಂತೆ ನೋಡಿಕೊಳ್ಳಲು ಏನಾದರೂ ಕ್ರಮ ಕೈಗೊಳ್ಳಬೇಕೇ ಎಂದು ತಿಳಿಯಲು ಸಹಾಯ ಮಾಡುತ್ತದೆ.(1) ಒಂದು ವೇಳೆ ನಿಮಗೆ ದಕ್ಕಿದ ಉತ್ತರವು 22 ಆಗಿದ್ದರೆ, ನಿಮ್ಮ ಬಿಎಂಐ 22 kg/m2 ಎಂದರ್ಥ.

ಈ ಎಲ್ಲಾ ಲೆಕ್ಕಚಾರದಿಂದ ತಿಳಿದು ಬರುವ ಸಂಗತಿ

ನಿಮ್ಮ ಬಾಡಿ ಮಾಸ್ ಇಂಡೆಕ್ಸ್ ನಿಮಗೀಗ ತಿಳಿದಿದೆ, ಹಾಗಾದರೆ ನಿಜಕ್ಕೂ ಇದು ನಿಮಗೆ ಏನನ್ನು ಹೇಳಲು ಬಯಸುತ್ತದೆ? ಬಿಎಂಐ ಮೌಲ್ಯವು ಆರೋಗ್ಯಕರ ತೂಕ, ಅಳತೆ ಮೀರಿದ ತೂಕ ಮತ್ತು ಬೊಜ್ಜು ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಬಿಎಂಐ ಮೌಲ್ಯವು 25 ಕ್ಕಿಂತಲೂ ಕಡಿಮೆ ಇದ್ದರೆ, ನೀವು ಹೆಚ್ಚು ಚಿಂತಿಸುವ ಅವಶ್ಯಕತೆ ಇಲ್ಲ. ಹಾಗೊಂದು ವೇಳೆ ಮೌಲ್ಯವು 25 ಕ್ಕಿಂತ ಹೆಚ್ಚಿದ್ದರೆ ಅಥವಾ ಸಮನಾಗಿದ್ದರೆ, ನೀವು ಅಪಾಯದ ಪ್ರಮಾಣದಲ್ಲಿ ಹೆಚ್ಚು ಅಪಾಯವಿರುವ ಕಡೆ ಇದ್ದೀರಿ ಎಂಬುದನ್ನು ಸೂಚಿಸುತ್ತದೆ. 25 ಮತ್ತು 30 ರ ನಡುವಿನ ಮೌಲ್ಯದಲ್ಲಿ ಇದ್ದರೆ, ನೀವು ಅಧಿಕ ತೂಕ ಹೊಂದಿದ್ದೀರಿ ಎಂದರ್ಥ. ಮೌಲ್ಯವು 30 ಕ್ಕಿಂತ ಹೆಚ್ಚಿದ್ದರೆ, ನೀವು ಬೊಜ್ಜನ್ನು ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ ಹಾಗೂ ತಕ್ಷಣವೇ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗಬೇಕೆಂದು ಕರೆ ನೀಡುತ್ತದೆ.(2)

ಬಿಎಂಐ ನಿಮ್ಮ ಎತ್ತರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದ, ಇಂತಿಷ್ಟು ಎತ್ತರಕ್ಕೆ ಇಂತಿಷ್ಟು ತೂಕದ ಮಟ್ಟವನ್ನು ಹೊಂದಿರಬೇಕೆಂಬುದು ನಿಮಗೆ ಇದರಿಂದ ತಿಳಿದು ಬರುತ್ತದೆ. ನಿಮ್ಮ ಡಾಕ್ಟರನ್ನು ನೀವು ಸಂಪರ್ಕಿಸಿದರೆ, ನಿಮ್ಮ ಬಿಎಂಐ ಮೌಲ್ಯದಿಂದ ಇನ್ನಷ್ಟು ವೈಯಕ್ತಿಕ ವಿವರಗಳನ್ನು ನಿಮ್ಮ ದೇಹದ ರಚನೆ ಮತ್ತು ನಿಮ್ಮ ವೈದ್ಯಕೀಯ ಇತಿಹಾಸಕ್ಕೆ ತಕ್ಕಂತೆ ನಿಮಗೆ ಒದಗಿಸಬಹುದು. ಉದಾಹರಣೆಗೆ, ಬೇರೆ ಭೂಪ್ರದೇಶದ ಜನರಿಗೆ ಹೋಲಿಸಿದರೆ ಏಷ್ಯನ್ನರಲ್ಲಿ ಹೃದಯ ಸಮಸ್ಯೆಗಳ ಅಪಾಯ ಹೆಚ್ಚು. ಅಥವಾ, ಇನ್ನೊಂದು ಉದಾಹರಣೆ ನೀಡುವುದಾದರೆ, ಕಟ್ಟುಮಸ್ತಾದ ವ್ಯಕ್ತಿಯು ಅಧಿಕ ಬಿಎಂಐ ಹೊಂದಿದ್ದರೆ, ಅವರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದಿಲ್ಲ. ಸ್ನಾಯುಗಳು ಕೊಬ್ಬಿಗಿಂತ ಹೆಚ್ಚು ದಟ್ಟವಾಗಿ ಕೂಡಿಕೊಂಡಿರುವುರಿಂದ, ಅವರ ಬಿಎಂಐ ಅಧಿಕವಾಗಿದ್ದರೂ ಕೂಡ ಅವರು ಸಂಪೂರ್ಣವಾಗಿ ಆರೋಗ್ಯವಾಗಿರುತ್ತಾರೆ.(2)

ಬಿಎಂಐ ಏಕೆ ಮುಖ್ಯವಾಗುತ್ತದೆ?

ಟೈಪ್ 2 ಡಯಾಬಿಟಿಸ್, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಪಿತ್ತಗಲ್ಲುಗಳಂತಹ ಸಮಸ್ಯೆಗಳಿಗೆ ನೀವು ಒಳಗಾಗುವ ಸಾಧ್ಯತೆಯು ಹೆಚ್ಚಿದೆ ಎಂಬುದನ್ನು ಅಧಿಕ ಬಾಡಿ ಮಾಸ್ ಇಂಡೆಕ್ಸ್ ಸೂಚಿಸುತ್ತದೆ. 2018 ರಲ್ಲಿ ಪ್ರಕಟವಾದ ಲೇಖನವೊಂದು, 60% -70% ಜನರಲ್ಲಿ ಇರುವ ಅಸಹಜ ಕೊಲೆಸ್ಟರಾಲ್ ಮಟ್ಟವು ಬೊಜ್ಜು ದೇಹದೊಂದಿಗೆ ತಳಕು ಹಾಕಿಕೊಂಡಿದೆ ಎಂದು ಹೇಳಿದೆ. ಆದಾಗ್ಯೂ, ಅಧಿಕ ತೂಕ ಹೊಂದಿರುವ ಸುಮಾರು 50% -60% ಜನರು ತಮ್ಮ ಜೀವನದಲ್ಲಿ ಕೆಲವು ಬಾರಿಯಾದರೂ ಅಸಹಜ ಕೊಲೆಸ್ಟರಾಲ್ ಮಟ್ಟಕ್ಕೆ ಗುರಿಯಾಗಿದ್ದಾರೆ.(3, 4)

ನಿಮ್ಮ ಬಿಎಂಐ ಅನ್ನು ನಿಯಂತ್ರಣದಲ್ಲಿಡಲು ಉತ್ತಮ ಮಾರ್ಗವೆಂದರೆ ಹೆಚ್ಚುವರಿ ತೂಕವನ್ನು ಕರಗಿಸುವುದಾಗಿದೆ. ಈ ಆರೋಗ್ಯದ ಅಪಾಯಗಳನ್ನು ದೂರವಿಡಲು ಚಟುವಟಿಕೆಯಿಂದಿರಿ, ನಡೆಯುತ್ತಿರಿ ಮತ್ತು ಕಿಲೋಗಳನ್ನು ಕರಗಿಸುತ್ತಿರಿ. ನೀವು ತೆಗೆದುಕೊಳ್ಳುವ ಕ್ಯಾಲರಿಗಳ ಸಂಖ್ಯೆಯ ಮೇಲೆ ಮಿತಿ ಹೇರುವುದರಿಂದಲೂ ನಿಮಗೆ ಸಹಾಯವಾಗುತ್ತದೆ. ಮತ್ತೊಮ್ಮೆ, ಇದು ಸರಳ ಗಣಿತ: ನೀವು ಕಡಿಮೆ ಕ್ಯಾಲರಿಗಳನ್ನು ತೆಗೆದುಕೊಂಡಷ್ಟು, ಕ್ಯಾಲರಿಗಳ ಕರಗುವಿಕೆಯ ಪ್ರಮಾಣ ಹೆಚ್ಚಾಗುತ್ತದೆ, ಇದು ನಿಮ್ಮ ದೇಹದಲ್ಲಿರುವ ಕೊಬ್ಬಿನಂಶವನ್ನು ಒಟ್ಟಾರೆಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ತೆಗೆದುಕೊಳ್ಳುವ ಕ್ಯಾಲರಿಯಲ್ಲಿ ಕೇವಲ 500 ಕ್ಯಾಲರಿಯನ್ನು ಕಡಿಮೆ ಮಾಡಿದರೂ, ನಿಮ್ಮ ಬಿಎಂಐ ಅನ್ನು ಆರೋಗ್ಯಕರ ವ್ಯಾಪ್ತಿಯಲ್ಲಿ ತರಲು ನಿಮಗೆ ಸಹಾಯವಾಗುತ್ತದೆ.(3)

ಹಾಗಾಗಿ, ನಿಮ್ಮ ಬಿಎಂಐ ತಿಳಿದುಕೊಳ್ಳಿ, ಡಾಕ್ಟರನ್ನು ಸಂಪರ್ಕಿಸಿ, ಹಾಗೂ ನಿಮ್ಮ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಿ.

ಉಲ್ಲೇಖ:

  1. What is the body mass index (BMI)? [Internet]. [updated 2019 Jul 15; cited 2019 Aug 01]. Available from: https://www.nhs.uk/common-health-questions/lifestyle/what-is-the-body-mass-index-bmi/. 
  2. Obesity and overweight [Internet]. 2018 Feb 16. [cited 2019 Aug 01]. Available from: https://www.who.int/news-room/fact-sheets/detail/obesity-and-overweight.
  3. Why is a healthy weight important? [Internet]. [cited 2019 Aug 01]. Available from: https://www.nhlbi.nih.gov/health/educational/lose_wt/index.htm.
  4. Feingold KR, Anawalt B, Boyce A, Chrousos G, Dungan K, Grossman A, et al., editors. Obesity and dyslipidemia. Endotext [Internet]. South Dartmouth (MA): MDText.com, Inc.; 2000- [cited 2019 Aug 01]. Available from: NCBI Bookshelf.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.