weight loss foods to avoid
Reading Time: 3 minutes

ನಿಮ್ಮ ಜೀವನದಲ್ಲಿ, ನಿಮಗೆ ಹತ್ತಿರದ ಗೆಳೆಯರು, ಒಳ್ಳೆಯ ಗೆಳೆಯರು ಹಾಗೂ ಪರಿಚಯಸ್ಥರು ಇರುತ್ತಾರೆ. ಅಂತೆಯೇ, ನಿಮ್ಮ ತೂಕ ಇಳಿಸುವ ಕಾರ್ಯಕ್ರಮದಲ್ಲಿ, ನೀವು ಪ್ರತಿದಿನ ಸೇವಿಸಬಹುದಾದ ಕೆಲವು ಆಹಾರಗಳಿವೆ, ಕೆಲವನ್ನು ನೀವು ವಾರದಲ್ಲಿ ಒಂದು ಅಥವ ಎರಡು ಬಾರಿ ಸವಿಯಬಹುದು, ಮತ್ತು ಕೆಲವು ನಿರ್ದಿಷ್ಟ ಆಹಾರವನ್ನು ನೀವು ತಿಂಗಳಿಗೊಮ್ಮೆ ಆನಂದಿಸಬಹುದು.

ಇಂದು ನಾವು ಕೊನೆಯ ಆಹಾರದ ಬಗೆಯ ಕುರಿತು ಮಾತನಾಡೋಣ: ಅಂದರೆ ಪರಿಚಯಸ್ಥರು ಅಥವ ನೀವು ತಿಂಗಳಿಗೊಮ್ಮೆ ಆನಂದಿಸುವ ಆಹಾರ ಪದಾರ್ಥಗಳು.

ಈಗಂತೂ, ಈ ಆಹಾರಗಳು ಯಾವುವು ಎಂದು ತಿಳಿಯುವ ಕುತೂಹಲದಿಂದ ನೀವು ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ನಮ್ಮ ಹೆಲ್ತ್ ಕೋಚ್, ಜಯಶ್ರೀ ಸಾಲಿಯನ್, ನೀವು ಈ ಆಹಾರಗಳಿಂದ ಏಕೆ ದೂರವಿರಬೇಕು ಎಂದು ಹಂಚಿಕೊಂಡಿದ್ದಾರೆ. ಬನ್ನಿ ಅವು ಯಾವುದೆಂದು ತಿಳಿದುಕೊಳ್ಳೋಣ.

ಬೆಳಗಿನ ತಿಂಡಿಯ ಸೀರಿಯಲ್‌ಗಳು:

ಹಾಲಿನ ಜೊತೆ ಕಾರ್ನ್‌ಫ್ಲೇಕ್ಸ್ ಅಥವ ಗೋಧಿ ಫ್ಲೇಕ್ಸ್ ಬೆಳಗಿನ ತಿಂಡಿಗಾಗಿ ಒಂದು ಉತ್ತಮ ಆಯ್ಕೆ ಎಂದು ಎನಿಸಬಹುದು. ಇದು ಬೆಳಗಿನ ತಿಂಡಿಯನ್ನು ಸಿದ್ಧಪಡಿಸಲು ತೆಗೆದುಕೊಳ್ಳುವ ಸಮಯವನ್ನು ಉಳಿಸಬಹುದು. ಆದರೆ, ನೀವು ತೂಕವನ್ನು ಇಳಿಸಬೇಕೆಂದು ನೀವು ಅಂದುಕೊಂಡಿದ್ದರೆ, ಈ ಸೀರಿಯಲ್‌ಗಳು ಒಳ್ಳೆ ಆಯ್ಕೆ ಖಂಡಿತ ಅಲ್ಲ. ಏಕೆಂದರೆ ದೇಹಕ್ಕೆ ಬೇಕಿರುವ ಪ್ರಮುಖ ಪೋಷಕಾಂಶ, ಅಂದರೆ ನಾರಿನಾಂಶವನ್ನು ಅದರಿಂದ ತೆಗೆದು ಹಾಕಲಾಗಿರುತ್ತದೆ. ಅದಲ್ಲದೆ, ನಾರಿನಾಂಶದ ಕೊರತೆ ಆ ದಿನದ ಹಸಿವನ್ನು ಹಾಗೂ ಸಕ್ಕರೆ ಮತ್ತು ಕೊಬ್ಬು ತುಂಬಿದ ಆಹಾರ ಪದಾರ್ಥಗಳ ಬಯಕೆಯನ್ನು ಉತ್ತೇಜಿಸುತ್ತದೆ.

ಹಾಗೆಯೇ, ಮ್ಯೂಸ್ಲಿ ಕೂಡ ಆರೋಗ್ಯಕರ ಆಯ್ಕೆ ಎಂದು ನಿಮಗೆ ಎನಿಸಬಹುದು. ಆದರೆ, ಇದರಲ್ಲಿರುವ ಮಾಲ್ಟೋಡೆಕ್ಸ್‌ಟ್ರಿನ್, ಅಧಿಕ ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಆ್ಯಪಲ್ ಜ್ಯೂಸ್‌ನಂತಹ ಸಾರಗಳು ಗುಪ್ತ ರೂಪದಲ್ಲಿ ಸಕ್ಕರೆಯನ್ನು ಹೊಂದಿರುತ್ತವೆ.

ಹಾಗಾಗಿ, ಸೀರಿಯಲ್‌ಗಳನ್ನು ಬಿಡಿ ಹಾಗೂ ಹಿತಕರವಾದ ಬೆಳಗಿನ ಉಪಹಾರವನ್ನು ಸೇವಿಸಿ.

ಬೇಕರಿ ಪದಾರ್ಥಗಳು:

ಬಿಸ್ಕತ್ತು ಅಥವ ಕುಕಿ ಜೊತೆ ಟೀ ಅಥವ ಕಾಫಿ ಕುಡಿಯುವ ಅಭ್ಯಾಸ ನಿಮ್ಮದಾಗಿದ್ದರೆ, ಈ ಲೇಖನ ನಿಮಗಾಗಿ. ಈ ಎರಡೂ, ಕಾಫಿ/ಟೀ ಸಮಯದ ಮೆಚ್ಚಿನ ಪದಾರ್ಥಗಳಲ್ಲಿ ಲೋಡ್‌ಗಟ್ಟಲೆ ಸಕ್ಕರೆ, ಕೊಬ್ಬು, ಪ್ರಿಸರ್ವೇಟಿವ್‌ಗಳು ಹಾಗೂ ಸಂಸ್ಕರಿಸಿದ ಹಿಟ್ಟು ಇರುತ್ತವೆ; ಇದೊಂದು ಕ್ಯಾಲರಿಯಿಂದ ತುಂಬಿರುವ ಆಹಾರ ಪದಾರ್ಥ. ಈ ಹೈ-ಫೈಬರ್ ಡೈಜೆಸ್ಟಿವ್ ಬಿಸ್ಕತ್ತುಗಳು ಸಹ ಒಳ್ಳೆಯದಲ್ಲ! ಈ ಬಿಸ್ಕತ್ತುಗಳಲ್ಲಿ ಹೆಚ್ಚುವರಿ ನಾರನ್ನು ಬಂಧಿಸಲು ಹೆಚ್ಚುವರಿ ಕೊಬ್ಬನ್ನು ಸೇರಿಸಿರುತ್ತಾರೆ, ಇದು ಕ್ಯಾಲರಿಗಳನ್ನು ಹೆಚ್ಚಿಸುತ್ತದೆ. ಇನ್ನೊಂದು ಸಮಸ್ಯೆ ಏನೆಂದರೆ ನೀವು ಈ ಬಿಸ್ಕತ್ತುಗಳನ್ನು ಆರೋಗ್ಯಕರ ಎಂದು ಭಾವಿಸಿ ಅತಿಯಾಗಿ ಸೇವಿಸುತ್ತಿರುವುದು.

ಹಾಗಾಗಿ, ನಿಮ್ಮ ಟೀ ಅಥವಾ ಕಾಫಿಯನ್ನು ಸವಿಯಿರಿ, ಆದರೆ ಬಿಸ್ಕತ್ತು ಮತ್ತು ಕುಕೀಗಳನ್ನು ಬಿಟ್ಟುಬಿಡಿ.

ಅಂತೆಯೇ, ನೀವು ಪಫ್ಸ್, ರಸ್ಕು, ಬ್ರೆಡ್‌ಸ್ಟಿಕ್‌ಗಳು, ಕ್ರ್ಯಾಕರ್ಸ್, ಬ್ರೌನಿಗಳು ಮತ್ತು ಮಫಿನ್‌ಗಳಂತಹ ಬೇಕರಿ ತಿಂಡಿಗಳಿಂದ ಅಂತರವನ್ನು ಕಾಯ್ದುಕೊಳ್ಳುವುದೆ ಉತ್ತಮ.

ಕರಿದ ಆಹಾರ ಪದಾರ್ಥಗಳು:

ಸಮೋಸಾ, ಬಜ್ಜಿ, ಪೂರಿ ಅಥವಾ ಫ್ರೈಗಳನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ? ಅದರ ಕುರುಕುಲು ವಿನ್ಯಾಸ ಮತ್ತು ಅದರ ರುಚಿ ಖಂಡಿತ ಜೊಲ್ಲು ಸುರಿಸುವಂತೆ ಮಾಡುತ್ತದೆ. ಆದರೆ, ನೀವು ಹೆಚ್ಚುವರಿ ತೂಕವನ್ನು ಇಳಿಸಲು ಪ್ರಯತ್ನಿಸುತ್ತಿದ್ದರೆ, ಈ ತಿಂಡಿ ತಿನ್ನುವುದನ್ನು ಬಿಟ್ಟು ಬಿಡುವುದು ಒಳ್ಳೆಯದು. ಕರಿದ ಆಹಾರ ಪದಾರ್ಥಗಳು ಹೆಚ್ಚು ಕ್ಯಾಲರಿ ದಟ್ಟವಾದ ಪೌಷ್ಟಿಕಾಂಶದ ಕೊಬ್ಬಿನಿಂದ ತುಂಬಿರುತ್ತದೆ, ಇದು ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಪ್ರತಿ ಗ್ರಾಂಗೆ 9 ಕ್ಯಾಲರಿ, ನೀಡುತ್ತದೆ.

ಹೆಚ್ಚುವರಿ ಕ್ಯಾಲರಿಗಳ ಮೇಲೆ ಒಂದು ಕಣ್ಣಿಡುವುದು ಯಶಸ್ವಿಯಾಗಿ ತೂಕ ಇಳಿಸುವ ಕಾರ್ಯಕ್ರಮದ ಒಂದು ಪ್ರಮುಖ ಅಂಶ. ಹಾಗಾಗಿ, ನಿಮ್ಮ ಕರಿದ ಆಹಾರ ಪದಾರ್ಥಗಳನ್ನು ಕಡಿತಗೊಳಿಸುವುದರಿಂದ ನೀವು ಯಶಸ್ವಿಯಾಗಿ ನಿಮ್ಮ ಕನಸಿನ ತೂಕವನ್ನು ಸಾಧಿಸಬಹುದಾಗಿದೆ.

ಕೃತಕ ಸಿಹಿಕಾರಕಗಳು:

ಶೂನ್ಯ-ಕ್ಯಾಲರಿ, ಸಕ್ಕರೆ ಮುಕ್ತ ಮಾರ್ಗವು ಕ್ಯಾಲರಿಯಿಂದ ತುಂಬಿರುವ ಸಕ್ಕರೆಗೆ ಒಂದು ಜಾಣ ಪರ್ಯಾಯ, ಅಲ್ಲವೆ? ಅಷ್ಟಕ್ಕೂ, ರುಚಿಕರವಾದ ಸಿಹಿತಿಂಡಿಗಳನ್ನು ಯಾವುದೇ ಕ್ಯಾಲರಿಗಳ ಭಯವಿಲ್ಲದೆ ಸೇವಿಸಲು ಇದೊಂದು ಒಳ್ಳೆಯ ಪರ್ಯಾಯ. ಆದರೆ, ಇದನ್ನು ಮಿತವಾಗಿ ಸೇವಿಸುವುದೆ ಕೀಲಿಕೈ. ದುರದೃಷ್ಟವಶಾತ್, ಈ ಸಿಹಿಕಾರಕಗಳು ಮತ್ತು ಅವುಗಳ ಪರಿಣಾಮಗಳನ್ನು ಜನರ ಅರಿವಿಗೆ ತರಬೇಕಾಗಿತ್ತು, ಆದರೆ ಆ ಕೆಲಸವೂ ನಡೆದಿಲ್ಲ. ಕೆಲವು ಅಧ್ಯಯನಗಳು, ಕೃತಕ ಸಿಹಿಕಾರಕಗಳನ್ನು ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ಎಂದು ಹೇಳುತ್ತಿದೆ, ಇದರಿಂದಾಗಿ ನಿಮ್ಮ ಹಸಿವು ಹೆಚ್ಚಾಗಿ ನಿಮ್ಮ ಕ್ಯಾಲರಿಯ ಸೇವನೆ ಹೆಚ್ಚಾಗುತ್ತದೆ.

ಇವುಗಳಿಗೆ ನಿಮ್ಮ ರುಚಿಯ ಗ್ರಹಿಕೆಯನ್ನು ಬದಲಿಸುವ ಪ್ರವೃತ್ತಿ ಇರುವುದರಿಂದ, ಅವು ಸಿಹಿ ತಿಂಡಿಗಳಿಗಾಗಿ ಇರುವ ನಿಮ್ಮ ಹಂಬಲವನ್ನು ಹೆಚ್ಚಿಸಬಹುದು ಹಾಗೂ ಆರೋಗ್ಯಕರ ಆಹಾರ ಸೇವನೆಯನ್ನು ಕಡಿಮೆಗೊಳಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಇದಲ್ಲದೆ, ಈ ಸಿಹಿಕಾರಕಗಳು ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ಕ್ಯಾನ್ಸರ್ ಸೇರಿದಂತೆ ಇತರ ಆರೋಗ್ಯದ ಅಪಾಯಗಳೊಂದಿಗೂ ಸಂಬಂಧ ಹೊಂದಿರಬಹುದು.

ಸಿಹಿತಿಂಡಿಗಳು:

ಐಸ್ ಕ್ರೀಮ್, ಗುಲಾಬ್ ಜಾಮೂನ್ ಅಥವಾ ಡೋನಟನ್ನು ಬೇಡ ಎಂದು ಯಾರೂ ಹೇಳಲಾರರು. ನಿಮ್ಮ ನಾಲಗೆಯ ರುಚಿ ಮೊಗ್ಗುಗಳ ಮೇಲೆ ಕುಣಿಯುವ ಮತ್ತು ನಿಮಗೆ ಉಲ್ಲಾಸದ ಅನುಭವವನ್ನು ಕೊಡುವ ಸಿಹಿಯನ್ನು ವಿರೋಧಿಸುವುದು ಅಸಾಧ್ಯ. ಸಕ್ಕರೆ ಮತ್ತು ಕೊಬ್ಬಿನ ಸಂಯೋಜನೆಯೇ ಈ ಸಿಹಿತಿಂಡಿಗಳನ್ನು ತುಂಬಾ ರುಚಿಕರವಾಗಿಸುತ್ತದೆ. ಸಕ್ಕರೆಯು, ರಕ್ತದ ಸಕ್ಕರೆ ಮಟ್ಟದಲ್ಲಿನ ಏರಿಕೆಗೆ ಕಾರಣವಾಗುತ್ತದೆ ಮತ್ತು ತಕ್ಷಣವೆ ಕುಸಿಯುತ್ತದೆ, ಹಾಗಾಗಿ ತ್ವರಿತ ಶಕ್ತಿಗಾಗಿ ನೀವು ಹೆಚ್ಚಿನ ಸಕ್ಕರೆಯನ್ನು ಬಯಸುವಂತೆ ಮಾಡುತ್ತದೆ. ಅಲ್ಲದೆ, ಈ ಸಿಹಿತಿಂಡಿಗಳಲ್ಲಿ ಹೆಚ್ಚಿನವು ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತವೆ, ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವುದು ಇದರಿಂದಲೇ.

ಸರಳವಾಗಿ ಹೇಳುವುದಾದರೆ, ಸಿಹಿತಿನಿಸುಗಳನ್ನು ತಿನ್ನುವುದು ತೂಕ ಇಳಿಕೆಗೆ ವಿದಾಯ ಹೇಳುವ ಖಚಿತವಾದ ದಾರಿಯಾಗಿದೆ.

ಹಣ್ಣಿನ ಜ್ಯೂಸ್:

ಹಣ್ಣುಗಳಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಆ್ಯಂಟಿ-ಆಕ್ಸಿಡೆಂಟ್ಟ್‌ಗಳು ತುಂಬಿಕೊಂಡಿರುವುದರಿಂದ ಅವು ತುಂಬ ಆರೋಗ್ಯಕರ. ಅವುಗಳಲ್ಲಿ ಕ್ಯಾಲರಿ ಕೂಡ ಕಡಿಮೆ. ಹಾಗಾಗಿ, ತಪ್ಪಿಸಬೇಕಾದ ಆಹಾರಗಳ ಪಟ್ಟಿಯಲ್ಲಿ ಹಣ್ಣಿನ ಜ್ಯೂಸನ್ನು ನೋಡುವುದು ಗೊಂದಲಮಯವಾಗಿರಬಹುದು. ಅದು ಏಕೆಂದರೆ, ನಾವು ಹಣ್ಣುಗಳನ್ನು ತಿನ್ನುವಾಗ ಅದನ್ನು ಅಗಿಯಲು ಮತ್ತು ಜೀರ್ಣಿಸಿಕೊಳ್ಳಲು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಆದರೆ, ನೀವು ಹಣ್ಣಿನ ಜ್ಯೂಸನ್ನು ಕುಡಿದಾಗ, ಒಂದೇ ಸಲಕ್ಕೆ ಮೂರರಿಂದ ಐದು ಬಾರಿ ಸೇವಿಸುವ ಹಣ್ಣುಗಳಿಗೆ ಸಮಾನವಾದ ಕ್ಯಾಲರಿಗಳನ್ನು ಸೇವಿಸುತ್ತಿದ್ದೀರಿ ಎಂದರ್ಥ, ಜೊತೆಗೆ ಅದರಲ್ಲಿ ಯಾವುದೇ ನಾರಿನಾಂಶ ಇರುವುದಿಲ್ಲ. ದ್ರವ ರೂಪದಲ್ಲಿರುವ ಕ್ಯಾಲರಿಗಳು ವೇಗವಾಗಿ ಜೀರ್ಣವಾಗಿ ನಿಮಗೆ ಬೇಗನೆ ಹಸಿವಾಗುತ್ತದೆ. ಜೊತೆಗೆ, ಹಣ್ಣಿನ ಜ್ಯೂಸ್ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ನಿಮ್ಮ ಪಾನ್‌ಕ್ರಿಯಾಸ್ ಅಪಾರ ಪ್ರಮಾಣದ ಇನ್ಸುಲಿನನ್ನು ಒಸರುತ್ತದೆ, ಅದು ಅಧಿಕ ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುತ್ತದೆ.

ಸರಳವಾಗಿ ಹೇಳುವುದಾದರೆ, ನಿಮ್ಮ ದೈನಂದಿನ ಆ್ಯಂಟಿ-ಆಕ್ಸಿಡೆಂಟ್‌ಗಳನ್ನು ಪಡೆದುಕೊಳ್ಳಲು ಮತ್ತು ತೂಕವನ್ನು ಇಳಿಸಲು, ಹಣ್ನನ್ನು ತಿನ್ನಿ ಹಾಗೂ ಅದರ ರಸವನ್ನು ಬಿಟ್ಟುಬಿಡಿ.

ಆಲ್ಕೋಹಾಲ್ ಮತ್ತು ಗಾಳಿತುಂಬಿದ ಪಾನೀಯಗಳು:

ಪುಟ್ಟ ಗಾಳಿ ತುಂಬಿರುವ ಕ್ಯಾನ್ ನಿಮ್ಮ ತೂಕ ಇಳಿಸುವ ಪ್ರಯಾಣದಲ್ಲಿ ದೊಡ್ಡ ಅಡಚಣೆಯನ್ನುಂಟು ಮಾಡಬಹುದು. ಪ್ರತಿ ಗ್ರಾಂಗೆ ಏಳು ಕ್ಯಾಲರಿ ಹೊಂದಿರುವ ಆಲ್ಕೋಹಾಲ್, ನೀವು ಸೇವಿಸುವ ಪಾಸ್ತಾ, ಅಕ್ಕಿ ಅಥವಾ ನೂಡಲ್ಸ್‌ಗಿಂತ ಹೆಚ್ಚು ಕೊಬ್ಬನ್ನು ಹೊಂದಿದೆ. ಇದಲ್ಲದೇ, ಕೆಲವು ಅಧ್ಯಯನಗಳು ಆಲ್ಕೊಹಾಲ್ ಸೇವಿಸಿದ ನಂತರ ನಿಮ್ಮ ಹಸಿವು ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ, ಬಹುಶಃ ನಿಮ್ಮ ಮೆದುಳಿನಲ್ಲಿ ತಡೆತದ ಶಕ್ತಿ ಕಡಿಮೆಯಾಗಿರುವ ಕಾರಣಕ್ಕಾಗಿ ಹೀಗಾಗುವುದು. ಕೆಲವು ಪ್ರಾಣಿಗಳ ಮೇಲೆ ಆಗಿರುವ ಅಧ್ಯಯನಗಳು, ಆಲ್ಕೋಹಾಲ್ ಮೆದುಳನ್ನು ಹಸಿವಿನ ಮೋಡ್‌ಗೆ ಬದಲಾಯಿಸುತ್ತದೆ ಎಂದು ತೋರಿಸಿದೆ, ಹಾಗಾಗಿಯೇ ಕುಡಿದ ಮೇಲೆ ಅನಾರೋಗ್ಯಕರ ಆಹಾರಗಳನ್ನು ಮಿತಿ ಇಲ್ಲದೆ ಸೇವಿಸುವಂತಾಗುವುದು. ಆಲ್ಕೊಹಾಲ್ ಅಂಶ ಕಡಿಮೆ ಇರುವ ಬಿಯರ್ ಕೂಡ ಪ್ರಮಾಣಿತ ಪಾನೀಯಗಳಿಗಿಂತ ಹೆಚ್ಚಿನ ಕ್ಯಾಲರಿಗಳನ್ನು ಹೊಂದಿರುತ್ತದೆ.

ಮತ್ತೊಂದೆಡೆ, 100 ಮಿಲಿ ಗಾಳಿತುಂಬಿದ ಪಾನೀಯಗಳಲ್ಲಿ, ಉದಾಹರಣೆಗೆ ಸಿಹಿ ಸೋಡಾ, ಇದರಲ್ಲಿ ಸುಮಾರು 10 ರಿಂದ 12 ಗ್ರಾಂ ಸಕ್ಕರೆ ಇರುತ್ತದೆ. ಒಂದೇ ಸಮಯದಲ್ಲಿ ಹೆಚ್ಚು ಸಕ್ಕರೆಯನ್ನು ಸೇವಿಸುವುದು ತೂಕ ಹೆಚ್ಚಳಕ್ಕೆ ಕರೆಯೋಲೆ ಕೊಟ್ಟಹಾಗೆ.

ಹಾಗಾಗಿ, ಈ ಕ್ಯಾಲರಿಗಳಿಂದ ಕೂಡಿದ ಆಹಾರ ಪದಾರ್ಥಗಳಿಂದ ದೂರವಿರಲು ಪ್ರಯತ್ನಿಸಿ, ಆಗ ನೀವು ಈ ತೂಕ ಇಳಿಸುವ ಪ್ರಯಾಣದಲ್ಲಿ ಸರಾಗವಾಗಿ ಸಾಗಬಹುದು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.