weight loss reading nutrition lables
Reading Time: 4 minutes

ಹಸಿವಿನ ಬಳಲಿಕೆ ಮತ್ತು ಬಾಯಿ ಚಪ್ಪರಿಸುವಂತಹ ಆಹಾರದ ಪರಿಮಳವು ನಿಮ್ಮನ್ನು ಎಲ್ಲಿದ್ದರೂ ಸೆಳೆದುಬಿಡುವುದು. ಸಮಯದ ಕೊರತೆ ಮತ್ತು ಬಿಡುವಿಲ್ಲದ ಕೆಲಸದಿಂದಾಗಿ ಪ್ಯಾಕೇಜ್ ಮಾಡಿದ ಆಹಾರದಲ್ಲಿ ಏನೇನಿರುತ್ತದೆ ಎಂಬುದನ್ನೂ ತಿಳಿದುಕೊಳ್ಳದೆ ಅದನ್ನು ತಿನ್ನಲು ನೀವು ಸಿದ್ಧರಾಗಿರುತ್ತೀರಿ.

ನಿರ್ಲ್ಯಕ್ಷಿಸುವುದರಿಂದ ಆನಂದ ಸಿಗಬಹುದು ಎಂದು ನಿಮಗೆ ಅನಿಸಬಹುದು. ಆದರೆ ಇಂತಹ ನಿರ್ಲ್ಯಕ್ಷಗಳು ಬೊಜ್ಜಿನಂತಹ ಅನೇಕ ರೋಗಗಳಿಗೆ ಕಾರಣವಾಗಬಹುದು.  

ಬೊಜ್ಜು ಹಲವಾರು ಕಾಯಿಲೆಗಳ ಮೂಲವಾಗಿದೆ, ಅವುಗಳೆಂದರೆ ಅಧಿಕ ರಕ್ತದೊತ್ತಡ, ಅಥೆರೊಸ್‌ಕ್ಲೆರೊಸಿಸ್, ಡಯಾಬಿಟಿಸ್, ಅಧಿಕ ರಕ್ತದ ಕೊಲೆಸ್ಟರಾಲ್‌, ನಿದ್ರೆಯ ತೊಂದರೆಗಳು ಮತ್ತು ಕ್ಯಾನ್ಸರ್(1) ಇಂದಿನ ದಿನಗಳಲ್ಲಿ ಬೊಜ್ಜು ಮತ್ತು ಹೆಚ್ಚಿನ ತೂಕವು ಪ್ರಮುಖವಾದ ಸಾರ್ವಜನಿಕ ಆರೋಗ್ಯದ ಸಮಸ್ಯೆಗಳಾಗಿವೆ. ಭಾರತದಲ್ಲಿ 135 ದಶಲಕ್ಷಕ್ಕೂ ಹೆಚ್ಚು ಜನ ಬೊಜ್ಜಿನ ವಿರುದ್ಧ ಹೋರಾಡುತ್ತಿದ್ದಾರೆ(2) ಬೊಜ್ಜಿನ ತೊಂದರೆ ವಯಸ್ಕರರಲ್ಲಿ ಮಾತ್ರವಲ್ಲ, ಬೆಳೆಯುತ್ತಿರುವ ಮಕ್ಕಳಲ್ಲಿಯೂ ಬೊಜ್ಜು ಬಂದು, ಮುಗ್ಧವಾದ ಚಿಕ್ಕ ಮಕ್ಕಳಿಗೂ ಕೂಡ ಇದು ಅಪಾಯಕಾರಿಯಾಗಿದೆ. ಆದ್ದರಿಂದ ಸರಳವಾದ ಮತ್ತು ಪ್ರಾಯೋಗಿಕ ಪರಿಹಾರಗಳ ಮೂಲಕ ಬೊಜ್ಜನ್ನು ನಿರ್ವಹಿಸುವುದು ಅತಿ ಅವಶ್ಯಕವಾಗಿವೆ.(3)                                                   

ಓದುವುದೇ ಈ ಸಮಸ್ಯೆಗೆ ಇರುವ ಒಂದು ಪರಿಹಾರ.

ಈ ಕೆಟ್ಟ ಸ್ಥಿತಿಯನ್ನು ನಿಯಂತ್ರಿಸಲು, ತಡೆಯಲು ಮತ್ತು ನಿರ್ವಹಿಸಲು ಓದುವುದು ಹೇಗೆ ನೆರವಾಗುತ್ತದೆ ಎಂದು ನೀವು ಆಶ್ಚರ್ಯಪಡುತ್ತಿದ್ದೀರಾ? ಹಾಗಾದರೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ.

ಒಂದು ಸರಳ ಉಪಾಯವನ್ನು ಅನುಸರಿಸಿ: ಓದಿ 

ಸಮತೋಲನ! ಸಮತೋಲನ! ಮತ್ತು ಸಮತೋಲನ! ಬೊಜ್ಜನ್ನು ಕರಗಿಸಲು ಬೇಕಿರುವ ಎಲ್ಲಾ ಚಿಕಿತ್ಸೆಗಳು ಇದೊಂದೇ ಪದದಲ್ಲಿ ಅಡಕವಾಗಿವೆ. ದೇಹವು ಎಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೋ ಅಷ್ಟು ಶಕ್ತಿಯನ್ನು ಬಳಸಿಕೊಂಡಾಗ ಮಾತ್ರ ದೇಹದ ತೂಕವನ್ನು ಕಾಯ್ದುಕೊಳ್ಳಲು ಸಾಧ್ಯ – ಅದೇ ಶಕ್ತಿಯ ಸಮತೋಲನ. ಒಂದು ವೇಳೆ ನೀವು ಬಳಸಿಕೊಳ್ಳುವ ಇಲ್ಲವೇ ಕರಗಿಸುವ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ಒದಗಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ತೂಕ ಕಡಿಮೆ ಆಗಬೇಕೆಂದರೆ ನೀವು ತೆಗೆದುಕೊಳ್ಳುವ ಶಕ್ತಿಗಿಂತ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ದೇಹವು ಬಳಸಬೇಕಾಗುವುದು. ಸಮತೋಲನವನ್ನು(4) ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಆಹಾರ ಸೇವನೆಯನ್ನು ಸೀಮಿತಗೊಳಿಸುವಂತಹ ಪರಿಹಾರಗಳನ್ನು ಸೂಚಿಸಲಾಗಿದೆ.

ಸುಲಭವಾದ ಸೂತ್ರಗಳನ್ನು ಅಳವಡಿಸಿಕೊಂಡು ಓದುವುದರಿಂದ ಸಮತೋಲನವನ್ನು  ಕಾಪಾಡಿಕೊಳ್ಳಬಹುದು. ಆದರೆ ಏನನ್ನು ಓದಬೇಕು? ಪ್ಯಾಕೇಜ್ ಮಾಡಿದ ಪ್ರತಿಯೊಂದು ಆಹಾರದ ಮೇಲಿನ ಲೇಬಲ್‌ಗಳನ್ನು ಪೌಷ್ಟಿಕಾಂಶದ ಲೇಬಲ್ ಎಂದು ಹೇಳಲಾಗುತ್ತದೆ. ಈ ಲೇಬಲ್‌ನಲ್ಲಿ ಮ್ಯಾಕ್ರೋ ನ್ಯೂಟ್ರಿಯೆಂಟ್ಸ್ ಮತ್ತು ಆ ಪದಾರ್ಥದಲ್ಲಿರುವ ಶಕ್ತಿಯ ಬಗ್ಗೆ ಎಲ್ಲಾ ವಿವರಗಳಿರುತ್ತವೆ. ನೀವು ಯಾವುದೇ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ತಿನ್ನುವ ಅಥವಾ ಕುಡಿಯುವ ಮೊದಲು ಪೌಷ್ಟಿಕಾಂಶದ ಲೇಬಲನ್ನು ನೋಡುವ ಅಭ್ಯಾಸ ಮಾಡಿಕೊಳ್ಳಿ. ಆಹಾರದ ಪ್ಯಾಕೇಜಿನಲ್ಲಿ ಪೌಷ್ಟಿಕಾಂಶದ ಸಂಗತಿಗಳನ್ನು ತಿಳಿಸುವ ಲೇಬಲ್‌ಗಳ ಉದ್ದೇಶವೇನೆಂದರೆ, ನೀವು ತಿನ್ನುವ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವುದು ಮತ್ತು ಬೊಜ್ಜಿನಂತಹ(5) ರೋಗಗಳನ್ನು ತಡೆಗಟ್ಟುವುದು. 

ದಿ ಎಫೆಕ್ಟ್‌ ಆಫ್ ನ್ಯೂಟ್ರೀಷನ್ ಲೇಬಲ್ ಆನ್ ಒಬೆಸಿಟಿ” (ಬೊಜ್ಜಿನ ಮೇಲೆ ಪೋಷಕಾಂಶಗಳ ಲೇಬಲ್‌ನ ಪರಿಣಾಮ) ಎಂಬ ಅಧ್ಯಯನದ ಪ್ರಕಾರ, ಲೇಬಲ್‌ ಓದದೇ ಇರುವ ಗಂಡಸರಿಗಿಂತ ಲೇಬಲ್‌ ಓದುವ ಗಂಡಸರ ಸರಾಸರಿ ಬಿಎಮ್‌ಐ 0.12 ಪಾಯಿಂಟ್‌ಗಳಷ್ಟು ಕಡಿಮೆ ಇರುತ್ತದೆ. ಅದೇ ಹೆಂಗಸರಲ್ಲಿ ಈ ಬಿಎಮ್‌ಐನ ವ್ಯತ್ಯಾಸ ಇನ್ನೂ ಹೆಚ್ಚಾಗಿದೆ. ಅಂದರೆ ಲೇಬಲ್‌ ಓದದೇ ಇರುವ ಹೆಂಗಸರಿಗಿಂತ ಲೇಬಲ್‌ ಓದುವ ಹೆಂಗಸರ ಸರಾರಸರಿ ಬಿಎಮ್‌ಐ 1.49 ಪಾಯಿಂಟ್‌ಗಳಷ್ಟು ಕಡಿಮೆಯಿರುತ್ತದೆ. ಬೊಜ್ಜನ್ನು(6) ನಿರ್ವಹಿಸಲು ಮತ್ತು ತಡೆಯಲು ಇಂತಹ ಓದುವ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಅಗತ್ಯತೆ ಮತ್ತು ಆಹಾರ ಲೇಬಲ್‌ಗಳನ್ನು ಓದುವುದರ ಮಹತ್ವವನ್ನು ಇದು ಸೂಚಿಸುತ್ತದೆ. 

2018 ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು 16,911 ಗಂಡಸರು ಮತ್ತು ಹೆಂಗಸರನ್ನು ಒಳಗೊಂಡಿತ್ತು. ಈ ಅಧ್ಯಯನವು, ಲೇಬಲ್‌ಗಳನ್ನು ಓದಬೇಕೆಂಬ ತಿಳುವಳಿಕೆ, ಆಹಾರದ ಪ್ಯಾಕೇಜ್‌ಗಳ ಮೇಲಿರುವ ಪೋಷಕಾಂಶಗಳ ಲೇಬಲ್‌ನ ಬಳಕೆ ಹಾಗೂ ಬೊಜ್ಜು, ಇವೆಲ್ಲವೂ ಒಂದಕ್ಕೊಂದು ನಂಟನ್ನು ಹೊಂದಿವೆ ಎಂಬುದನ್ನು ತೀರ್ಮಾನಿಸಿತು. ಬಳಕೆದಾರರು ತಮ್ಮ ಬೊಜ್ಜನ್ನು(7) ನಿರ್ವಹಿಸಲು ಮತ್ತು ನಿಯಂತ್ರಿಸಲು, ಆಹಾರದ ಮೇಲಿರುವ ಲೇಬಲ್‌ಗಳನ್ನು ಹೇಗೆ ಓದಬೇಕು ಎಂದು ಕಲಿತುಕೊಳ್ಳುವುದು ಒಂದು ಆಯ್ಕೆಯಾಗಿ ಉಳಿದಿಲ್ಲ, ಬದಲಾಗಿ ಅದು ಕಡ್ಡಾಯವಾಗಿ ಕಲಿತುಕೊಳ್ಳಬೇಕಾದ ವಿಷಯವಾಗಿದೆ ಎಂದು ಈ ಅಧ್ಯಯನ ತಿಳಿಸಿಕೊಟ್ಟಿದೆ.  

ನಿಮ್ಮ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಮತ್ತು ನೀವು ಸೇವಿಸುವ ಆಹಾರದ ಗುಣಮಟ್ಟ ಮತ್ತು ಪ್ರಮಾಣವನ್ನು(8) ಸುಧಾರಿಸಲು ಲೇಬಲ್‌ಗಳನ್ನು ಓದುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಪೌಷ್ಟಿಕಾಂಶದ ಲೇಬಲ್ ಯಾವ ಮಾಹಿತಿಯನ್ನು ಒಳಗೊಂಡಿರುತ್ತದೆ ಮತ್ತು ಅದನ್ನು ಹೇಗೆ ಆ ಪದಾರ್ಥವನ್ನು ಹೆಚ್ಚು ಜಾಣತನದಿಂದ ತಿನ್ನಲು ಬಳಸಬಹುದು ಎಂಬ ವಿವರ ಇಲ್ಲಿದೆ. 

 1. ತಿನ್ನುವ ಅಳತೆ : ಪೌಷ್ಟಿಕಾಂಶದ ಲೇಬೆಲ್ ಮೇಲೆ ಒಂದು ಬಾರಿ ತಿನ್ನುವ ಅಳತೆಯ ವಿವರಗಳನ್ನು ಮಾತ್ರ ನೀಡಲಾಗಿರುತ್ತದೆ, ಅದರಲ್ಲಿ ಪೂರ್ತಿ ಪ್ಯಾಕಿನಲ್ಲಿರುವ ಪೌಷ್ಟಿಕಾಂಶಗಳ ವಿವರಣೆ ಇರುವುದಿಲ್ಲ. ಆದ್ದರಿಂದ, ಒಂದು ಪ್ಯಾಕಿನ ಒಳಗೆ ಒಂದಕ್ಕಿಂತ ಹೆಚ್ಚು ಬಾರಿ ತಿನ್ನುವಷ್ಟು ಪದಾರ್ಥಗಳಿದ್ದರೆ, ಅದನ್ನು ಓದುವವರು, ಲೇಬಲಿನಲ್ಲಿರುವ ಪೋಷಕಾಂಶಗಳ ವಿವರವನ್ನು, ಪ್ಯಾಕೆಟ್‌ ಒಳಗೆ ಎಷ್ಟು ಬಾರಿಗೆ ತಿನ್ನಲು ನೀಡಿದ್ದಾರೋ ಅಷ್ಟಕ್ಕೆ ಗುಣಿಸಿಕೊಳ್ಳಬೇಕು.(8) ಉದಾಹರಣೆಗೆ, ಒಂದು ಬಾರಿ ತಿನ್ನಲು 7 ಚಿಪ್ಸ್‌ಗಳ ಅಳತೆಯನ್ನು ಬಳಸುವುದಾದರೆ ಪ್ಯಾಕಿನ ಮೇಲಿರುವ ಲೇಬಲ್‌, 7 ಚಿಪ್ಸ್‌ಗಳ ಕ್ಯಾಲರಿ ಮತ್ತು ಪೌಷ್ಟಿಕಾಂಶದ ವಿಷಯಗಳನ್ನು ಮಾತ್ರ ಸೂಚಿಸುತ್ತದೆ. ಆದರೆ ಚಿಪ್ಸ್ ಪ್ಯಾಕ್ ಒಳಗೆ 14 ಚಿಪ್ಸ್‌ಗಳಿರಬಹುದು. ಒಂದು ವೇಳೆ ನೀವು ಎಲ್ಲಾ 14 ಚಿಪ್ಸ್‌ಗಳನ್ನು ಸೇವಿಸಿದರೆ, ಲೇಬಲ್‌ನಲ್ಲಿ ನೀಡಲಾದ ಕ್ಯಾಲರಿಗಿಂತ ಎರಡು ಪಟ್ಟು ಕ್ಯಾಲರಿಯನ್ನು ನೀವು ತಿಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.(9)
 2. ಕೊಬ್ಬಿನಂಶ: ಕೊಬ್ಬಿನಂಶಕ್ಕಾಗಿ, ಲೇಬಲ್‌ ಮೇಲೆ ನೀಡಲಾದ ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳ ಮೇಲೆ ಗಮನವಿಡಿ. ಸಾಮಾನ್ಯವಾಗಿ, ನಿಮ್ಮ ಆಹಾರದಲ್ಲಿನ ಟ್ರಾನ್ಸ್ ಕೊಬ್ಬುಗಳು ಸೊನ್ನೆಯಾಗಿರಬೇಕು. ನಿಮ್ಮ ದಿನದ ಕ್ಯಾಲರಿ ಸೇವನೆಯ ಸುಮಾರು 5% ರಿಂದ 6% ರಷ್ಟು ಸ್ಯಾಚುರೇಟೆಡ್‌ ಕೊಬ್ಬುಗಳಿಂದ ಬರಬೇಕು. ಕೊಬ್ಬಿನಲ್ಲಿರುವ ಕ್ಯಾಲರಿಗಳ ಸಂಖ್ಯೆಯನ್ನು ಲೆಕ್ಕ ಹಾಕಲು, ಎಷ್ಟು ಗ್ರಾಂ ಕೊಬ್ಬಿದೆಯೋ ಅಷ್ಟನ್ನು 9 ರಿಂದ ಗುಣಿಸಬಹುದು, ಏಕೆಂದರೆ ಒಂದು ಗ್ರಾಂ ಕೊಬ್ಬು 9 ಕ್ಯಾಲರಿಗಳಿಗೆ(8,10) ಸಮಾನವಾಗಿರುತ್ತದೆ.
 3. ಕೊಲೆಸ್ಟರಾಲ್‌: ಹೆಚ್ಚಿನ ಕೊಲೆಸ್ಟರಾಲ್‌ ಹೊಂದಿರುವ ಹಲವು ಆಹಾರಗಳು ಅವುಗಳ ಮೇಲೆ ಪೌಷ್ಟಿಕಾಂಶದ ಲೇಬೆಲನ್ನು ಹೊಂದಿರುವುದಿಲ್ಲ. ಆದಾಗ್ಯೂ, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳು, ಡಯೆಟರಿ ಕೊಲೆಸ್ಟರಾಲ್‌ಗಿಂತ ಹೆಚ್ಚಾಗಿ ದೇಹದ ಕೊಲೆಸ್ಟರಾಲ್‌(8) ಮಟ್ಟದ ಮೇಲೆ ಪರಿಣಾಮ ಬೀರುತ್ತವೆ.
 4. ಕಾರ್ಬೋಹೈಡ್ರೇಟ್ಸ್  ಮತ್ತು ಫೈಬರ್: ಕಾರ್ಬೋಹೈಡ್ರೇಟ್‌ ತುಂಬಿರುವ ಪದಾರ್ಥಗಳಿಗಿಂತ ನಾರು ಇರುವ ಪದಾರ್ಥಗಳ ಕಡೆ ಗಮನಹರಿಸಿ. ಹೆಚ್ಚು ನಾರಿನಂಶ(8) ಹೊಂದಿರುವಂತಹ ಆಹಾರಗಳನ್ನು ಆಯ್ಕೆ ಮಾಡಿ.
 5. ಸಕ್ಕರೆ : ಬೆಳಗಿನ ತಿಂಡಿಗಳಾದ ಸೀರಿಯಲ್ಸ್‌, ಬ್ರೆಡ್, ಯೋಗರ್ಟ್‌, ಕೇಕ್, ಸೋಡಾ ಮತ್ತು ಸಲಾಡ್ ಡ್ರೆಸ್ಸಿಂಗ್‌ನಂತಹ ತಿನಿಸುಗಳಲ್ಲಿ ಕಂಡುಬರುವ ಸಾಮಾನ್ಯ ಅಂಶ ಎಂದರೆ ಸಕ್ಕರೆ. ಸಕ್ಕರೆಯನ್ನು ಯಾವುದೇ ರೂಪದಲ್ಲಿ ಹೊಂದಿರುವ ಪದಾರ್ಥಗಳಿಂದ ದೂರವಿರಿ. ಉದಾಹರಣೆಗೆ ಬ್ರೌನ್‌ ಶುಗರ್‌, ಜೇನುತುಪ್ಪ, ಸುಕ್ರೋಸ್ ಅಥವಾ ಫ್ರಕ್ಟೋಸ್. ಫ್ರಕ್ಟೋಸ್, ಡೆಕ್ಸ್‌ಟ್ರೋಸ್‌ ಮತ್ತು ಮೆಲ್ಟೋಸ್ ನಂತಹ ‘ಓಸ್’ ನೊಂದಿಗೆ ಕೊನೆಗೊಳ್ಳುವ ಹೆಸರುಗಳ ಮೂಲಕ ನೀವು ಸಕ್ಕರೆ ಹೆಸರನ್ನು ಲೇಬಲ್‌ನಲ್ಲಿ ಗುರುತಿಸಬಹುದು.
 6. ವಿಟಮಿನ್ಸ್, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಕಬ್ಬಿಣಾಂಶ: ಆಹಾರದ ಪ್ಯಾಕೇಜುಗಳ ಮೇಲಿನ ಲೇಬಲ್‌ಗಳನ್ನು ಓದಿ ಮತ್ತು ನಿಮ್ಮ ದೈನಂದಿನ ಆಹಾರ ಸೇವೆನೆಯಲ್ಲಿ ಈ ಪದಾರ್ಥಗಳು ನಿರ್ದಿಷ್ಟ ಪ್ರಮಾಣದಲ್ಲಿ ಇವೆಯೇ ಎಂದು ಖಚಿತಪಡಿಸಿಕೊಳ್ಳಿ. ಕೆಲವು ಪೋಷಕಾಂಶಗಳನ್ನು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ವಿವರವನ್ನು ಟೇಬಲ್ 1 ರಲ್ಲಿ ಸೂಚಿಸಲಾಗಿದೆ.(8)

ಟೇಬಲ್ 1 . ಗಂಡಸರು ಮತ್ತು ಹೆಂಗಸರು ಪ್ರತಿದಿನ ಸೇವಿಸಬಹುದಾದ ಪೋಷಕಾಂಶಗಳ ವಿವರ.(8)

      ಆಹಾರ          ಹೆಂಗಸು            ಗಂಡಸು
    ವಿಟಮಿನ್ ಎ      700 ಎಂಸಿಜಿ       900 ಎಂಸಿಜಿ 
   ವಿಟಮಿನ್ ಸಿ      75 ಎಂಜಿ        90 ಎಂಜಿ 
   ಕ್ಯಾಲ್ಸಿಯಂ     ಕನಿಷ್ಠ 1,200 ಎಂಜಿ       ಕನಿಷ್ಠ 1,200 ಎಂಜಿ 
   ಪೊಟ್ಯಾಸಿಯಂ     ಕನಿಷ್ಠ 4.7 ಜಿ       ಕನಿಷ್ಠ 4.7 ಜಿ 
    ಕಬ್ಬಿಣಾಂಶ     ಕನಿಷ್ಠ 8 ಎಂಜಿ       ಕನಿಷ್ಠ 8 ಎಂಜಿ


ನೀವು ನಿಯಮಿತವಾಗಿ ಲೇಬಲ್‌ಗಳನ್ನು ಓದಲು ಪ್ರಾರಂಭಿಸಿದಾಗ ಸಕ್ಕರೆ, ಉಪ್ಪು, ಮತ್ತು ಕೊಬ್ಬು ಕಡಿಮೆಯಿರುವ ಮತ್ತು ಹೆಚ್ಚಿನ ನಾರಿನಂಶ ಹೊಂದಿರುವ, ವಿಟಮಿನ್‌ಗಳ ಬಲವನ್ನು ನೀಡುವ ಆಹಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎಂದು ನಿಮಗೆ ತಿಳಿಯುವುದು. ಪೌಷ್ಟಿಕಾಂಶದ ಲೇಬಲ್‌ಗಳಲ್ಲಿ ಒದಗಿಸಲಾದ ಮಾಹಿತಿಯು, ನಿಮ್ಮ ಆಹಾರ ಎಷ್ಟು ಆರೋಗ್ಯಕರವಾಗಿದೆ ಎಂದು ಪರಿಶೀಲಿಸಲು ನೆರವಾಗುವುದು. ಅಲ್ಲದೇ, ನಿಮ್ಮ ಆರೋಗ್ಯದ ಮೇಲೆ ಈ ಆಹಾರದ ಪರಿಣಾಮವನ್ನು ತಿಳಿಯಲೂ ಸಹಾಯ ಆಗುವುದು. ಈಗ ಲೇಬಲ್ಲಿನ ಮೇಲೆ ಕಣ್ಣಾಡಿಸಲು ಎರಡು ನಿಮಿಷ ತೆಗೆದುಕೊಂಡರೆ, ಮುಂದೆ ಡಾಕ್ಟರ್‌ ಕ್ಲಿನಿಕ್‌ನಲ್ಲಿ ಹಲವು ಗಂಟೆಗಳ ಕಾಲಕಳೆಯುವುದು ಉಳಿಯುತ್ತದೆ. ಆದ್ದರಿಂದ, ಲೇಬಲ್‌ ಓದುವುದನ್ನು ಆರೋಗ್ಯದ ಹೊಸ ಗೀಳನ್ನಾಗಿಸಿ, ಆ ಮೂಲಕ ಬೊಜ್ಜನ್ನು ತೊಲಗಿಸಿ!


ಆಕರಗಳು:

 • National Heart, Lung, and Blood Institute. Overweight and obesity [Internet]. [cited 2019 Jun 12]. Available from: https://www.nhlbi.nih.gov/health-topics/overweight-and-obesity.
 • Ahirwar R, Mondal PR. Prevalence of obesity in India: a systematic review. Diabetes Metab Syndr. 2019;1(13):318-321. Available from: https://doi.org/10.1016/j.dsx.2018.08.032
 • Centers for Disease Control and Prevention. Tips for parents – ideas to help children maintain a healthy weight [Internet]. [updated 2018 May 23; cited 2019 June 12]. Available from: https://www.cdc.gov/healthyweight/children/index.html.
 • National Heart, Lung, and Blood Institute. Why is a healthy weight important? [Internet]. [cited 2019 Jun 12]. Available from: https://www.nhlbi.nih.gov/health/educational/lose_wt/index.htm.
 • Rimpeekool W, Yiengprugsawan V, Kirk M, Banwell C, Seubsman SA, Sleigh A. Nutrition label experience, obesity, high blood pressure, and high blood lipids in a cohort of 42,750 Thai adults. PLoS One. 2017 Dec 13;12(12):e0189574. doi: 10.1371/journal.pone.0189574. eCollection 2017.
 • Loureiro ML, Yen ST, Nayga R. The effects of nutritional labels on obesity. Agricultural Economics. May 2012;43(3):333-342. Available from: http://dx.doi.org/10.1111/j.1574-0862.2012.00586.x.
 • Kim SD. Relationship between awareness and use of nutrition labels and obesity. Biomedical Research. 2018;29(11):2238-2242.
 • Harvard Health Publishing. Get to know your food labels [Internet]. [cited 2019 Jun 12]. Available from: https://www.health.harvard.edu/staying-healthy/get-to-know-your-food-labels.
 • American Academy of Family Physicians. Nutrition: how to read a nutrition facts label [Internet]. [cited 2019 Jun 12]. Available from: https://familydoctor.org/nutrition-how-to-read-a-nutrition-facts-label/.
 • American Heart Association. Saturated fat [Internet]. [cited 2019 Jun 24]. Available from: https://www.heart.org/en/healthy-living/healthy-eating/eat-smart/fats/saturated-fats.
 • Harvard Health Publishing. How to spot — and avoid — added sugar [Internet]. [cited 2019 Jun 12]. Available from: https://www.health.harvard.edu/staying-healthy/how-to-spot-and-avoid-added-sugar.

 

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.