weight-loss-tips
Reading Time: 3 minutes

ತೂಕ ಇಳಿಸುವ ಕೆಲಸವೊಂದು ರೋಲರ್ ಕೋಸ್ಟರ್ನಲ್ಲಿ ಸವಾರಿ ಮಾಡಿದ ಹಾಗೆ. ಇವೆಲ್ಲದರ ನಡುವೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಸುಲಭದ ಮಾತಲ್ಲ. ಆಹಾರ ಕ್ರಮದ ಕುರಿತು ಇತರರಿಂದ ಅತಿಯಾಗಿ ಸಿಗುವ ಸಲಹೆಗಳು ಹಾಗೂ ಹಲವಾರು ನ್ಯೂಟ್ರಿಶನ್ ವೆಬ್‌ಸೈಟ್‌ಗಳಿಂದ ಸಿಗುವ ಮಾಹಿತಿ, ಇವೆರಡೂ ಸೇರಿ, ಯಾವ ತರಹದ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕೆಂದು ದೊಡ್ಡ ಗೊಂದಲವನ್ನು ಉಂಟುಮಾಡುತ್ತವೆ. 

ಹಾಗಾಗಿ, ನಾವೀಗ ತೂಕ ಇಳಿಸಲು ಇರುವಂತಹ ಸುಲಭವಾದ 17 ತಂತ್ರಗಳನ್ನು ತಿಳಿಯೋಣ. ಈ ತಂತ್ರಗಳನ್ನು ಪಾಲಿಸುವುದರಿಂದ ನಿಮ್ಮ ಬೊಜ್ಜು ಕರಗುವುದರ ಜೊತೆಗೆ, ಆಹಾರದ ಮೇಲೆ ನಿಮ್ಮ ಪ್ರೀತಿಯು ಹೆಚ್ಚಾಗುತ್ತದೆ. ನಿಮಗೆ ಸರಿಹೊಂದುವ ತಂತ್ರವನ್ನು ಕಂಡುಕೊಳ್ಳಲು, ಇವನ್ನು ಒಂದೊಂದಾಗಿಯೇ ಪಾಲಿಸಿ.

ಮೊದಲು, ತೂಕ ಇಳಿಸಲು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲವು ಅಭ್ಯಾಸಗಳನ್ನು ನಾವು ಪಟ್ಟಿಮಾಡಿದ್ದೇವೆ:

 • ಪ್ರತಿದಿನ ಟೀ ಅಥವಾ ಕಾಫೀ ಕುಡಿಯುವ ಮೊದಲು ಹಣ್ಣುಗಳನ್ನು ತಿನ್ನಿ ಇಲ್ಲವೇ ಎರಡು ಮೂರು ಒಣಗಿರೊ ಖರ್ಜೂರ/ಅಂಜೂರದ ಜೊತೆಗೆ ಬಾದಾಮಿ/ವಾಲ್‌ನಟ್ಸ್‌ಗಳನ್ನು ತಿನ್ನಿ. ಇದಾದ ಇಪ್ಪತ್ತು ನಿಮಿಷಗಳ ನಂತರ ಟೀ/ಕಾಫೀ ಕುಡಿಯಿರಿ. ಕೆಫಿನ್ ಇರುವ ಪಾನಿಯಗಳನ್ನು ಬೆಳಿಗ್ಗೆ ಎಲ್ಲದಕ್ಕಿಂತ ಮುಂಚೆ ತೆಗೆದುಕೊಂಡಾಗ ನಿಮ್ಮ ಹಸಿವು ಕಡಿಮೆಮಾಡುತ್ತದೆ. ಇದರಿಂದಾಗಿ, ನೀವು ಬೆಳಗಿನ ತಿಂಡಿಯನ್ನು ಸೇವಿಸದೇ ಹೋಗಬಹುದು. ಬೆಳಗಿನ ತಿಂಡಿಯನ್ನು ಬಿಡುವುದರಿಂದ ಜಂಕ್ ಫುಡ್‌ ತಿನ್ನಬೇಕೆಂಬ ಹಂಬಲ ಹೆಚ್ಚುವುದು ಹಾಗೂ ಮೆಟಬಾಲಿಸಂ ಸಾಮರ್ಥ್ಯ ಕಡಿಮೆ ಆಗಬಹುದು.
 • ಪ್ರತಿ ಎರಡು ಅಥವಾ ಮೂರು ಗಂಟೆಗೆ ಒಮ್ಮೆ ಆಹಾರ ತೆಗೆದುಕೊಳ್ಳಿ. ನಿಯಮಿತವಾಗಿ ಆಹಾರ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗು ದೇಹದ ಶಕ್ತಿ ಸ್ಥಿರವಾಗಿರುತ್ತವೆ. ಇದರಿಂದಾಗಿ ಸಿಹಿ ತಿನ್ನಬೇಕೆಂಬ ನಿಮ್ಮ ಹಂಬಲ ಕಡಿಮೆಯಾಗುತ್ತದೆ. ಅದೇ, ನೀವು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಆಹಾರ ಸೇವಿಸುವುದರಿಂದ, ಮುಂದಿನ ಊಟವನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ.
 • ಹಣ್ಣಿನ ಜ್ಯೂಸ್ ಕುಡಿಯಬೇಡಿ ಬದಲಾಗಿ ಇಡೀ ಹಣ್ಣನ್ನು ಹಾಗೆಯೇ ತಿನ್ನಿ. ಹಣ್ಣಿನ ಜ್ಯೂಸನ್ನು ಬೇಕಾದರೆ ಮನೆಯಲ್ಲೇ ಮಾಡಿರಲಿ, ಅದು ಸಕ್ಕರೆ ಸೇರಿಸದ ಜ್ಯೂಸ್‌ ಆಗಿರಲಿ ಇಲ್ಲವೇ ಹಣ್ಣಿನ ಸತ್ವ ಕಳೆದುಹೋಗಬಾರದೆಂದು ಸೋಸದೆ ಇರುವ ಜ್ಯೂಸ್‌ ಆದರೂ ಸರಿಯೇ, ಅದನ್ನು ಕುಡಿಯದಿರುವುದೇ ಒಳಿತು. ಹಣ್ಣಿನ ಜ್ಯೂಸ್ ಎಂಬುದು, ಇಡೀ ಹಣ್ಣನ್ನು ಸಂಸ್ಕರಿಸಿ/ಕತ್ತರಿಸಿ-ಹಿಂಡಿದ ಮೇಲೆ ಸಿಗುವ ಪದಾರ್ಥ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು, ಜೊತೆಗೆ ನಿಮ್ಮ ದೇಹದ ಒಳಗೆ ಕೊಬ್ಬಿನ ರೂಪದಲ್ಲಿ ಶೇಖರಣೆ ಆಗಬಹುದು.
 • ನೀವು ಸಂಜೆಯ ವೇಳೆ ಸ್ವಲ್ಪ ತಿಂಡಿ ತಿನ್ನುವ ರೂಢಿಮಾಡಿಕೊಳ್ಳಿ. ಇದರಿಂದ ರಾತ್ರಿಯ ಹೊತ್ತು ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಿನ್ನುವುದಿಲ್ಲ. ಸ್ಯಾಂಡ್‌ವಿಚ್, ತಾಜಾ ಹಣ್ಣುಗಳು, ಹುರಿದ ಕಾಕ್ರಾ, ಬೇಯಿಸಿದ ಚನ್ನಾ ಚಾಟ್ ಮತ್ತು ಬೇಯಿಸಿದ ಜೋಳ ಇವು ಕೆಲವು ಆರೋಗ್ಯಕರ ತಿಂಡಿಗಳಾಗಿವೆ. ಇಂತವುಗಳಲ್ಲಿಯೇ, ಕಡಿಮೆ ಸೋಡಿಯಂ ಹಾಗೂ ಎಣ್ಣೆ ಇಲ್ಲದ ತಿನಿಸುಗಳನ್ನು ತಿನ್ನಲು ಪ್ರಯತ್ನಿಸಿ. ಸರಳವಾಗಿ ಹೇಳುವುದಾದರೆ, ಒಂದು ಕಪ್ ಚಹಾ ಇಲ್ಲವೇ ಕಾಫಿಯೊಂದಿಗೆ ಬಿಸ್ಕತ್‌ ತಿನ್ನುವುದು ಸಂಜೆಯ ತಿಂಡಿಗೆ ಒಳ್ಳೆಯ ಆಯ್ಕೆ ಅಲ್ಲ.
 • ಪ್ರತಿ ದಿನ 12-15 ಗ್ಲಾಸ್ ನೀರನ್ನು ಕುಡಿಯಿರಿ. ನಿಮ್ಮ ಮೆಟಬಾಲಿಸಮ್ ಹೆಚ್ಚಿಸಲು ನೀರು ನೆರವಾಗುತ್ತದೆ. ಕಾಫಿ, ಚಹಾ ಮತ್ತು ಸೋಡಾ ಇವೆಲ್ಲ ನೀವು ತೆಗೆದುಕೊಳ್ಳುವ ನೀರಿನಾಂಶ ಎಂದು ತಿಳಿಯಬೇಡಿ. ಹಲವು ಬಾರಿ, ನೀವು ಬಾಯಾರಿಕೆಯನ್ನು ಹಸಿವು ಅಥವಾ ಹಸಿವನ್ನು ಬಾಯಾರಿಕೆ ಎಂದು ತಪ್ಪಾಗಿ ತಿಳಿದುಕೊಳ್ಳಬಹುದು, ಇದರಿಂದಾಗಿ ಕೆಲವೊಮ್ಮೆ ನೀವು ಬಾಯಾರಿಕೆಯಾದಾಗ ಊಟ ಮಾಡಿಬಿಡಬಹದು.
 • ಸುಕ್ರಲೋಸ್, ಆಸ್ಪರ್ಟೇಮ್ ಅಥವಾ ಅಸೆಸಲ್ಫೇಮ್‌ನಂತಹ ಕೃತಕವಾಗಿ ತಯಾರಿಸಿದ ಸಕ್ಕರೆ ಸೇವಿಸುವುದನ್ನು ನಿಲ್ಲಿಸಿ. ಈ ತಿನಿಸುಗಳಲ್ಲಿರುವ ಕೆಮಿಕಲ್‌ಗಳು ನಿಮಗಿರುವ ಸಕ್ಕರೆಯ ಹಂಬಲವನ್ನು ತಣಿಸುವುದಿಲ್ಲ, ಅವನ್ನು ತಿಂದಮೇಲೂ ಸಿಹಿ ತಿನ್ನುವ ಬಯಕೆ ನಿಮಗೆ ಹಾಗೆಯೇ ಇರುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಸಿಹಿ ಕಡಿಮೆ ಮಾಡುವುದರಿಂದ ದೀರ್ಘಕಾಲದವರೆಗೆ ನಿಮ್ಮ ತೂಕ ಕಡಿಮೆ ಇರಲು ಸಹಕಾರಿಯಾಗುತ್ತದೆ. ಈ ತರಹದ ಕೃತಕ ಸಕ್ಕರೆಯನ್ನು ತಿನ್ನುವ ಬದಲು, ನಿಮ್ಮ ಕಾಫೀ ಅಥವಾ ಟೀಗೆ ಸಾಮಾನ್ಯ ಸಕ್ಕರೆಯನ್ನೇ ಸೇರಿಸಿ ಕುಡಿಯಿರಿ. ಆದರೆ ಅದನ್ನು ದಿನಕ್ಕೆ ಎರಡು ಟೀ ಚಮಚ ಸಕ್ಕರೆಗೆ ಮಿತಿಗೊಳಿಸಿ.
 • ಬೆಣ್ಣೆ, ತುಪ್ಪ ಮತ್ತು ಎಣ್ಣೆ ಎಲ್ಲವನ್ನು ಸೇರಿಸಿ ದಿನಕ್ಕೆ ಮೂರರಿಂದ ನಾಲ್ಕು ಚಮಚದಷ್ಟು ಮಾತ್ರ ತೆಗೆದುಕೊಳ್ಳಬೇಕು. ಒಂದು ದಿನದಲ್ಲಿ ಸೇವಿಸಬೇಕಾದ ಕೊಬ್ಬಿನ ಪ್ರಮಾಣವನ್ನು ನೀವು ಹಲವು ಪಾಲುಗಳಲ್ಲಿ ತೆಗೆದುಕೊಳ್ಳಬಹುದು, ಅಂದರೆ ಬೆಳಗಿನ ತಿಂಡಿಗೆ 1 ಟೀ ಸ್ಪೂನ್‌ನಷ್ಟು, ಮಧ್ಯಾಹ್ನದ ಊಟಕ್ಕೆ 1.5 ಟೀ ಸ್ಪೂನ್‌ನಷ್ಟು ಮತ್ತು ರಾತ್ರಿ ಊಟಕ್ಕೆ 1-1.5 ಟೀ ಸ್ಪೂನ್‌ನಷ್ಟು ತೆಗೆದುಕೊಳ್ಳಬಹುದು.
 • ಯಾವುದೇ ಉತ್ಪನ್ನದ ಲೇಬಲ್‌ನಲ್ಲಿ ಕಡಿಮೆ-ಕೊಬ್ಬಿರುವ, ಬೇಕ್‌ ಮಾಡಿರುವ ಅಥವಾ ಸಕ್ಕರೆ ಇಲ್ಲದ ಪದಾರ್ಥ ಎಂದು ಬರೆದಿರುವುದನ್ನು ನೋಡಿ ಅದನ್ನು ಕೊಂಡುಕೊಳ್ಳಲು ಮನಸ್ಸು ಹಾತೊರೆಯುವುದೇ? ಆದರೆ, ಅದರ ಉತ್ಪಾದಕರು ತಿನಿಸನ್ನು ರುಚಿಯಾಗಿಸಲು ಹೆಚ್ಚುವರಿ ಸಕ್ಕರೆ, ಟ್ರಾನ್ಸ್ ಕೊಬ್ಬು ಮತ್ತು ಸಂರಕ್ಷಕಗಳನ್ನು ಅದಕ್ಕೆ ಸೇರಿಸುತ್ತಾರೆ. ಅದರ ಮೇಲಿನ ಲೇಬಲ್ ನೋಡಿ ಅದು ಆರೋಗ್ಯಕರವಾದ ತಿನಿಸು ಎಂದು ನೀವು ಖರೀದಿಸಿಬಿಡಬಹುದು. ಆದರೆ ಇಂತಹ ಪದಾರ್ಥಗಳಲ್ಲಿ, ಸಾಮಾನ್ಯವಾಗಿ ಸಿಗುವ ಸಿಹಿತಿನಿಸು ಇಲ್ಲವೇ ಕರಿದ ಪದಾರ್ಥಗಳಲ್ಲಿರುವ ಕ್ಯಾಲರಿಗಿಂತ ಹೆಚ್ಚಿನ ಕ್ಯಾಲರಿಗಳು ಇರುತ್ತವೆ. ಪ್ಯಾಕ್ ಮಾಡಿದ ಆಹಾರವನ್ನು ಖರೀದಿಸುವಾಗ ಅದರ ಹಿಂಭಾಗದಲ್ಲಿ ಇರುವ ಲೇಬಲ್ ಓದುವುದನ್ನು ಮರೆಯಬೇಡಿ.
 • ನೀವು ನಡೆದಾಡುವಾಗ ಇಲ್ಲವೇ ಬೇರೆ ಕೆಲಸಮಾಡುವಾಗ ಊಟ ತಿನ್ನುವ ಬದಲು ಕುಳಿತುಕೊಂಡು ಆರಾಮವಾಗಿ ತಿನ್ನಿ. ಹೀಗೆ ಕುಳಿತುಕೊಂಡು ಆಹಾರ ತಿನ್ನುವುದರಿಂದ, ನೀವು ನಿಧಾನವಾಗಿ ತಿನ್ನುವಿರಿ. ಹಾಗಾಗಿ, ನಿಂತುಕೊಳ್ಳುವುದಕ್ಕಿಂತ ಕುಳಿತುಕೊಂಡು ಊಟಮಾಡಿದಾಗ ನೀವು ಕಡಿಮೆ ಕ್ಯಾಲರಿಯನ್ನು ತಿನ್ನುವಿರಿ.
 • ಊಟದ ಬದಲಿಗೆ ಪ್ರೋಟೀನ್ ಬಾರ್‌ ಅಥವಾ ಶೇಕ್ಸ್‌ಗಳನ್ನು ಸೇವಿಸಬೇಡಿ, ಅದರಲ್ಲೂ ರಾತ್ರಿಯ ಊಟಕ್ಕೆ ಇವನ್ನು ತೆಗೆದುಕೊಳ್ಳಲೇಬೇಡಿ. ಇವನ್ನು ಸೇವಿಸುವುದರಿಂದ ಸದ್ಯಕ್ಕೆ ತೂಕ ಕಡಿಮೆ ಆಗಬಹುದು ಆದರೆ ಅದು ಹೆಚ್ಚುಕಾಲ ಹಾಗೆಯೇ ಉಳಿಯುವುದಿಲ್ಲ. ರೋಟಿ, ಅನ್ನ ಮತ್ತು ಬೇಳೆ ಇಂತವನ್ನು ತಿನ್ನಲು ಶುರುಮಾಡಿದಾಗ ಮತ್ತೆ ನಿಮ್ಮ ತೂಕ ಹೆಚ್ಚಾಗುತ್ತದೆ, ಕಳೆದುಕೊಂಡ ತೂಕವೆಲ್ಲ ಹಿಂತಿರುಗಿ ಬರುತ್ತದೆ.
 • ಊಟ ಮುಗಿಸಿದ ತಕ್ಷಣ ನಿಮ್ಮ ಹಲ್ಲನ್ನು ಉಜ್ಜಿ ಸ್ವಚ್ಚಗೊಳಿಸಿ. ಹಲ್ಲನ್ನು ಉಜ್ಜಿದ ಮೇಲೆ, ಟೂತ್‌ಪೇಸ್ಟ್‌ನಿಂದ ಸಿಗುವ ರುಚಿ ನಿಮ್ಮ ಬಾಯಲ್ಲಿ ಉಳಿಯುವುದರಿಂದ, ಚಿಪ್ಸ್ ಮತ್ತು ಐಸ್‌ಕ್ರೀಮ್‌ನಂತಹ ಇತರೆ ತಿನಿಸು ತಿನ್ನುವುದನ್ನು ತಪ್ಪಿಸಲು ಅದು ನೆರವಾಗಬಹುದು.

  ನಿಮ್ಮ ತೂಕದ ಬಗ್ಗೆ ಚಿಂತಿಸದೆ, ಸಂತೋಷವಾಗಿ ನೀವು ಬಯಸಿದ ಆಹಾರವನ್ನು ಸವಿಯಲು ನೆರವಾಗುವ ಕೆಲವು ತಂತ್ರ ಮತ್ತು ಸಲಹೆಗಳು ಹೀಗಿವೆ:
 • ಮಾವಿನಹಣ್ಣು, ಬಾಳೆಹಣ್ಣು, ಸಪೋಟಾ (ಸಪೋಡಿಲ್ಲಾ) ಮತ್ತು ಸೀತಾಫಲ, ಈ ಹಣ್ಣುಗಳು ನಿಮಗೆ ಇಷ್ಟವೇ? ಇವನ್ನು ಹೆಚ್ಚಾಗಿ ಮಧ್ಯಾಹ್ನದ ಹೊತ್ತು ತಿನ್ನಲು ಪ್ರಯತ್ನಿಸಿ. ಏಕೆಂದರೆ ಹಗಲು ಹೊತ್ತು ನೀವು ತುಂಬಾ ಕ್ರಿಯಾಶೀಲರಾಗಿರುತ್ತೀರಿ, ಈ ಸಮಯದಲ್ಲಿ ಹಣ್ಣುಗಳ ಕ್ಯಾಲರಿಯನ್ನು, ನಿಮ್ಮ ದೇಹ ಶಕ್ತಿಗಾಗಿ ಬಳಸಿಕೊಳ್ಳುತ್ತದೆ, ಹಾಗಾಗಿ ಈ ಕ್ಯಾಲರಿ ಕೊಬ್ಬಾಗಿ ಮಾರ್ಪಾಡಾಗುವುದಿಲ್ಲ.
 • ರೈಸ್ ಮತ್ತು ಪಾಸ್ತಾ ನಿಮ್ಮ ತೂಕ ಹೆಚ್ಚಾಗಲು ಕಾರಣ ಎಂದು ನೀವು ಅವನ್ನು ಸೇವಿಸುವುದಿಲ್ಲವೆ? ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿರಲು ರೈಸ್‌ ಮತ್ತು ಪಾಸ್ತಾ ಜೊತೆಗೆ, ನಾರು ಹೇರಳವಾಗಿರುವ ತರಕಾರಿಗಳು ಅಥವಾ ಪ್ರೋಟೀನ್ ಹೇರಳವಾಗಿರುವ ಬೇಳೆ ಅಥವಾ ಬೀನ್ಸ್ ಸೇವಿಸಿ. ಹಾಗೆಯೇ, ಒಂದು ಸಲದ ಊಟದ ಪಾಲನ್ನು ಒಂದು ಬಟ್ಟಲಿನಷ್ಟು ಅನ್ನ, ಪಾಸ್ತಾ, ನೂಡಲ್ಸ್ ಅಥವಾ ಸ್ಪೆಗಟಿಗೆ ಮಿತಿಗೊಳಿಸಿ.
 • ಆಗಾಗ ಸಿಹಿ ತಿನ್ನಲು ಹಾತೊರೆಯುವಿರಾ? ಅಂಗಡಿಯಿಂದ ಸಿಹಿ ಖರೀದಿಸುವ ಬದಲು ಮನೆಯಲ್ಲಿಯೇ ಸಿಹಿ ತಯಾರಿಸಿ. ಇಂತಹ ಒಂದು ಸಣ್ಣ ತಂತ್ರ ನಿಮ್ಮ ಸಿಹಿಯ ಸೇವನೆಯನ್ನು ಕೂಡಲೇ ಕಡಿಮೆ ಮಾಡುವುದು. ಹಾಗೆಯೇ, ಸಕ್ಕರೆ ಬದಲಿಗೆ ನೈಸರ್ಗಿಕವಾಗಿ ಸಿಗುವಂತಹ ಒಣಗಿದ ಅಂಜೂರ, ಖರ್ಜೂರ ಮತ್ತು ಏಪ್ರಿಕಾಟ್‌ಗಳಿಂದ ಸಿಹಿ ತಿಂಡಿಗಳನ್ನು ತಯಾರಿಸಿ. ಉದಾಹರಣೆಗೆ ಖರ್ಜೂರವನ್ನು ಪುಡಿಮಾಡಿ ಸಿಹಿತಿಂಡಿಗೆ ಬಳಸಿ. ಇದಲ್ಲದೇ, ಕಡಿಮೆ ಕೊಬ್ಬು ಇರುವ ಅಥವಾ ಕೆನೆ ತೆಗೆದ ಹಾಲನ್ನು ಸಿಹಿ ತಯಾರಿಸುವುದಕ್ಕೆ ಬಳಸುವುದು ಒಳ್ಳೆಯದು.
 • ಕರಿದ ಪದಾರ್ಥಗಳನ್ನು ತಿನ್ನುವ ಮನಸ್ಸಾಗುತ್ತಿದೆಯೇ? ಒಂದು ಸಲಕ್ಕೆ ಒಂದೇ ಕರಿದ ಪದಾರ್ಥವನ್ನು ತಿನ್ನಿ. ಸಾಧ್ಯವಾದಷ್ಟು ತಿಂಗಳಿಗೆ ಒಂದು ಬಾರಿ ಅಥವಾ ಎರಡು ಬಾರಿ ಮಾತ್ರ ಕರಿದ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸಿ.
 • ಪಿಜ್ಜಾ ಎಂದರೆ ಇಷ್ಟವೇ? ನೀವು ತಿಂಗಳಲ್ಲಿ ಒಂದು ಬಾರಿ ಮಧ್ಯಾಹ್ನದ ಊಟಕ್ಕೆ, ಆರರಿಂದ ಏಳು ಇಂಚು ದೊಡ್ಡದಾಗಿರುವ, ಸಾಕಷ್ಟು ತರಕಾರಿಗಳನ್ನು ಹಾಕಿರುವ ಪಿಜ್ಜಾ ಸವಿಯಬಹುದು. ಆದರೆ ಮುಂದಿನ ಊಟಕ್ಕೆ ಒಂದು ಬೌಲ್ ಮೊಳಕೆ ಕಟ್ಟಿದ ಕಾಳು ಇಲ್ಲವೇ ಹುರಿದ ಫಾಕ್ಸ್‌ನಟ್ಸ್‌(ಮಖಾನಾ) ಮಾತ್ರ ತಿನ್ನುವುದನ್ನು ಮರೆಯಬೇಡಿ.
 • ಸಿಹಿ ಹಾಗೂ ಕರಿದ ತಿನಿಸುಗಳಿಂದ ತೂಕ ಹೆಚ್ಚಾಗುವುದನ್ನು ತಡೆಯಲು ಇರುವ ದಾರಿ ಎಂದರೆ, ಅವನ್ನು ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟ ಮುಗಿಸಿದ ಎರಡು ಗಂಟೆಗಳ ಬಳಿಕ ತಿನ್ನುವುದು. ಆಗ ನಿಮ್ಮ ನಾಲಿಗೆಗೆ ರುಚಿಯೂ ಸಿಗುತ್ತದೆ, ಜೊತೆಗೆ ಒಂದೇ ಸಲಕ್ಕೆ ನಿಮ್ಮ ದೇಹಕ್ಕೆ ಜಾಸ್ತಿ ಕ್ಯಾಲರಿಯೂ ಸೇರುವುದಿಲ್ಲ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.