ಹೆಣ್ಣಿನ ಚೊಚ್ಚಲ ತಾಯ್ತತನವು ಅವಳ ಪುನರ್ಜನ್ಮವೆಂದೇ ಜನಜನಿತವಾಗಿದೆ. ಈ ಹಂತವು ಅವಳನ್ನು ಹೆಣ್ಣಿನಿಂದ ಒಬ್ಬಳು ತಾಯಿಯನ್ನಾಗಿ ಪರಿವರ್ತಿಸುತ್ತದೆ, ಹಾಗೂ ಈ ಸಮಯದಲ್ಲಿ ಅವಳಲ್ಲಿ ಖುಶಿ, ಆಶ್ಚರ್ಯ ಮತ್ತು ಬಯಕೆ ಮನೆ ಮಾಡಿರುತ್ತದೆ. ಹೆರಿಗೆಯ ವೇಳೆ ಮಗುವು ಆರೋಗ್ಯವಂತವಾಗಿ ಹಾಗೂ ಯಾವುದೇ ಸಮಸ್ಯೆಗಳಿಲ್ಲದೆ ಹುಟ್ಟಲು, ತಾಯಿಯು ಆರೋಗ್ಯವಂತಳಾಗಿ ಹಾಗೂ ರೋಗಮುಕ್ತಳಾಗಿ ಇರುವುದು ತುಂಬಾ ಮುಖ್ಯ.
ಕೆಲವೊಮ್ಮೆ, ಹೆಣ್ಣು ಗರ್ಭಾವಸ್ಥೆಯಲ್ಲಿರುವಾಗ ಅಧಿಕ ರಕ್ತದೊತ್ತಡವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ, ಇದನ್ನು ಗರ್ಭಧಾರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ (ಪಿಐಹೆಚ್) ಅಥವಾ ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ ಎಂದು ಕರೆಯುತ್ತಾರೆ. ವಿಶ್ವದೆಲ್ಲೆಡೆ ಸರಿಸುಮಾರು ಶೇಖಡ 10ರಷ್ಟು ಮಹಿಳೆಯರಲ್ಲಿ ಪಿಐಹೆಚ್ ಕಂಡುಬರುತ್ತದೆ ಹಾಗೂ ಈ ಸ್ಥಿತಿಯು ತಾಯಿ ಮತ್ತು ಮಗು ಇಬ್ಬರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.1,2
ಈ ಬರಹದ ಮೂಲಕ, ತಾಯಿಯಾಗ ಬಯಸುವ ಎಲ್ಲರಿಗು ಪಿಐಹೆಚ್ ಸಂಬಂಧಪಟ್ಟ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ, ಆದ್ದರಿಂದ ಇಂತಹ ಸಂದರ್ಭಗಳು ಎದುರಾದಾಗ ಗಾಬರಿಯಾಗಬೇಡಿ. ಸರಿಯಾದ ಆರೈಕೆ ಮತ್ತು ಸಮಯೋಚಿತ ಚಿಕಿತ್ಸೆಯಿಂದ, ಅಧಿಕ ರಕ್ತದೊತ್ತಡವನ್ನು ಗುಣಪಡಿಸಬಹುದು.1
ಪಿಐಹೆಚ್3 ಸಾಧ್ಯತೆಯಿರುವ ಮಹಿಳೆಯರ ಪ್ರಕಾರಗಳು
- 20 ವರ್ಷದೊಳಗಿನ ಮಹಿಳೆಯರು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರು
- ಚೊಚ್ಚಲ ಬಾರಿಗೆ ತಾಯ್ತತನವನ್ನು ಅನುಭವಿಸುತ್ತಿರುವವರು
- ಹೊಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಗುವನ್ನು ಹೊತ್ತಿರುವ ಮಹಿಳೆಯರು
- ಈಗಾಗಲೇ ಕಿಡ್ನಿ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡದ ಹಿನ್ನೆಲೆಯನ್ನು ಹೊಂದಿರುವ ಮಹಿಳೆಯರು
- ಪಿಐಹೆಚ್‌ಗೆ ಒಳಪಟ್ಟಿದ್ದ ತಾಯಿ ಅಥವಾ ಸಹೋದರಿಯನ್ನು ಹೊಂದಿರುವ ಮಹಿಳೆಯರು
ಗರ್ಭಾವಸ್ಥೆಯೊಂದಿಗೆ ಯಾವ ಯಾವ ಬಗೆಯ ಅಧಿಕ ರಕ್ತದೊತ್ತಡಗಳು ತಳುಕುಹಾಕಿಕೊಂಡಿರುತ್ತವೆ?
ಮೂರು ಸಾಮಾನ್ಯ ಬಗೆಯ ಅಧಿಕ ರಕ್ತದೊತ್ತಡಗಳು ಈ ಕೆಳಗಿನಂತಿವೆ:3
1.ದೀರ್ಘಕಾಲದ ಅಧಿಕ ರಕ್ತದೊತ್ತಡ: ಇದರಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರು ಕಂಡು ಬರುತ್ತಾರೆ (140/90ಕ್ಕೂ ಹೆಚ್ಚು):3
- ಗರ್ಭಧಾರಣೆಗೂ ಮುನ್ನ
- ಗರ್ಭಧಾರಣೆಯ ಮೊದಲ ಕೆಲವು ವಾರಗಳು (20 ವಾರಕ್ಕೂ ಮುಂಚೆ)
- ಹೆರಿಗೆಯ ನಂತರ
- ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ: ಗರ್ಭಧಾರಣೆಯಾದ 20 ವಾರಗಳ ನಂತರ ಬಂದು, ಹೆರಿಗೆಯ ನಂತರ ಹೋಗುವ ಅಧಿಕ ರಕ್ತದೊತ್ತಡಕ್ಕೆ ಗರ್ಭಧಾರಣೆ ಅವಧಿಯಲ್ಲಿನ ರಕ್ತದೊತ್ತಡವೆನ್ನುತ್ತಾರೆ.3
- ಪ್ರಿಕ್ಲಾಂಪ್ಸಿಯಾ: ಇದು ಸಹಜ ರಕ್ತದೊತ್ತಡವನ್ನು ಹೊಂದಿರುವ ಮಹಿಳೆಯರಲ್ಲಿ ಕಂಡು ಬರುವ ಸ್ಥಿತಿಯಾಗಿದೆ.1 ಹೆಚ್ಚು ಕಡಿಮೆ 20 ವಾರಗಳ ನಂತರ ಮಹಿಳೆಯಲ್ಲಿ ಏಕಾಏಕಿ ಅಧಿಕ ರಕ್ತದೊತ್ತಡ ಹಾಗೂ ಮೂತ್ರದಲ್ಲಿ ಪ್ರೋಟಿನ್ ಅಂಶ ಕಂಡುಬರುತ್ತದೆ. ದೀರ್ಘಕಾಲದ ಅಥವಾ ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡವನ್ನು ಹೊಂದಿರುವ ಮಹಿಳೆಯರಲ್ಲೂ ಪ್ರಿಕ್ಲಾಂಪ್ಸಿಯಾ ಕಂಡು ಬರುತ್ತದೆ.3 ಈ ಬಗೆಯ ಪಿಐಹೆಚ್ ಭಾರತದಲ್ಲಿ ಶೇಖಡ 5-15ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಕಂಡುಬಂದಿದೆ.4
ಪ್ರಿಕ್ಲಾಂಪ್ಸಿಯಾದ ಲಕ್ಷಣಗಳಲ್ಲಿ ಇವು ಕೂಡ ಒಳಗಂಡಿವೆ:1
- ದೃಷ್ಟಿ ತೊಂದರೆಗಳು
- ನಿರಂತರ ತಲೆನೋವು
- ಉಸಿರಾಟದಲ್ಲಿ ತೊಂದರೆ
- ವಾಕರಿಕೆ ಅಥವಾ ವಾಂತಿ
- ಹೊಟ್ಟೆಯ ಮೇಲ್ಭಾಗದಲ್ಲಿ ನೋವು
- ಮುಖ ಮತ್ತು ಕೈಗಳು ಊದಿಕೊಳ್ಳುವುದು
- ಹಠಾತ್ ತೂಕ ಹೆಚ್ಚಾಗುತ್ತದೆ
ಪ್ರಿಕ್ಲಾಂಪ್ಸಿಯಾ, ಚಿಕಿತ್ಸೆ ನೀಡದಿದ್ದರೆ, ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.3 ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯದೇ ಹೋದಲ್ಲಿ, ಇದು ಎಕ್ಲಾಂಪ್ಸಿಯಾ ಎಂದು ಕರೆಯಲ್ಪಡುವ ಸ್ಥಿತಿಯನ್ನು ತಲುಪುವ ಮೂಲಕ ಮಹಿಳೆಯನ್ನು ರೋಗಗ್ರಸ್ತಳನ್ನಾಗಿಸಬಹುದು.1
ಹೆರಿಗೆಯ ನಂತರವೂ ಪ್ರಿಕ್ಲಾಂಪ್ಸಿಯಾ ಸಂಭವಿಸುವ ಸಾಧ್ಯತೆಗಳಿದ್ದು, ಇದನ್ನು ಹೆರಿಗೆಯ ನಂತರದ ಪ್ರಿಕ್ಲಾಂಪ್ಸಿಯಾ ಎಂದು ಕರೆಯಲಾಗುತ್ತದೆ. ಇದು ತೀರಾ ಅಪರೂಪವಾದರೂ ಗಂಭೀರ ಸ್ವಭಾವದ್ದಾಗಿದೆ.1
ಪಿಐಹೆಚ್1 ನಿಂದ ಉಂಟಾಗುವ ತೊಂದರೆಗಳು
ಪಿಐಹೆಚ್ ಮಹಿಳೆಯರಿಗೆ ಈ ಕೆಳಗಿನ ತೊಂದರೆಗಳನ್ನು ತಂದೊಡ್ಡಬಹುದು:
- ಪ್ರಿಕ್ಲಾಂಪ್ಸಿಯಾ
- ಎಕ್ಲಾಂಪ್ಸಿಯಾ
- ಪಾರ್ಶ್ವವಾಯು
- ಹೆರಿಗೆ ನೋವು ಬರಲು ಔಷಧಿಯನ್ನು ಪಡೆಯಬೇಕಾಗಬಹುದು
- ಗರ್ಭಕೋಶದ ಗೋಡೆಯಿಂದ ಕರುಳಬಳ್ಳಿಯನ್ನು(ಭ್ರೂಣಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುವ ಅಂಗ) ಬೇರ್ಪಡಿಸಬಹುದು
ತಾಯಿಯಲ್ಲಿನ ಅಧಿಕ ರಕ್ತದೊತ್ತಡವು ಮಗುವಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನು ಮಿತಿಗೊಳಿಸಿ, ಮಗುವಿನಲ್ಲಿ ತೊಂದರೆಗಳಿಗೆ ಕಾರಣವಾಗಬಹುದು, ಅವುಗಳೆಂದರೆ:
- ಗರ್ಭಧಾರಣೆಯ 37 ವಾರಗಳ ಮೊದಲೆ ಹುಟ್ಟುವುದು (ಗರ್ಭಾವಸ್ಥೆಯ ಅವಧಿಗೂ ಮುನ್ನ)
- ಹುಟ್ಟುವ ಮಗು ಕಡಿಮೆ ತೂಕವನ್ನು ಹೊಂದಿರುವುದು 1
ಅಧಿಕ ರಕ್ತದೊತ್ತಡವನ್ನು ಹೊಂದಿರುವ ಮಹಿಳೆಯರು ಗರ್ಭವನ್ನು ಧರಿಸುವ ಮುನ್ನ ಏನು ಮಾಡಬೇಕು?5
ನಿಮ್ಮ ವಿಶಿಷ್ಟ ಸ್ಥಿತಿಗೆ ಅನುಗುಣವಾಗಿ ನಿಮ್ಮ ಆರೋಗ್ಯ ವೃತ್ತಿಪರರು ನಿಮಗೆ ಸೂಚನೆಗಳನ್ನು ನೀಡಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ಪ್ರತಿಯೊಬ್ಬ ಮಹಿಳೆ ಗರ್ಭಿಣಿಯಾಗುವ ಮೊದಲು ತೆಗೆದುಕೊಳ್ಳಬಹುದಾದ ಕೆಲವು ಅಗತ್ಯ ಮುನ್ನೆಚ್ಚರಿಕೆಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:
- ಸೋಡಿಯಂ ಸೇವನೆಯ ಮೇಲೆ ಮಿತಿ ಹೇರಿ
- ನೀವು ಅಧಿಕ ತೂಕ ಹೊಂದಿದ್ದರೆ, ಸುರಕ್ಷಿತ ಗರ್ಭಧಾರಣೆಗಾಗಿ ತೂಕ ಇಳಿಸುವತ್ತ ಗಮನ ಹರಿಸಿ
- ಪ್ರತಿನಿತ್ಯ ವ್ಯಾಯಾಮ ಮಾಡಿ, ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
- ಧೂಮಪಾನವನ್ನು ಬಿಟ್ಟುಬಿಡಿ ಹಾಗೂ ಕುಡಿತಕ್ಕೆ ತಿಲಾಂಜಲಿ ಹಾಡಿ
- ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ5
ಪಿಐಹೆಚ್ ಚಿಕಿತ್ಸೆಗಿರುವ ಆಯ್ಕೆಗಳು ಯಾವುವು?
ಚಿಕಿತ್ಸೆಯು ಮುಖ್ಯವಾಗಿ ಮಹಿಳೆಯ ಗರ್ಭಧಾರಣೆಯ ಹಂತದ ಮೇಲೆ ಅವಲಂಬಿತವಾಗಿರುತ್ತದೆ. ಹೊಟ್ಟೆಯೊಳಗಿನ ಮಗುವು ಸಾಕಷ್ಟು ಬೆಳೆದಿದೆ ಎಂದು ನಿಮ್ಮ ಆರೋಗ್ಯ ಆರೈಕೆ ನೀಡುಗರಿಗೆ ತಿಳಿದುಬಂದಲ್ಲಿ, ಅವರು ಆದಷ್ಟು ಬೇಗ ಹೆರಿಗೆಯನ್ನು ಮಾಡಿಸಲು ಬಯಸಬಹುದು.3
ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡವನ್ನು ಸಂಪೂರ್ಣವಾಗಿ ತಡೆಯಲಾಗುವುದಿಲ್ಲ, ಆದರೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಅನೇಕ ಅಂಶಗಳನ್ನು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನಿಯಂತ್ರಿಸಬಹುದು.3
ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಒಂದು ಸಂದೇಶ: ನಿಮ್ಮ ಆರೋಗ್ಯದ ಬಗ್ಗೆ ಚೆನ್ನಾಗಿ ಕಾಳಜಿ ವಹಿಸಿ ಇದರಿಂದ ನೀವು ಮತ್ತು ನಿಮ್ಮ ಕೂಸು ಇಬ್ಬರೂ ಆರೋಗ್ಯವಾಗಿರುತ್ತೀರಿ, ನಿಮ್ಮ ತಾಯ್ತತನವನ್ನು ಸಂಪೂರ್ಣವಾಗಿ ಆನಂದಿಸುತ್ತೀರಿ.