Reading Time: 2 minutes

ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಅನ್ನು ನಿಯಂತ್ರಿಸಲು ಇನ್ಸುಲಿನ್ ಒಂದು ಪರಿಣಾಮಕಾರಿಯಾದ ಔಷಧಿಯಾಗಿದೆ. ಆದರೆ, ಇನ್ಸುಲಿನ್ ಇಂಜೆಕ್ಷನ್‍ನಿಂದ ಹೆಚ್ಚು ಲಾಭವನ್ನು ಪಡೆಯಲು, ಅದನ್ನು ಪ್ರಿಸ್ಕ್ರೈಬ್ ಮಾಡಿದ ಪ್ರಮಾಣವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಬಹಳಷ್ಟು ರೋಗಿಗಳು ಅದನ್ನು ತಪ್ಪಿಸುತ್ತಾರೆ ಅಥವಾ ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದಿಲ್ಲ.[1] ಈ ರೀತಿಯ ಜನರ A1C ಮಟ್ಟಗಳು ಹೆಚ್ಚಿರುತ್ತದೆ ಹಾಗೂ ಡಯಾಬಿಟಿಸ್‍ಗೆ ಸಂಬಂಧಿಸಿದ ತೊಡಕುಗಳಿಂದ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಇದು ತಮ್ಮ ಇನ್ಸುಲಿನ್ ಕಟ್ಟುಪಾಡುಗಳನ್ನು ಅತ್ಯಂತ ಅದ್ಭುತವಾಗಿ ನಿಭಾಯಿಸುತ್ತಿರುವವರಿಗೆ ಹೋಲಿಸಿ ನೋಡಿದಾಗ ಕಂಡುಕೊಂಡ ಮಾಹಿತಿ.[2]

ಸರಳವಾಗಿ ಹೇಳುವುದಾದರೆ, ಸರಿಯಾಗಿ ಪಾಲಿಸದೇ ಇರುವ ಇನ್ಸುಲಿನ್ ಕಟ್ಟುಪಾಡು ನೀವು ಆ ಚಿಕಿತ್ಸೆಯಿಂದ ಪಡೆಯಬಹುದಾದ ಪ್ರಯೋಜನಗಳನ್ನು ಕುಗ್ಗಿಸುತ್ತದೆ. ಹಾಗಾಗಿ, ಸಮಯ ಕಳೆದಂತೆ, ನಿಮ್ಮ ಗ್ಲುಕೋಸ್ ಮೇಲಿನ ನಿಯಂತ್ರಣವು, ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ಇನ್ಸುಲಿನ್ ಕಟ್ಟುಪಾಡುಗಳನ್ನು ಪಾಲಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೋ ಅಷ್ಟು ಚೆನ್ನಾಗಿ ಇರುವುದಿಲ್ಲ.

ಒಂದು ಡೋಸ್ ತಪ್ಪಿಸಿದರೆ

ನೀವು ಒಂದು ವೇಳೆ ಇನ್ಸುಲಿನ್‍ನ ಒಂದು ಡೋಸ್ ಅನ್ನು ತಪ್ಪಿಸಿದರೆ, ನಿಮ್ಮ ಗ್ಲುಕೋಸ್ ಮಟ್ಟ ಏರುತ್ತದೆ (ಹೈಪರ್‍‍ಗ್ಲೈಸೀಮಿಯಾ). ಈ ಏರಿಕೆ ಸಣ್ಣ ಪ್ರಮಾಣದಲ್ಲಿ ಆಗಿದ್ದು, ಗಮನಕ್ಕೆ ಬಾರದೇ ಹೋಗಬಹುದು. ಆದರೂ, ರೋಗಿಗಳಿಗೆ ಹೈಪರ್‍‍ಗ್ಲೈಸೀಮಿಯಾದಿಂದ ಈ ಕೆಳಗಿನ ಕೆಲವು ರೋಗಲಕ್ಷಣಗಳ ಅನುಭವ ಆಗಬಹುದು:

  • ತೀವ್ರ ಬಾಯಾರಿಕೆ
  • ಆಗಾಗ ಮೂತ್ರ ಬರುವುದು
  • ಗೊಂದಲ, ಆಲಸ್ಯ, ಸುಸ್ತು ಅಥವಾ ಮಂಪರು
  • ವಾಕರಿಕೆ ಅಥವಾ ವಾಂತಿ ಬರುವುದು
  • ಹಸಿವು ಆಗದೆ ಇರುವುದು
  • ಚರ್ಮ ಕೆಂಪಾಗುವುದು ಮತ್ತು/ಅಥವಾ ಒಣಗುವುದು.
  • ಹೃದಯದ ಬಡಿತ ಹೆಚ್ಚುವುದು

ಡಯಾಬಿಟಿಕ್ ಕೀಟೋಆ್ಯಸಿಡೋಸಿಸ್ (ಬಾಯಿಯಿಂದ ಹಣ್ಣಿನ ವಾಸನೆ ಬರುವುದು) ಉಂಟಾಗುವುದು ಅಪರೂಪ, ಆದರೆ ಇದೊಂದು ವೈದ್ಯಕೀಯ ತುರ್ತುಸ್ಥಿತಿಯಾಗಿರುತ್ತದೆ.

ಆಗೊಮ್ಮೆ ಈಗೊಮ್ಮೆ ಡೋಸ್ ತೆಗೆದುಕೊಳ್ಳಲು ಮರೆಯುವುದು ಅಥವಾ ಅದನ್ನು ನಿಯಮಿತವಾಗಿ ತೆಗೆದುಕೊಳ್ಳದೇ ಇರುವುದು

HbA1c: ಕಳಪೆ ಮಟ್ಟದ ಗ್ಲುಕೋಸ್ ನಿಯಂತ್ರಣ (HbA1c ಬಳಸಿ ಅಳೆಯಲಾಗುತ್ತದೆ) ದೀರ್ಘಕಾಲದಿಂದ ಕಾಪಾಡಿಕೊಂಡು ಬಂದ ಯಶಸ್ವಿ ಡಯಬಿಟಿಕ್ ನಿರ್ವಹಣೆಯನ್ನು ಹಾಳುಗೆಡವುತ್ತದೆ. ಇನ್ಸುಲಿನ್ ಡೋಸ್‍ಗಳನ್ನು ಎಂದಿಗೂ ತಪ್ಪಿಸದವರು ಅದ್ಭುತವಾಗಿ ಗ್ಲುಕೋಸ್ ಮೇಲೆ ಹಿಡಿತ ಸಾಧಿಸಿರುವ ಸಾಧ್ಯತೆ ಶೇ. 25% ನಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.[3] ಆದರೆ, ನಿಯಮಿತವಾಗಿ, ಹೊತ್ತಿಗೆ ಸರಿಯಾಗಿ, ಔಷಧಿಗಳನ್ನು ತೆಗೆದುಕೊಂಡಾಗ HbA1c ಮಟ್ಟ ಎಷ್ಟು ಇರಬೇಕೋ, ಡೋಸ್‍ಗಳನ್ನು ತಪ್ಪಿಸಿದಾಗ ಆ ಮಟ್ಟ 0.5-1.5% ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.[1,3,4]

ದೀರ್ಘಕಾಲದ ತೊಡಕುಗಳು: ಸಾಮಾನ್ಯವಾಗಿ ಇರಬೇಕಾದ ಮಟ್ಟಗಳಿಗಿಂತ ಕಡಿಮೆ ಇರುವ ಬ್ಲಡ್ ಗ್ಲುಕೋಸ್ ಮಟ್ಟಗಳು ತಕ್ಷಣವೇ ಯಾವುದೇ ಪ್ರಭಾವವನ್ನು ಬೀರದೆ ಹೋಗಬಹುದು, ಹಾಗಾಗಿ ನಾವು ಅದರ ಅಪಾಯವನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ. ಆದರೆ ದೀರ್ಘಾವಧಿಯಲ್ಲಿ, ಅವು ಡಯಾಬಿಟಿಸ್‍ನ ತೊಡಕುಗಳ ಅಪಾಯವನ್ನು ಗಣನೀಯವಾಗಿ ಏರಿಸಬಹುದು. ಡಯಾಬಿಟಿಸ್‍ನ ತೊಡಕುಗಳು ಹಲವಾರು ಹಾಗೂ ಅವು ಚರ್ಮದ ಅಲ್ಸರ್, ದೃಷ್ಟಿ ಮಸುಕಾಗುವುದು ಮತ್ತು ಹೃದಯಾಘಾತದ ತೊಡಕುಗಳ ಶ್ರೇಣಿಯಲ್ಲಿ ಬರುವ ಯಾವ ಸಮಸ್ಯೆ ಬೇಕಾದರೂ ಆಗಿರಬಹುದು.[4] ಡಯಾಬಿಟಿಸ್‍ನ ವಿಭಿನ್ನ ತೊಡಕುಗಳು ಯಾವುವು ಎಂದು ನೀವು ಇಲ್ಲಿ ನೋಡಬಹುದು.

ಜೀವನದ ಗುಣಮಟ್ಟ: ಡಯಾಬಿಟಿಸ್ ಒಂದನ್ನೇ ನಿಭಾಯಿಸುವುದಕ್ಕಿಂತ ಹೆಚ್ಚಾಗಿ ಈ ಸ್ಥಿತಿ ನಿಮ್ಮ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದು ನಿಮ್ಮ ದೈಹಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರಬಹುದು, ನೀವು ತೆಗೆದುಕೊಳ್ಳುವ ಮಾತ್ರೆಗಳ ಪ್ರಮಾಣವನ್ನು ಹೆಚ್ಚಿಸಬಹುದು, ನಿಮ್ಮ ಲೈಂಗಿಕ ಜೀವನದ ಮತ್ತು ಸಾಮಾಜಿಕ ಜೀವನದ ಮೇಲೆಯೂ ಪ್ರಭಾವ ಬೀರಬಹುದು. ಉದಾಹರಣೆಗೆ, ನಿಮಗೆ ತೀವ್ರವಾದ ಬೆವರು ಬರಲು ಪ್ರಾರಂಭವಾಗಬಹುದು ಅಥವಾ ನೀವು ಯಾರೊಂದಿಗಾದರೂ ಇದ್ದಾಗ ಪದೇಪದೇ ಶೌಚಾಲಯಕ್ಕೆ ತೆರಳುವಂತೆ ಮಾಡಬಹುದು.

ಆಸ್ಪತ್ರೆ ಮತ್ತು ಖರ್ಚುಗಳು: ಕಳಪೆ ಶುಗರ್ ನಿಯಂತ್ರಣ, ವೈದ್ಯರನ್ನು ಕಾಣುವ ಮತ್ತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯನ್ನು ಹೆಚ್ಚಿಸುತ್ತದೆ.[4] ಇದರಿಂದ ನೀವು ಪದೇ ಪದೇ ರಕ್ತದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗಬಹುದು. ಇನ್ಸುಲಿನ್ ಕಟ್ಟುಪಾಡುಗಳನ್ನು ಸರಿಯಾಗಿ ಪಾಲಿಸದಿದ್ದರೆ, ದೀರ್ಘಾವಧಿಯಲ್ಲಿ ಅದು ಹೆಚ್ಚು ದುಬಾರಿಯಾಗಿ ಪರಿಣಮಿಸಬಹುದು.

ಸೂಕ್ಷ್ಮ ಅನುಸರಣೆ

ನೀವು ಯಾವುದಾದರೂ ಒಂದು ಕಾರಣಕ್ಕೆ ನಿಮ್ಮ ಡೋಸ್‍ಗಳನ್ನು ತಪ್ಪಿಸುತ್ತಿದ್ದರೆ, ಬೇರೆ ಯಾವ ಆಯ್ಕೆಗಳು ಲಭ್ಯವಿದೆ ಎಂದು ತಿಳಿದುಕೊಳ್ಳಲು ನಿಮ್ಮ ವೈದ್ಯರೊಡನೆ ಮಾತನಾಡಿ. (ಇನ್ಸುಲಿನ್ ಬಗೆಗಿನ ಭಯಗಳ ಬರಹಗಳನ್ನು ಓದಿ.) ತಡವಾಗಿ ಕೆಲಸ ಶುರುಮಾಡುವ ಇನ್ಸುಲಿನ್, ರಿಮೈಂಡರ್ ಇರುವ ಆ್ಯಪ್, ಮಾತ್ರೆಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಮದ್ದಿನ ಪೆಟ್ಟಿಗೆಗಳು ನಿಮ್ಮ ಕಟ್ಟುಪಾಡನ್ನು ತಪ್ಪದೆ ಪಾಲಿಸಲು ನೆರವಾಗುವ ಕೆಲವು ತಂತ್ರಗಳು. ಇಂದು ನೀವು ಸ್ವಲ್ಪ ಸಮಯ ಮತ್ತು ಶಕ್ತಿಯನ್ನು ಹಾಕಿದರೆ, ಡಯಾಬಿಟಿಸ್ ಇದ್ದರೂ ಕೂಡ ಹತ್ತು ವರ್ಷದ ನಂತರವೂ ನೀವು ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿರುತ್ತೀರಿ!

ಉಲ್ಲೇಖಗಳು:

  1. Josse RG, Woo V. Flexibly timed once‐daily dosing with degludec: a new ultra‐long‐acting basal insulin. Diabetes, Obesity and Metabolism. 2013 Dec;15(12):1077-84.
  2. Peyrot M, Rubin RR, Kruger DF, Travis LB. Correlates of insulin injection omission. Diabetes care. 2010 Feb 1;33(2):240-5.
  3. Jaser SS, Datye KA. Frequency of missed insulin boluses in type 1 diabetes and its impact on diabetes control. Diabetes technology & therapeutics. 2016 Jun 1;18(6):341-2.
  4. Sarbacker GB, Urteaga EM. Adherence to insulin therapy. Diabetes Spectrum. 2016 Aug 1;29(3):166-70.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.