Reading Time: 4 minutes

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಡಯಾಬಿಟಿಸ್ ವಿಭಿನ್ನ ಬಗೆಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ[1]. ಇದಕ್ಕೆ ಮುಖ್ಯ ಕಾರಣ ಈ ಎರಡು ಲಿಂಗಗಳ ನಡುವಿನ ಹಾರ್ಮೋನುಗಳ ವ್ಯತ್ಯಾಸ ಮತ್ತು ಉರಿಯೂತದ ವ್ಯತ್ಯಾಸ.

ಟೈಪ್ 2 ಡಯಾಬಿಟಿಸ್ ದೀರ್ಘಕಾಲದ ಕೆಳ-ದರ್ಜೆಯ ಉರಿಯೂತದ ಕಾಯಿಲೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಅದರ ಚಿಹ್ನೆಗಳು, ಲಕ್ಷಣಗಳು ಮತ್ತು ರೋಗದ ಪ್ರಗತಿಯು ಪುರುಷರಿಗಿಂತ ಮಹಿಳೆಯರಲ್ಲಿ ಗಮನಾರ್ಹವಾಗಿ ವಿಭಿನ್ನವಾಗಿವೆ.

ಡಯಾಬಿಟಿಸ್ ಇರುವ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳು ಮತ್ತು ಲಕ್ಷಣಗಳು ವಿಶಿಷ್ಟ ರೀತಿಯಲ್ಲಿರುತ್ತವೆ:

ಪುಣೆಯ ಸಹ್ಯಾದ್ರಿ ಆಸ್ಪತ್ರೆಯ ಡಯಾಬಿಟಿಸ್ ತಜ್ಞರಾದ, ಡಾ. ವೈಶಾಲಿ ಪಾಠಕ್ ಅವರ ಪ್ರಕಾರ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಡಯಾಬಿಟಿಸ್‍ಗೆ ಸಂಬಂಧಿಸಿದ ವಿಶಿಷ್ಟವಾದ 4 ಲಕ್ಷಣಗಳು ಮತ್ತು ತೊಡಕುಗಳು ಇಂತಿವೆ:

  • ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS): ಸಾಮಾನ್ಯವಾಗಿ, PCOS ನ ಕಾರಣದಿಂದಾಗಿ ಮಹಿಳೆಯರಿಗೆ ಡಯಾಬಿಟಿಸ್ ಬರುತ್ತದೆ, ಇದರಿಂದ ಅವರು ಇನ್ಸುಲಿನ್ ಪ್ರತಿರೋಧಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ವಾಸ್ತವದಲ್ಲಿ, ಇದು ಮಹಿಳೆಯರಲ್ಲಿ ಬಂಜೆತನ ಮತ್ತು ಸ್ಥೂಲಕಾಯತೆಯ ಸಮಸ್ಯೆ ಕಂಡುಬರಲು ಪ್ರಮುಖ ಕಾರಣವಾಗಿದೆ. ಕೂದಲು ತೆಳುವಾಗುವುದು, ಮೊಡವೆಗಳು ಮತ್ತು ದೇಹದಾದ್ಯಂತ ಹೆಚ್ಚು ಕೂದಲಿನ ಬೆಳವಣಿಗೆ ಇದರ ಲಕ್ಷಣಗಳಾಗಿವೆ.
  • ಮೂತ್ರನಾಳದ ಸೋಂಕು (UTI): ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟ ಮತ್ತು ಸಣ್ಣ ಮೂತ್ರನಾಳದ ಕಾರಣದಿಂದ ಡಯಾಬಿಟಿಸ್ ಇರುವ ಮಹಿಳೆಯರಲ್ಲಿ ಮೂತ್ರನಾಳದ ಸೋಂಕುಗಳು ಹೆಚ್ಚು ತೀವ್ರವಾಗಿರುತ್ತವೆ. ಮೂತ್ರದಲ್ಲಿ ಇರುವಂತಹ ಸಕ್ಕರೆಯು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸೂಕ್ತವಾದ ನೆಲೆಯನ್ನು ಸೃಷ್ಟಿಸುವುದರಿಂದ ಇದು ಡಯಾಬಿಟಿಸ್‍ನ ಅತ್ಯಂತ ಸಾಮಾನ್ಯವಾದ ಲಕ್ಷಣಗಳಲ್ಲಿ ಒಂದಾಗಿದೆ.
  • ಯೋನಿ ಅಥವಾ ಓರಲ್‌ ಯೀಸ್ಟ್ ಸೋಂಕು: ಡಯಾಬಿಟಿಸ್ ಹೊಂದಿರುವ ಮಹಿಳೆಯರು, ವಿಶೇಷವಾಗಿ ಅನಿಯಂತ್ರಿತ ಸಕ್ಕರೆ ಮಟ್ಟವನ್ನು ಹೊಂದಿರುವವರು ಯೋನಿ ಯೀಸ್ಟ್ ಮತ್ತು ಫಂಗಲ್ ಸೋಂಕಿಗೆ ಹೆಚ್ಚು ತುತ್ತಾಗುತ್ತಾರೆ. ತುರಿಕೆ, ನೋವು ಮತ್ತು ಯೋನಿ ಡಿಸ್ಚಾರ್ಜ್ ತೊಂದರೆ ಇರುವುದು ಯೋನಿ ಯೀಸ್ಟ್‌ನ ಲಕ್ಷಣಗಳಾಗಿರಬಹುದು.
  • ಯೋನಿ ಶುಷ್ಕತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆ ಆಗುವುದು: ಇದು ಲೈಂಗಿಕ ಕಾರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಕಾರಣವಾಗಬಹುದು ಹಾಗೂ ಇದರಿಂದಾಗಿ ಅವರು ಲೈಂಗಿಕ ಪ್ರತಿಕ್ರಿಯೆಯ ಕುಗ್ಗುವಿಕೆಯ ಸಮಸ್ಯೆ, ರಕ್ತದ ಹರಿವಿನ ಸಮಸ್ಯೆ ಹಾಗೂ ಕೆಲವು ದುರದೃಷ್ಟಕರ ಸಂದರ್ಭಗಳಲ್ಲಿ ನರಗಳ ಹಾನಿಯಂತಹ (ಡಯಾಬಿಟಿಕ್ ನ್ಯೂರೋಪಥಿ) ಸಮಸ್ಯೆಗಳಿಗೆ ತುತ್ತಾಗಬಹುದು.

ಜೆಸ್ಟೇಷನಲ್ ಡಯಾಬಿಟಿಸ್ ಅನ್ನು ಅರ್ಥಮಾಡಿಕೊಳ್ಳುವುದು:

ಗರ್ಭಾವಸ್ಥೆಯಲ್ಲಿದ್ದಾಗ ಕಾಣಿಸಿಕೊಳ್ಳುವ ಡಯಾಬಿಟಿಸ್ ಅನ್ನು ಜೆಸ್ಟೇಷನಲ್ ಡಯಾಬಿಟಿಸ್ ಮೆಲ್ಲಿಟಸ್ ಎನ್ನುತ್ತಾರೆ.

ಖಾಲಿ ಹೊಟ್ಟೆಯ ರಕ್ತದಲ್ಲಿನ ಸಕ್ಕರೆ (FBS) ಮಟ್ಟ> 90 ಮಿಗ್ರಾಂ % ಮತ್ತು ಪೋಸ್ಟ್‌ಪ್ರಾಂಡಿಯಲ್ (ಊಟದ-ನಂತರದ ಅಥವಾ PPBS) ರಕ್ತದಲ್ಲಿನ ಸಕ್ಕರೆ ಮಟ್ಟ 140 ಮಿಗ್ರಾಂ/ಡಿಎಲ್‌ಗಿಂತ ಹೆಚ್ಚು; ಗರ್ಭಾವಸ್ಥೆಯಲ್ಲಿ ಡಯಾಬಿಟಿಸ್ ಅನ್ನು ಪತ್ತೆಹಚ್ಚುವ ಮಾನದಂಡವಾಗಿದೆ. ಸಾಮಾನ್ಯವಾಗಿ, ಗರ್ಭಧಾರಣೆಯ 24ನೇ ವಾರದ ಅಸುಪಾಸಿನಲ್ಲಿ, ಅನೇಕ ಮಹಿಳೆಯರಲ್ಲಿ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ಸುಮಾರು 18% ರಷ್ಟು ಜೆಸ್ಟೇಷನಲ್ ಡಯಾಬಿಟಿಸ್ ಆಗಿರುತ್ತದೆ.[2]

ದಪ್ಪ ಅಥವಾ ಬೊಜ್ಜಿರುವ ಮಹಿಳೆಯರಲ್ಲಿ, ಕುಟುಂಬದಲ್ಲಿ ಡಯಾಬಿಟಿಸ್‍ನ ಇತಿಹಾಸ ಇರುವ ಮಹಿಳೆಯರಲ್ಲಿ ಮತ್ತು ಹಿಂದಿನ ಗರ್ಭಾವಸ್ಥೆಯಲ್ಲಿ ಜೆಸ್ಟೇಷನಲ್ ಡಯಾಬಿಟಿಸ್ ಕಾಣಿಸಿಕೊಂಡ ಮಹಿಳೆಯರಲ್ಲಿ ಇತರ ಮಹಿಳೆಯರಿಗಿಂತ ಹೆಚ್ಚು ಜೆಸ್ಟೇಷನಲ್ ಡಯಾಬಿಟಿಸ್ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ವಾಸ್ತವದಲ್ಲಿ, ಈ ಹಿಂದೆ ಗರ್ಭಾವಸ್ಥೆಯಲ್ಲಿ ಜೆಸ್ಟೇಷನಲ್ ಡಯಾಬಿಟಿಸ್ ಕಾಣಿಸಿಕೊಂಡ 20% ರಿಂದ 50% ರಷ್ಟು ಮಹಿಳೆಯರಲ್ಲಿ ಮುಂದೆ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಇರುತ್ತದೆ.[3]

ಜೆಸ್ಟೇಷನಲ್ ಡಯಾಬಿಟಿಸ್ ಕುರಿತು ಪ್ರತಿ ಗರ್ಭಿಣಿ ಮಹಿಳೆಯು ಓರಲ್ ಗ್ಲುಕೋಸ್ ಸಹಿಷ್ಣುತೆ ಪರೀಕ್ಷೆಗಳಿಗೆ ಒಳಗಾಗಬೇಕೆಂದು ಹೆಚ್ಚು ಶಿಫಾರಸು ಮಾಡಲಾಗಿದೆ. ಸರಿಯಾದ ಆಹಾರಕ್ರಮ, ವ್ಯಾಯಾಮ ಮತ್ತು ಔಷಧೋಪಚಾರದಿಂದ ಜೆಸ್ಟೇಷನಲ್ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡಬಹುದು.

ಗರ್ಭಧಾರಣೆ ಮತ್ತು ಡಯಾಬಿಟಿಸ್:

ಯಾವುದೇ ಮಹಿಳೆಗೆ ಡಯಾಬಿಟಿಸ್ ಇದ್ದರೆ, ಆಕೆ ಗರ್ಭಿಣಿ ಆಗುವ ಮುಂಚೆ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮೊದಲು ಆಕೆ ಮಾಡಬೇಕಾದ ಕೆಲಸವೆಂದರೆ, ಗರ್ಭಧಾರಣೆಗೆ ಮುಂಚೆ ಆಕೆಯ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸುವುದು, ಇದರಿಂದ ಆಕೆಯ ಮಗುವು ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಗರ್ಭಾವಸ್ಥೆಯ ಸಮಯದಲ್ಲಿ, ಆಕೆ ತನ್ನ ರಕ್ತದ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ಸಮರ್ಪಕವಾದ ಆಹಾರಕ್ರಮ ಮತ್ತು ವ್ಯಾಯಾಮದ ಕ್ರಮಗಳನ್ನು ಕೂಡ ಪಾಲಿಸಬೇಕಾಗುತ್ತದೆ. ಸಕ್ಕರೆ ಮಟ್ಟಗಳನ್ನು ಚೆನ್ನಾಗಿ ನಿಯಂತ್ರಣದಲ್ಲಿಡಲು ಇನ್ಸುಲಿನ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳಲು ಡಯಾಬಿಟೋಲಜಿಸ್ಟ್ ಅವರೊಂದಿಗೆ ನಿಯಮಿತ ಭೇಟಿಗಳು ಮತ್ತು ಫಾಲೋ-ಅಪ್ ಸೆಷನ್‍ಗಳು ಬೇಕೆ ಬೇಕು.

ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿಯರ ರಕ್ತದ ಸಕ್ಕರೆ ಮಟ್ಟವು ಅಧಿಕವಾಗಿದ್ದರೆ, ಅವರ ಮಗುವು ಈ ಕೆಳಕಂಡ ಸಮಸ್ಯೆಗಳನ್ನು ಬೆಳೆಸಿಕೊಳ್ಳಬಹುದು:

  • ಮ್ಯಾಕ್ರೋಸೋಮಿಯ – ಸಾಮಾನ್ಯಕ್ಕಿಂತ ದೊಡ್ಡ ತಲೆಯ ಮಗು ಹುಟ್ಟುವುದು
  • ಅಧಿಕ ತೂಕವನ್ನು ಹೊಂದಿರುವ ಮಗು
  • ಹೃದಯದ ದೋಷಗಳಂತಹ ಜನ್ಮಜಾತ ವೈಪರೀತ್ಯಗಳು
  • ಡಯಾಬಿಟಿಸ್ ಇರುವ ತಾಯಂದಿರಿಗೆ ಹುಟ್ಟುವ ಮಕ್ಕಳಿಗೆ ಕೂಡ ಭವಿಷ್ಯದಲ್ಲಿ ಡಯಾಬಿಟಿಸ್ ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಜೆಸ್ಟೇಷನಲ್ ಡಯಾಬಿಟಿಸ್ ಕಾಣಿಸಿಕೊಂಡ ಮಹಿಳೆಯರಿಗೆ ಜನಿಸಿದ ಮಕ್ಕಳು ಜೀವನದಲ್ಲಿ ಮುಂದೆ ಬುದ್ಧಿ ಮಾಂದ್ಯರಾಗುವ ಸಾಧ್ಯತೆ ಹೆಚ್ಚಿರುತ್ತದೆ.[4]
  • ಹುಟ್ಟುವ ಮೊದಲೇ ಮಗುವಿನ ಆಕಸ್ಮಿಕ ಸಾವು, ಅಂದರೆ ಸ್ಟಿಲ್ ಬರ್ತ್.

“ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಗರ್ಭಧಾರಣೆಯ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತವೆ, ಉದಾ., ಖಾಲಿ ಹೊಟ್ಟೆಯ ಬ್ಲಡ್ ಶುಗರ್ ಮಟ್ಟವನ್ನು 90 ಕ್ಕಿಂತ ಹೆಚ್ಚು ಮತ್ತು ಊಟದ ನಂತರದ ಬ್ಲಡ್ ಶುಗರ್ 140 ಕ್ಕಿಂತ ಹೆಚ್ಚು” ಎಂದು ಡಾ. ಪಾಠಕ್ ಹೇಳಿದ್ದಾರೆ.

ಟೈಪ್ ಡಯಾಬಿಟಿಸ್ ಇರುವ ಮಹಿಳೆಯರಲ್ಲಿ ಸಾವಿನ ಪ್ರಮಾಣ 

ಹೆಚ್ಚಿರುತ್ತದೆ ಹಾಗೂ ತೊಡಕುಗಳ ಅಪಾಯ ಕೂಡ ದುಪ್ಪಟ್ಟಾಗಿರುತ್ತದೆ:

ಡಯಾಬಿಟಿಸ್ ಅವರ ವಯಸ್ಸು, ಲಿಂಗ, ಜನಾಂಗ ಅಥವಾ ಜೀವನಶೈಲಿಯನ್ನು ಲೆಕ್ಕಿಸದೆ ಯಾರಿಗೆ ಬೇಕಾದರೂ ಬರಬಹುದಾದರೂ, ಟೈಪ್ 1 ಡಯಾಬಿಟಿಸ್‌ಗೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ ಗಂಡು ಇಲ್ಲವೇ ಹೆಣ್ಣು (ಲಿಂಗ) ವ್ಯತ್ಯಾಸಗಳಿವೆ ಎಂದು ಸಂಶೋಧನೆ ತೋರಿಸಿವೆ.

26 ಅಧ್ಯಯನಗಳಿಂದ ಬಂದ ದತ್ತಾಂಶವು ಟೈಪ್ 1 ಡಯಾಬಿಟಿಸ್ ಹೊಂದಿರುವ ಮಹಿಳೆಯರಲ್ಲಿ ಸರಿಸುಮಾರಾಗಿ 40% ಹೆಚ್ಚಿನ ಮತ್ತು ಎಲ್ಲಾ-ಕಾರಣಗಳ ಮರಣದ ಅತಿಯಾದ ಅಪಾಯವನ್ನು ಹೊಂದಿದೆ ಎಂದು ಬಹಿರಂಗಪಡಿಸಿತು. ಇಷ್ಟೇ ಅಲ್ಲ, ಟೈಪ್ 1 ಡಯಾಬಿಟಿಸ್ ಹೊಂದಿರುವ ಪುರುಷರೊಂದಿಗೆ ಹೋಲಿಸಿ ನೋಡಿದಾಗ, ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ನಾಳಗಳಿಗೆ ಸಂಬಂಧಿಸಿದ ಘಟನೆಗಳ ಸಾಧ್ಯತೆಯೂ ಎರಡು ಪಟ್ಟು ಇರುತ್ತದೆ.[5]

ವಾಸ್ತವವಾಗಿ, ಇನ್ನೊಂದು ಅಧ್ಯಯನದ ಪ್ರಕಾರ[6], ಡಯಾಬಿಟಿಸ್ ಹೊಂದಿರುವ ಮಹಿಳೆಯರ ಸಾವಿನ ಪ್ರಮಾಣದಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳನ್ನು ಕಂಡುಬರಲಿಲ್ಲ, ಆದರೆ ಕಳೆದ ಕೆಲವು ವರ್ಷಗಳಿಂದ ಪುರುಷರ ಸಾವಿನ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಡಯಾಬಿಟಿಸ್‍ಗೆ ಸಂಬಂಧಿಸಿದಂತೆ ಈ ಲಿಂಗ ವ್ಯತ್ಯಾಸಗಳಿಗೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ ಎಂದು ಅಧ್ಯಯನವು ಕಂಡುಹಿಡಿದಿದೆ:

  • ಪುರುಷರಿಗೆ ಹೋಲಿಸಿದಾಗ ಮಹಿಳೆಯರಲ್ಲಿ ಡಯಾಬಿಟಿಸ್ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಹಿಡಿಯುವುದು ಹೆಚ್ಚು ಕಷ್ಟ.
  • ಮಹಿಳೆಯರಲ್ಲಿ ಹಾರ್ಮೋನುಗಳು ಮತ್ತು ಉರಿಯೂತವು ಕಾರ್ಯನಿರ್ವಹಿಸುವ ವಿಧಾನವು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ.
  • ಮಹಿಳೆಯರು ಡಯಾಬಿಟಿಸ್‍ನ ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿರುತ್ತಾರೆ.
  • ಮಹಿಳೆಯರಲ್ಲಿ ಹೃದ್ರೋಗಗಳು ಸಹ ಪುರುಷರಿಗಿಂತ ಭಿನ್ನವಾಗಿರುತ್ತದೆ.
  • ಮಹಿಳೆಯರಿಗೆ ಹೋಲಿಸಿದರೆ ಪುರುಷರು, ಡಯಾಬಿಟಿಸ್ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯಕಾರಿ ಅಂಶಗಳಿಗೆ ಹೆಚ್ಚು ಆಕ್ರಮಣಕಾರಿ ಚಿಕಿತ್ಸೆಯನ್ನು ಪಡೆಯುತ್ತಾರೆ.

ಡಾ. ಪಾಠಕ್ ಅವರ ಪ್ರಕಾರ, “ಭಾರತದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಕೊಬ್ಬಿನಾಂಶವನ್ನು ಹೊಂದಿರುವ ಕಾರಣ, ಅವರ ಸಾವಿನ ಪ್ರಮಾಣ ಹೆಚ್ಚಿದ್ದು, ದುಪ್ಪಟ್ಟು ತೊಂದರೆಗೊಳಗಾಗುತ್ತಾರೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಆಹಾರಕ್ರಮವನ್ನು ಸರಿಯಾಗಿ ಅನುಸರಿಸದೆ ಇರುವುದು ಮತ್ತು ಯಾವುದೇ ಜೀವನಶೈಲಿಯ ಬದಲಾವಣೆಗಳನ್ನು ಮಾಡದೆ ಔಷಧಿಗಳನ್ನು ತೆಗೆದುಕೊಳ್ಳುವುದು ಮಹಿಳೆಯರಲ್ಲಿ ಅಪಾಯಕಾರಿ ಅಂಶಗಳನ್ನು ಹೆಚ್ಚಿಸುವ ಕೆಲವು ಅಂಶಗಳಾಗಿವೆ.

ಉಲ್ಲೇಖಗಳು:

  1. Enza Gucciardi, Shirley Chi-Tyan, Margaret DeMelo, Lina Amaral, and Donna E. Stewart. Characteristics of men and women with diabetes; Observations during patients’ initial visit to a diabetes education center. Official Publication for the College of Family Physicians of Canada. February 2008. Available at: https://www.ncbi.nlm.nih.gov/pmc/articles/PMC2278314/
  2. Letícia Nascimento Medeiros Bortolon, Luciana de Paula Leão Triz, Bruna de Souza Faustino, Larissa Bianca Cunha de Sá1, Denise Rosso Tenório Wanderley Rocha, Alberto Krayyem Arbex. Gestational Diabetes Mellitus: New Diagnostic Criteria. Open Journal of Endocrine and Metabolic Diseases, 2016, 6, 13-19. Available at – https://file.scirp.org/pdf/OJEMD_2016011414330750.pdf
  3. Centers for Disease Control and Prevention. National Diabetes Fact Sheet: General Information and National Estimates on Diabetes in the United States, 2005. Atlanta, GA: US Department of Health and Human Services, Centers for Disease Control and Prevention; 2005. Available at: http://www.cdc.gov/diabetes/pubs/pdf/ndfs_2005.pdf
  4. Mann JR, Pan C, Rao GA, McDermott S, Hardin JW. Children born to diabetic mothers may be more likely to have an intellectual disability. Matern Child Health J. 2013 Jul;17(5):928-32. Available at – https://www.ncbi.nlm.nih.gov/pubmed/22798077
  5. Rachel R Huxley, Sanne A E Peters, Prof Gita D Mishra, Prof Mark Woodward. Risk of all-cause mortality and vascular events in women versus men with type 1 diabetes: a systematic review and meta-analysis. The Lancet Diabetes & Endocrinology. February 2015. Available at – http://www.thelancet.com/journals/landia/article/PIIS2213-8587%2814%2970248-7/abstract
  6. Edward W. Gregg, Qiuping Gu, Yiling J. Cheng, K. M. Venkat Narayan, Catherine C. Cowie. Mortality Trends in Men and Women with Diabetes, 1971 to 2000. Annals of Internal Medicine Logo. Available at – http://annals.org/aim/article/735918/mortality-trends-men-women-diabetes-1971-2000

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.